ಸಿರಿವಂತ ಪಂಚಾಯಿತಿಯಲ್ಲಿ ಅಭಿವೃದ್ಧಿಗೆ ಬಡತನ

Poverty for Development in Sirivanta Panchayat
Published on

ಯಮರೆಗೆ ವಾರ್ಷಿಕ 8 ಕೋಟಿ ಆದಾಯ, ಕಾನೂನು ಬಾಹಿರವಾಗಿ ಜಾಹೀರಾತು ಫಲಕ

ವಿ.ಚಕ್ರವರ್ತಿ ಸರ್ಜಾಪುರ
ಆನೇಕಲ್​ ತಾಲೂಕಿನ 28 ಗ್ರಾಮ ಪಂಚಾಯಿತಿಗಳ ಪೈಕಿ ಯಮರೆ ಪಂಚಾಯಿತಿ ಅತ್ಯಂತ ಸಿರಿವಂತ ಎನಿಸಿದೆ. ಆದರೆ, ಈ ಗ್ರಾಪಂ ವ್ಯಾಪ್ತಿಯ ಗ್ರಾಮಗಳಲ್ಲಿ ಅಭಿವೃದ್ಧಿ ತೀವ್ರ ಬಡತನ ಎದುರಿಸುತ್ತಿದೆ.
ವಾರ್ಷಿಕ ಏಳೆಂಟು ಕೋಟಿ ರೂ. ವರಮಾನವಿದ್ದರೂ ಈ ಪಂಚಾಯಿತಿ ವ್ಯಾಪ್ತಿಯ ರಸ್ತೆಗಳಲ್ಲಿ ನಿರ್ಮಾಣವಾಗಿರುವ ಗುಂಡಿಗಳನ್ನು ಮುಚ್ಚಲೂ ಹಣವಿಲ್ಲ ಎಂಬಂತೆ ಪಂಚಾಯಿತಿ ಬಡತನ ಪ್ರದರ್ಶಿಸುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಹದಗೆಟ್ಟ ರಸ್ತೆಗಳು, ಅನಧಿಕೃತ ಜಾಹಿರಾತುಗಳು, ಕೆರೆ ಒತ್ತುವರಿ ಸೇರಿ ಸಾಕಷ್ಟು ಸಮಸ್ಯೆಗಳನ್ನು ಹಾಸಿಹೊದ್ದು ಮಲಗಿದ್ದರೂ ಪಂಚಾಯಿತಿ ಜಾಣಮೌನ ಮುರಿಯುತ್ತಿಲ್ಲ.


ಅಪಾಯಕಾರಿ ಜಾಹೀರಾತು ಲಕ: ಯಮರೆ ಗ್ರಾಮ ಪಂಚಾಯಿತಿ ಆವರಣದಲ್ಲಿ ಕಾನೂನು ಬಾಹಿರವಾಗಿ ಜಾಹೀರಾತು ಫಲಕಗಳನ್ನು ಅಳವಡಿಸಲಾಗಿದ್ದು, ಗಾಳಿ, ಮಳೆಗೆ ಜಾಹೀರಾತು ಕಂಬಗಳು ಮುರಿದು ಬೀಳುವ ಆತಂಕವಿದ್ದರೂ ಗ್ರಾಪಂ ಯಾವುದೇ ಕ್ರಮಕ್ಕೂ ಮುಂದಾಗಿಲ್ಲ.


ರೋಡ್​ ಇಲ್ಲದೆ ಟ್ಯಾಕ್ಸ್​ ಇಲ್ಲ: ಯಮರೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ 8 ಗ್ರಾಮಗಳು ಒಳಪಟ್ಟಿವೆ. ಒಂದೆಡೆ ಗಗನಚುಂಬಿ ಅಪಾರ್ಟ್​ಮೆಂಟ್​ಗಳು ನಿರ್ಮಾಣವಾಗುತ್ತಿವೆ. ಆದರೆ, ರಸ್ತೆಗುಂಡಿಗಳನ್ನು ಮುಚ್ಚಲು ಮನಸ್ಸು ಮಾಡದ ಪಂಚಾಯಿತಿ ವಿರುದ್ಧ ಇತ್ತೀಚೆಗೆ ನೂರಾರು ಸಂಖ್ಯೆಯಲ್ಲಿ ಅಪಾರ್ಟ್​ಮೆಂಟ್​ ನಿವಾಸಿಗಳು ಸರ್ಜಾಪುರ&ಬೆಂಗಳೂರು ಮುಖ್ಯರಸ್ತೆಯಲ್ಲಿ ಮಾನವ ಸರಪಳಿ ನಿರ್ಮಿಸಿ "ರೋಡ್​ ಇಲ್ಲದೆ ಟ್ಯಾಕ್ಸ್​ ಇಲ್ಲ' ಎಂಬ ೂಷಣೆ ಕೂಗಿ ಪ್ರತಿಭಟಿಸಿದ್ದರೂ ಪಂಚಾಯಿತಿ ಅಧಿಕಾರಿಗಳು ಎಚ್ಚೆತ್ತಿಲ್ಲ. ಚಂಬೇನಹಳ್ಳಿ ಗ್ರಾಮದಿಂದ ನೆರಿಗಾ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣವಾಗಿ ಗುಂಡಿಗಳಿಂದ ಆವೃತವಾಗಿದೆ. ವಾಹನ ಸವಾರರು ರಸ್ತೆ ಗುಂಡಿ ತಪ್ಪಿಸಲು ಸರ್ಕಸ್​ ಮಾಡುವಂತಾಗಿದೆ.


ಮಳೆ ಬಂದರೆ ಕೆರೆ: ಬಿ.ಹೊಸಹಳ್ಳಿ ರಸ್ತೆಯ ಸಂದೀಪನಿ ಶಾಲೆಯ ಮುಂಭಾಗದಲ್ಲಿ ಮಳೆಗಾಲದಲ್ಲಿ ರಸ್ತೆ ಜಲಾವೃತಗೊಳ್ಳುತ್ತದೆ. ರಸ್ತೆ ದಾಟಲು ಪಾದಚಾರಿಗಳು ಪರದಾಡುವಂತಾಗಿದೆ. ಗುಂಡಿಯಲ್ಲಿ ನೀರು ನಿಲ್ಲುವುದರಿಂದ ಸಣ್ಣ ಕೆರೆಯಂತೆ ಕಾಣುತ್ತದೆ.


ಕೆರೆ ಒತ್ತುವರಿ: ಸೋಂಪುರ ಗ್ರಾಮದ ಕೆರೆಯನ್ನು ಬಗೆದು ಖಾಸಗಿ ಬಡಾವಣೆಗೆ ಸಾಗಲು ರಸ್ತೆ ಮಾಡಿಕೊಂಡಿದ್ದಾರೆ. ಪ್ರತಿನಿತ್ಯ ಇದೇ ರಸ್ತೆಯಲ್ಲಿ ಸಾಗುವ ಕಂದಾಯ ಇಲಾಖೆಯ ಅಧಿಕಾರಿಗಳು ಕಂಡೂ ಕಾಣದಂತಿದ್ದಾರೆ.
ತುಕ್ಕು ಹಿಡಿದ ಬಸ್​ ನಿಲ್ದಾಣ: ಯಮರೆ ಕ್ರಿಸ್ಟಲ್​ ಅಪಾರ್ಟ್​ಮೆಂಟ್​ ಬಳಿಯ ಬಸ್​ ತಂಗುದಾಣ ಸಂಪೂರ್ಣವಾಗಿ ತುಕ್ಕು ಹಿಡಿದಿದೆ ಮತ್ತು ಛಾವಣಿ ಕಿತ್ತುಹೋಗಿದೆ. ತಂಗುದಾಣದ ಸುತ್ತಲೂ ಗಿಡ&ಗಂಟಿ ಬೆಳೆದಿದ್ದು, ವಿಷ ಜಂತುಗಳ ಆಶ್ರಯತಾಣವಾಗಿ ಮಾರ್ಪಟ್ಟಿದೆ.


ನಮ್ಮ ವಾರ್ಡ್​ ನಲ್ಲಿ ಮೂಲಸೌಕರ್ಯಗಳಿಗೆ ಒತ್ತು ನೀಡಲಾಗಿದ್ದು, ಸಾರ್ವಜನಿಕರು ಸೂಚಿಸುವಂತಹ ಕೆಲಸ ಕಾರ್ಯಗಳ ಬಗ್ಗೆ ಮುಂದಿನ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಹಂತ ಹಂತವಾಗಿ ಅಭಿವೃದ್ಧಿಪಡಿಸಲಾಗುವುದು. ರಸ್ತೆ ಹದಗೆಟ್ಟಿರುವುದು ನಮ್ಮ ಗಮನದಲ್ಲಿದೆ. ಶಾಸಕರು ಮತ್ತು ಸಂಸದರನ್ನು ಭೇಟಿ ಮಾಡಿ ಅನುದಾನ ನೀಡಲು ಮನವಿ ಮಾಡಿಕೊಳ್ಳುತ್ತೇವೆ.

ಮುನಿರಾಜು ಯಮರೆ ಪಂಚಾಯಿತಿ ಸದಸ್ಯ

ರಸ್ತೆಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಇಲಾಖೆಗಳಿಗೆ ಅರ್ಜಿ ರವಾನೆ ಮಾಡಲಾಗಿದೆ. 2023&24ನೇ ಸಾಲಿನಲ್ಲಿ ಆನೇಕಲ್​ ವಿಧಾನಸಭಾ ೇತ್ರದ ಗ್ರಾಮೀಣ ರಸ್ತೆಗಳ ದುರಸ್ತಿ ಕಾಮಗಾರಿಗಳ ಕ್ರಿಯಾ ಯೋಜನೆಯಡಿ ಚಂಬೇನಹಳ್ಳಿ, ನೆರಿಗಾ ಜಂಕ್ಷನ್​ನಿಂದ ವಿ.ಕಲ್ಲಹಳ್ಳಿ ರಸ್ತೆಗೆ ಸುಮಾರು 1.62 ಕೋಟಿ ರೂಪಾಯಿ ಬಿಡುಗಡೆಯಾಗಿದ್ದು, ಅದು ಯಾವ ಹಂತದಲ್ಲಿ ಇದೆ ಎಂದು ಪರಿಶೀಲನೆ ನಡೆಸುತ್ತೇವೆ.

ಕೆ.ಕೆ.ಪ್ರವಿಣ್​ ಕುಮಾರ್​ ಪಿಡಿಒ ಯಮರೆ ಪಂಚಾಯಿತಿ

ರಸ್ತೆ ದುರಸ್ತಿ ಮಾಡಿ ಎಂದು ಸತತ ಮೂರು ವರ್ಷದಿಂದ ಗ್ರಾಪಂಗೆ ಮನವಿ ಮಾಡುತ್ತಲೇ ಬಂದಿದ್ದೇವೆ. ಆದರೆ, ಯಾರೂ ಸ್ಪಂದಿಸುತ್ತಿಲ್ಲ. ಹಾಳಾದ ರಸ್ತೆಯಲ್ಲಿ ವಾಹನ ಸಂಚಾರ ಕಷ್ಟಸಾಧ್ಯವಾಗಿದೆ. ರಸ್ತೆಯಲ್ಲಿನ ಧೂಳಿನಿಂದ ಶ್ವಾಸಕೋಶ ಸಂಬಂಧಿ ರೋಗ ಎದುರಿಸುವಂತಾಗಿದೆ.

ಹೇಮಲತಾ ಸ್ಥಳಿಯ ನಿವಾಸಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net