ಪೌರತ್ವ ತಿದ್ದುಪಡಿ ಕಾಯ್ದೆ ಪರ ಶನಿವಾರ ರಾಮನಗರದಲ್ಲಿ ಜನಾಂದೋಲನ

02-01-rama-BJP
Published on

ರಾಮನಗರ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಜನಸಾಮಾನ್ಯರಿಗೆ ನಿಜಾಂಶ ತಿಳಿಸಲು ರಾಷ್ಟ್ರೀಯ ಹಿತರಕ್ಷಣಾ ವೇದಿಕೆ ನೇತೃತ್ವದಲ್ಲಿ ವಿವಿಧ ಜನಪರ ಸಂಘಟನೆಗಳು ಜ.4ರ ಶನಿವಾರ ನಗರದಲ್ಲಿ ಬೃಹತ್ ಜನಾಂದೋಲನ ಜಾಥಾ ಹಮ್ಮಿಕೊಂಡಿವೆ ಎಂದು ಬಿಜೆಪಿ ವಕ್ತಾರ ಅಶ್ವತ್ಥನಾರಾಯಣ ತಿಳಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 10 ಗಂಟೆಗೆ ನಗರದ ಕೆಂಪೇಗೌಡ ವೃತ್ತದಿಂದ ಜಾಥಾ ಆರಂಭವಾಗಲಿದ್ದು, ಸರ್ಕಾರಿ ಬಸ್ ನಿಲ್ದಾಣ, ಹಳೇ ಬಸ್ ನಿಲ್ದಾಣ, ಮುಖ್ಯರಸ್ತೆ, ಎಂ.ಜಿ.ರಸ್ತೆ, ಕಾಮನಗುಡಿ ವೃತ್ತ ಮಾರ್ಗವಾಗಿ ಪಿಡಬ್ಲ್ಯುಡಿ ವೃತ್ತದಲ್ಲಿ ಹಾದು ಸರ್ಕಾರಿ ಕಾಲೇಜು ಮೈದಾನದಲ್ಲಿ ಸಮಾವೇಶಗೊಳ್ಳಲಿದೆ ಎಂದರು.

ಸಂಸತ್‌ನಲ್ಲಿ ಅಂಗೀಕಾರವಾಗಿರುವ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಕಾಂಗ್ರೆಸ್ ಹಾಗೂ ಎಡಪಕ್ಷಗಳು ಈಗ ವಿರೋಧಿಸುತ್ತಿವೆ. ಆದರೆ, ಕಾಯ್ದೆ ಅನುಷ್ಠಾನಕ್ಕೂ ಮುನ್ನ ಪ್ರಮುಖ ರಾಜಕೀಯ ಪಕ್ಷಗಳ ನಾಯಕರನ್ನು ಒಳಗೊಂಡ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ರಚಿಸಲಾಗಿತ್ತು. ಆಗ ಯಾವುದೇ ವಿರೋಧ ತೋರದ ಪ್ರತಿಪಕ್ಷಗಳು, ಬಿಜೆಪಿ ಸರ್ಕಾರದ ಜನಪರ ಯೋಜನೆಗಳನ್ನು ಜೀರ್ಣಿಸಿಕೊಳ್ಳಲಾಗದೆ ವಿನಾಕಾರಣ ಆರೋಪ ಮಾಡುತ್ತಿವೆ ಎಂದರು.

ಸಿಎಎ ವಿರೋಧಿಸಿ ದೇಶದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳ ಹಿಂದೆ ಕಾಂಗ್ರೆಸ್ ಮತ್ತು ಎಡಪಕ್ಷಗಳ ಕೈವಾಡವಿದ್ದು, ಅಲ್ಪಸಂಖ್ಯಾತ ಯುವಕರು ಮತ್ತು ವಿದ್ಯಾರ್ಥಿಗಳನ್ನು ಎತ್ತಿಕಟ್ಟಿ ಪ್ರತಿಭಟನೆ ಮೂಲಕ ದಾರಿತಪ್ಪಿಸುವ ಕೆಲಸ ಮಾಡುತ್ತಿವೆ. ಈ ಹಿನ್ನೆಲೆಯಲ್ಲಿ ವಾಸ್ತವಾಂಶ ತಿಳಿಸಲು ರಾಷ್ಟ್ರೀಯ ಹಿತರಕ್ಷಣಾ ವೇದಿಕೆ ನೇತೃತ್ವದಲ್ಲಿ ಜನಾಂದೋಲನ ಹಮ್ಮಿಕೊಳ್ಳಲಾಗಿದೆ. ಜನಸಾಮಾನ್ಯರು ಸ್ವಯಂ ಪ್ರೇರಿತರಾಗಿ ಆಂದೋಲನದಲ್ಲಿ ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು. ಬಿಜೆಪಿ ಮುಖಂಡರಾದ ಚಂದ್ರಶೇಖರರೆಡ್ಡಿ, ರುದ್ರದೇವರು, ಗೋಪಾಲ್, ಪಿ. ಶಿವಾನಂದ, ರಾಮಣ್ಣ, ಬಾಲರಾಜು, ಚನ್ನಪ್ಪ, ಕಾಳಯ್ಯ ಇದ್ದರು.

ಡಿಕೆಶಿ ರಾಜಕೀಯ ನಾಟಕ ನಿಲ್ಲಿಸಲಿ: ಕಪಾಲ ಬೆಟ್ಟದಲ್ಲಿ ಮುನೇಶ್ವರ ದೇವಸ್ಥಾನವಿದೆ. ಬೆಟ್ಟದ ಪ್ರದೇಶದಲ್ಲಿ ಚರ್ಚ್ ನಿರ್ಮಾಣ ಮಾಡಲು ಹೊರಟಿರುವ ಡಿ.ಕೆ.ಶಿವಕುಮಾರ್ ಬಾಬರ್ ಸಂತತಿಯವರು ಎಂದು ಅಶ್ವತ್ಥನಾರಾಯಣ ಕಿಡಿಕಾರಿದರು. ಬಾಬರ್ ಸಂತತಿಯವರು ದೇವಸ್ಥಾನದ ಮೇಲೆ ಮಸೀದಿ ನಿರ್ಮಾಣ ಮಾಡಿದ್ದರು ಎಂದು ಇತಿಹಾಸ ಹೇಳುತ್ತದೆ. ಈಗ ಡಿ.ಕೆ. ಶಿವಕುಮಾರ್ ಅವರು ಮುನೇಶ್ವರ ದೇವಸ್ಥಾನದ ಮೇಲೆ ಚರ್ಚ್ ನಿರ್ಮಿಸಲು ಹೊರಟಿದ್ದಾರೆ. ಅವರಿಗೆ ದೇವರ ಶಾಪ ಖಂಡಿತ ತಟ್ಟುತ್ತೆ ಎಂದರು. ಕಪಾಲಬೆಟ್ಟ 60ರಿಂದ 70 ಎಕರೆ ಪ್ರದೇಶದಲ್ಲಿದೆ. 10 ಎಕರೆಯಲ್ಲಿ ಪತ್ರಿಮೆ ನಿರ್ಮಾಣ ಎಂದು ನಾಟಕವಾಡುತ್ತಿದ್ದಾರೆ. ಬೆಟ್ಟದ ಸುತ್ತಮುತ್ತ ನೂರಾರು ಎಕರೆ ಅಮೂಲ್ಯವಾದ ಅರಣ್ಯ ಪ್ರದೇಶವಿದೆ. ಬಹುಸಂಖ್ಯಾತ ಜನರ ನಂಬಿಕೆಗಳನ್ನು ಧಿಕ್ಕರಿಸಿ ಯೇಸು ಪ್ರತಿಮೆ ನಿರ್ಮಾಣ ಮಾಡುವುದು ಸರಿಯಲ್ಲ ಎಂದರು. ಜನರು ಮೂರು ಕಲ್ಲಿಟ್ಟು ಅದನ್ನು ಮುನೇಶ್ವರ ಎಂದು ನಂಬಿ ಪೂಜಿಸುತ್ತಾರೆ. ರಾಜಕೀಯ ಜೀವನಕ್ಕಾಗಿ ಡಿ.ಕೆ. ಶಿವಕುಮಾರ್ ನಾಟಕ ಆಡುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net