ಪೌರಕಾರ್ಮಿಕರ ಮುಷ್ಕರ ಅಂತ್ಯ

oplus_0
oplus_0
Published on

ಹುಬ್ಬಳ್ಳಿ: ಇಲ್ಲಿಯ ಮಹಾನಗರ ಪಾಲಿಕೆ ಮುಂದೆ ಪೌರ ಕಾರ್ಮಿಕರು 10 ದಿನಗಳಿಂದ ನಡೆಸುತ್ತಿದ್ದ ಮುಷ್ಕರವು, ಶಾಸಕ ಮಹೇಶ ಟೆಂಗಿನಕಾಯಿ ಹಾಗೂ ಮೇಯರ್ ರಾಮಣ್ಣ ಬಡಿಗೇರ ಅವರ ಭರವಸೆ ಮೇರೆಗೆ ಶನಿವಾರ ಅಂತ್ಯಕಂಡಿತು.
ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಪೌರಕಾರ್ಮಿಕರಿಗೆ ನೇರ ವೇತನ ಪಾವತಿ ಸೇರಿದಂತೆ ಹಲವು ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಕಳೆದ 10 ದಿನಗಳಿಂದ ಧರಣಿ ನಡೆಸುತ್ತಿರುವುದು ಗಮನಕ್ಕೆ ಬಂದಿದೆ. ಬೆಂಗಳೂರಿನಲ್ಲಿ ಅಧಿವೇಶನವಿದ್ದ ಕಾರಣ ಬರಲಾಗಲಿಲ್ಲ. ಪೌರಕಾರ್ಮಿಕರ ಸಮಸ್ಯೆಗಳ ಕುರಿತು ಅಧಿವೇಶನದಲ್ಲಿ ಚರ್ಚಿಸಲು ಸಮಯ ಕೇಳಲಾಗಿತ್ತು. ಆದರೆ, ಸಮಯ ದೊರೆಯಲಿಲ್ಲ. ನಿಮ್ಮೆಲ್ಲ ಬೇಡಿಕೆ ಈಡೇರಿಕೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಕೂಡಲೇ ಪಾಲಿಕೆ ಆಯುಕ್ತರು, ಮೇಯರ್‌ಗೆ ನಿರ್ದೇಶನ ನೀಡಲಾಗುವುದು ಎಂದರು.
ಬೇಡಿಕೆಗಳಲ್ಲಿ ಕೆಲವು ಸರ್ಕಾರದ ಮಟ್ಟದಲ್ಲಿವೆ. ಇಂತವುಗಳನ್ನು ಸಂಬಂಧಿಸಿದ ಸಚಿವರೊಂದಿಗೆ ಮಾತುಕತೆ ನಡೆಸಿ ಪರಿಹರಿಸುವ ಕಾರ್ಯ ಮಾಡಲಾಗುವುದು. ಇದರೊಂದಿಗೆ ಪೌರಕಾರ್ಮಿಕರೂ ತಮಗೆ ನೀಡಲಾಗಿರುವ ನಿಗದಿತ ವೇಳೆಗೆ ಸ್ಥಳಕ್ಕೆ ತೆರಳಿ ಸ್ವಚ್ಛತಾ ಕಾರ್ಯ ಕೈಗೊಳ್ಳುವ ಮೂಲಕ ನಗರದ ಸೌಂದರ್ಯ ಕಾಪಾಡಬೇಕು. ಕೂಡಲೇ ಧರಣಿ ಕೈಬಿಡುವಂತೆ ವಿನಂತಿಸಿದರು.
ಪಾಲಿಕೆ ಮೇಯರ್ ರಾಮಣ್ಣ ಬಡಿಗೇರ ಮಾತನಾಡಿ, ಧರಣಿ ನಡೆದ 2ನೇ ದಿನದಂದೇ ಸ್ಥಳಕ್ಕೆ ಆಗಮಿಸಿ ಪೌರಕಾರ್ಮಿಕರ ಸಮಸ್ಯೆ ಕುರಿತು ಆಲಿಸಿದ್ದೆ. 15 ದಿನಗಳಲ್ಲಿ 134 ಪೌರಕಾರ್ಮಿಕರ ನೇರ ನೇಮಕಾತಿ ಮಾಡಿಕೊಂಡು ಆದೇಶ ಪತ್ರ ನೀಡಲಾಗುವುದು. 799 ಪೌರಕಾರ್ಮಿಕರಿಗೆ ನೇರ ವೇತನ ಪಾವತಿಸಲು ನಿಯೋಗದೊಂದಿಗೆ ತೆರಳಿ ರಾಜ್ಯ ಸರ್ಕಾರದ ಅನುಮೋದನೆ ಪಡೆಯಲಾಗುವುದು ಎಂದು ಭರವಸೆ ನೀಡಿದರು. ಪೌರಕಾರ್ಮಿಕರಿಗೆ ಗುಣಮಟ್ಟದ ಉಪಹಾರ ಪೂರೈಸಲು ಖಾಸಗಿ ಸಂಸ್ಥೆಗೆ ನೀಡುವುದು ಸೇರಿದಂತೆ ಎಲ್ಲ ಬೇಡಿಕೆಗಳನ್ನು ಹಂತಹಂತವಾಗಿ ಈಡೇರಿಸುವ ಭರವಸೆ ನೀಡಿದರು.
ಇವರಿಬ್ಬರ ಭರವಸೆಯಿಂದ ಸಂತೃಪ್ತಿಗೊಂಡ ಪೌರಕಾರ್ಮಿಕರು ಹಾಗೂ ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ವಿಜಯ ಗುಂಟ್ರಾಳ ಅವರು ಎಳನೀರು ಕುಡಿಯುವ ಮೂಲಕ ಮುಷ್ಕರ ಕೈಬಿಟ್ಟರು.
ಉಪ ಮೇಯರ್ ದುರ್ಗಮ್ಮ ಬಿಜವಾಡ, ಮಾಜಿ ಮಹಾಪೌರ ವೀಣಾ ಬರದ್ವಾಡ, ಸಭಾನಾಯಕ ವೀರಣ್ಣ ಸವಡಿ, ಪಾಲಿಕೆ ಸದಸ್ಯರಾದ ತಿಪ್ಪಣ್ಣ ಮಜ್ಜಗಿ, ಸಂತೋಷ ಚವ್ಹಾಣ, ರಾಜಣ್ಣ ಕೊರವಿ, ಬೀರಪ್ಪ ಖಂಡೇಕರ, ರೂಪಾ ಶೆಟ್ಟಿ, ಪ್ರಮುಖರಾದ ಮಹಾದೇವಪ್ಪ ನರಗುಂದ, ಬಸಪ್ಪ ಮಾದರ, ಹೊನ್ನಪ್ಪ ದೇವಗೇರಿ, ನಿಂಗಪ್ಪ ಮೊರಬದ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net