ಸೇವೆ ಪರಿಗಣಿಸಿ ಸೌಲಭ್ಯ ಕಲ್ಪಿಸಲಿ: ಪೌರಕಾರ್ಮಿಕರ ಮಹಾಸಂಘದ ರಾಜ್ಯಾಧ್ಯಕ್ಷ ನಾರಾಯಣ ಆಗ್ರಹ

Pourakarmika Maha Sangha Press Conference Mandya
Published on

ಮಂಡ್ಯ: ಜಿಲ್ಲೆಯಲ್ಲಿ ಗುತ್ತಿಗೆ ಹಾಗೂ ಹೊರಗುತ್ತಿಗೆ ಮತ್ತು ನೇರ ಪಾವತಿಯಡಿ ಕರ್ತವ್ಯ ನಿರ್ವಹಿಸುತ್ತಿರುವ ಪೌರಕಾರ್ಮಿಕ, ವಾಹನ ಲೋಡರ್ಸ್, ಕ್ಲೀನರ್ಸ್ ಹಾಗೂ ಚಾಲಕರ ವಿವಿಧ ಬೇಡಿಕೆ ಈಡೇರಿಸಬೇಕೆಂದು ನಗರ ಪಾಲಿಕೆ, ನಗರಸಭೆ, ಪುರಸಭೆಗಳ ಪೌರಕಾರ್ಮಿಕರ ಮಹಾಸಂಘದ ರಾಜ್ಯಾಧ್ಯಕ್ಷ ನಾರಾಯಣ ಒತ್ತಾಯಿಸಿದರು.

ಗುತ್ತಿಗೆ ಹಾಗೂ ನೇರಪಾವತಿಯಡಿ ಸುಮಾರು 20 ವರ್ಷದಿಂದ ಪೌರಕಾರ್ಮಿಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದಾಗ್ಯೂ ಅವರ ಸೇವೆ ಪರಿಗಣಿಸದೇ ಇರುವ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಹಾಗೂ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸುವಂತೆ ಗುರುವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.

ನೇರ ಪಾವತಿಯಲ್ಲಿ ಕರ್ತವ್ಯ ನಿರ್ವಹಿಸುವ ಪೌರ ಕಾರ್ಮಿಕರ ಜೇಷ್ಠತಾ ಪಟ್ಟಿ ತಯಾರಿಸಿ, ಹೆಚ್ಚು ಸೇವೆ ಸಲ್ಲಿಸಿದ ಪೌರಕಾರ್ಮಿಕರನ್ನು ಖಾಯಂಗೊಳಿಸಲು ಆದ್ಯತೆ ನೀಡಬೇಕು. ಅನಾರೋಗ್ಯಕ್ಕೆ ತುತ್ತಾದಾಗ ಆಸ್ಪತ್ರೆಯ ವೆಚ್ಚ ಭರಿಸಲು ಹಣ ರಹಿತ ಕಾರ್ಡ್ ವ್ಯವಸ್ಥೆ, ಸಂಕಷ್ಟ ಭತ್ಯೆ ನೀಡಬೇಕು. ಚಾಮರಾಜನಗರ, ಗುಂಡ್ಲುಪೇಟೆ, ಚಿಕ್ಕಬಳ್ಳಾಪುರದಂತೆ ನಗರದ 5 ಕಿ.ಮೀ ವ್ಯಾಪ್ತಿಯಲ್ಲಿ ನಿವೇಶನ ಕೊಡಬೇಕು. ಪೌರ ಕಾರ್ಮಿಕರ ಕಾಲನಿಯಲ್ಲಿನ 28 ಮನೆಗೆ ಹಕ್ಕುಪತ್ರ ಮಾಡಿಕೊಡುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಬಜೆಟ್ ಘೋಷಣೆಯ ಮೂಲಕ ಈಡೇರಿಸುವಂತೆ ಆಗ್ರಹಿಸಿದರು.

ಸಂಘದ ರಾಜ್ಯ ಉಪಾಧ್ಯಕ್ಷ ಆರ್.ಶಿವಣ್ಣ, ಸಂಚಾಲಕ ಆರ್.ವಾಸು, ಜಿಲ್ಲಾಧ್ಯಕ್ಷ ಗಣೇಶ್, ನಾಗರಾಜು, ಶಿವಕುಮಾರ್, ಗಣೇಶ್, ಶ್ರೀನಿವಾಸ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net