

ಮಂಡ್ಯ: ನಮ್ಮ ಸರ್ಕಾರ ಪೌರ ಕಾರ್ಮಿಕರ ಹಿತ ಕಾಪಾಡಲು ಬದ್ಧವಾಗಿದೆ. ಅದರಂತೆ ಶೀಘ್ರದಲ್ಲೇ ಕಾರ್ಮಿಕರಿಗೆ ಬ್ಯಾಂಕ್ ಖಾತೆಗೆ ನೇರ ವೇತನ ಪಾವತಿಗೆ ಕ್ರಮ ವಹಿಸಲಾಗುವುದು ಎಂದು ಶಾಸಕ ರವಿಕುಮಾರ್ ಗಣಿಗ ತಿಳಿಸಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ನಗರಸಭೆ ಸಹಯೋಗದಲ್ಲಿ ಆಯೋಜಿಸಿದ್ದ ಪೌರಕಾರ್ಮಿಕರ ದಿನಾಚರಣೆ ಹಾಗೂ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಹಲವು ದಿನಗಳ ಬೇಡಿಕೆಯಾದ ಪೌರಕಾರ್ಮಿಕರಿಗೆ ನೇರ ವೇತನ ಪಾವತಿ ಸಂಬಂಧ ಕಡತ ಈಗಾಗಲೇ ಸರ್ಕಾರದ ಮುಂದಿದೆ. ಶೀಘ್ರದಲ್ಲೆ ಈ ಸಮಸ್ಯೆಗೆ ಬಗೆಹರಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪೌರ ಕಾರ್ಮಿಕರಿಲ್ಲದೇ ಹೋದರೆ ನಗರವನ್ನು ಸ್ವಚ್ಛತೆಯಿಂದಿಡಲು ಸಾಧ್ಯವಿಲ್ಲ. ಕರೊನಾ ಸಂದರ್ಭದಲ್ಲಿ ಪೌರ ಕಾರ್ಮಿಕರು ಮಾಡಿದ ಸೇವೆಯನ್ನು ಇಡೀ ದೇಶ ನೋಡಿದೆ. ಅವರ ಸೇವೆ ಶ್ಲಾಘನೀಯ. ಸರ್ಕಾರ ನಿಮ್ಮ ಸೇವೆ ಗುರುತಿಸಿ ಸಾಕಷ್ಟು ಸೌಲಭ್ಯ ಕಲ್ಪಿಸುತ್ತಿದೆ. ಅದನ್ನು ಸದುಪಯೋಗಪಡಿಸಿಕೊಳ್ಳಿ. ನಗರಸಭೆ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 250 ಪೌರಕಾರ್ಮಿಕರನ್ನು ನನ್ನ ಸ್ವಂತ ಖರ್ಚಿನಲ್ಲಿ ಮೂರು ಹಂತಗಳಲ್ಲಿ ಒಂದು ದಿನದ ಪ್ರವಾಸಕ್ಕೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.
ನಗರದಲ್ಲಿ 5 ಸಾವಿರ ಮನೆಗಳ ನಿರ್ಮಾಣ ಮಾಡಲು ಗುರಿ ಹೊಂದಲಾಗಿದ್ದು, ಈಗಾಗಲೇ 600 ಮನೆ ನಿರ್ಮಿಸಲಾಗಿದೆ. ಅರ್ಹ ಫಲಾನುಭವಿಗಳನ್ನು ಗುರುತಿಸಿ ಶೀಘ್ರದಲ್ಲೇ ಹಂಚಿಕೆ ಮಾಡಲಾಗುವುದು. ಮಂಡ್ಯ ವ್ಯಾಪ್ತಿಯಲ್ಲಿ ಸರ್ಕಾರಿ ಅಥವಾ ಖಾಸಗಿ ಜಾಗ ಖರೀದಿಸಿ ಉಳಿದ 4,400 ಮನೆಗಳನ್ನು ಹಂತ ಹಂತವಾಗಿ ನಿರ್ಮಿಸಿ ಹಂಚಿಕೆ ಮಾಡಲು ಕ್ರಮ ವಹಿಸಲಾಗುವುದು. ಮುಖ್ಯವಾಗಿ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಹಕ್ಕುಪತ್ರ ವಿತರಣೆ ಮಾಡಲಾಗುವುದು. ಈಗಾಗಲೇ ಹಾಲಹಳ್ಳಿ ಸ್ಲಂನ 700 ನಿವಾಸಿಗಳಿಗೆ ವಿತರಣೆ ಮಾಡಲಾಗಿದೆ. ಮುಂದಿನ 15 ದಿನದೊಳಗೆ ಆರ್‌ಟಿಒ ಸ್ಲಂ ನಿವಾಸಿಗಳಿಗೆ ಹಕ್ಕು ಪತ್ರ ವಿತರಿಸಲಾಗುವುದು. ಇನ್ನು ಸ್ಲಂ ನಿವಾಸಿಗಳಿಗೆ ಕೊಳಚೆ ನಿರ್ಮೂಲನಾ ಮಂಡಳಿಯಿಂದ ಗಾಂಧಿನಗರದಲ್ಲಿ ನಿರ್ಮಾಣವಾಗುತ್ತಿರುವ 203 ಮನೆಗಳ ಕಾಮಗಾರಿ ಶೇ.10 ರಷ್ಟು ಮುಗಿದಿದೆ. ಉಳಿದ ಶೇ.10 ರಷ್ಟು ಕಾಮಗಾರಿ ಪೂರ್ಣಗೊಳ್ಳಲು ಫಲಾನುಭವಿಗಳು ಸ್ಲಂ ಬೋರ್ಡ್‌ಗೆ ತಲಾ 47 ಸಾವಿರ ರೂ ಪಾವತಿ ಮಾಡಬೇಕು. ಅದರಂತೆ ಫಲಾನುಭವಿಗಳ ಪರವಾಗಿ ವೈಯಕ್ತಿಕವಾಗಿ ಆರ್ಥಿಕ ನೆರವು ನೀಡುವುದಾಗಿ ಭರವಸೆ ನೀಡಿದರು.
ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, ಪ್ರತಿ ವೃತ್ತಿಗೂ ಕೂಡ ಅದರದೇ ಆದ ಘನತೆ, ಗೌರವ, ಮಹತ್ವ, ಪ್ರಾಮುಖ್ಯತೆ ಇರುತ್ತದೆ. ಅದರಲ್ಲಿ ಪೌರ ಕಾರ್ಮಿಕರ ವೃತ್ತಿಯು ವಿಶೇಷವಾಗಿದ್ದು, ಇವರ ಕೆಲಸವನ್ನ ಯಾವ ವಿಧದಲ್ಲೂ ಅಳೆಯಲಿಕ್ಕೆ ಸಾಧ್ಯವಿಲ್ಲ. ಪ್ರತಿಯೊಬ್ಬರೂ ಕೂಡ ಪೌರ ಕಾರ್ಮಿಕರ ಬಗ್ಗೆ ಅಪಾರವಾದ ಗೌರವ ಇಟ್ಟುಕೊಳ್ಳಬೇಕು. ಜತೆಗೆ ಅವರನ್ನು ಮಾತೃ ಹೃದಯದಿಂದ ನೋಡಬೇಕು. ಅವರ ಮೇಲೆ ವಿಶೇಷ ಕಾಳಜಿ, ಪ್ರೀತಿಯಿಂದ ಕಾಣಬೇಕು. ವಿಶೇಷ ಗೌರವಕ್ಕೆ ಪಾತ್ರರಾದವರು ಪೌರ ಕಾರ್ಮಿಕರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನಗರವನ್ನು ಸ್ವಚ್ಛ ಹಾಗೂ ಸುಂದರವಾಗಿಸಲು ಪೌರ ಕಾರ್ಮಿಕರ ಪರಿಶ್ರಮ ಅಗತ್ಯವಾಗಿದೆ. ಪೌರ ಕಾರ್ಮಿಕ ವೃತ್ತಿಯಲ್ಲಿ ತಮ್ಮದೇ ಆದ ಸವಾಲುಗಳಿವೆ. ಆದರೂ ಸೂರ್ಯ ಉದಯಿಸುವ ಮುನ್ನವೇ ನಗರವನ್ನು ಸ್ವಚ್ಛ ಮಾಡುವ ಕೆಲಸ ಮಾಡುವ ನಿಮ್ಮ ಸಾಮಾಜಿಕ ಕಳಕಳಿಯನ್ನು ಮೆಚ್ಚುವಂತದ್ದು. ಯಾರಲ್ಲಿ ಸ್ವಚ್ಛ ಮನಸ್ಸಿರುತ್ತದೆಯೋ ಅವರಿಗೆ ಮಾತ್ರ ಸ್ವಚ್ಛ ಸಮಾಜವನ್ನು ನಿರ್ಮಾಣ ಮಾಡಬೇಕೆಂಬ ಮನೋಭಾವ ಹೊಂದಿರುತ್ತಾರೆ. ಪೌರ ಕಾರ್ಮಿಕರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸಿಫ್ ಮಾತನಾಡಿ, ಪೌರ ಕಾರ್ಮಿಕರು ಪ್ರತಿಯೊಬ್ಬರ ಆರೋಗ್ಯದ ಕಾವಲುಗಾರರಾಗಿದ್ದಾರೆ. ತಮ್ಮ ಮಕ್ಕಳಿಗೆ ಒಂದು ಹೊತ್ತು ಊಟಕ್ಕೆ ಕೊರತೆಯಾದರೂ ಪರವಾಗಿಲ್ಲ, ಆದರೆ ಯಾವುದೇ ಕಾರಣಕ್ಕೂ ವಿದ್ಯಾಭ್ಯಾಸದ ಕೊರತೆಯಾಗಬಾರದು. ಅವರು ಒಳ್ಳೆಯ ಶಿಕ್ಷಣ ಪಡೆದು ಉನ್ನತ ಹುದ್ದೆಯನ್ನು ಪಡೆಯಬೇಕು. ನಿಮ್ಮ ಹಾಗೂ ಮಕ್ಕಳ ಉಜ್ವಲ ಭವಿಷ್ಯ ಮುಖ್ಯವಾಗಿದ್ದು, ಸರ್ಕಾರದ ಜೀವನ್ ಜ್ಯೋತಿ ಯೋಜನೆ, ಸುರಕ್ಷಾ ಭೀಮಾ ಯೋಜನೆ ಹಾಗೂ ಅಟಾಲ್ ಪಿಂಚಣಿ ಯೋಜನೆಗಳ ಸದುಪಯೋಗ ಪಡೆದುಕೊಳ್ಳಿ ಎಂದರು.
ನಗರಸಭೆ ಅಧ್ಯಕ್ಷ ಎಂ.ವಿ.ಪ್ರಕಾಶ್ ಮಾತನಾಡಿ, ನಗರ ಸುಂದರವಾಗಿ ಕಾಣಲು ಪೌರಕಾರ್ಮಿಕರು ಕಾರಣ. ಪ್ರತಿದಿನ ಸ್ವಚ್ಛತೆಗೆ ತೆರಳಿದಾಗ ಹೋಟೆಲ್ ಹಾಗೂ ಟೀ ಅಂಗಡಿಗಳಲ್ಲಿ ಬಳಸುವ ಪ್ಲಾಸ್ಟಿಕ್ ಅನ್ನು ನಿಮೂರ್ಲನೆ ಮಾಡುವಂತೆ ಜನರಿಗೆ ಜಾಗೃತಿ ಮೂಡಿಸಿ ಎಂದು ಸಲಹೆ ನೀಡಿದರು.
ನಗರಸಭೆ ಉಪಾಧ್ಯಕ್ಷ ಅರುಣ್‌ಕುಮಾರ್, ಸದಸ್ಯರಾದ ಎಚ್.ಎಸ್.ಮಂಜು, ಮಂಜುಳಾ, ಮೀನಾಕ್ಷಿ, ಶ್ರೀಧರ್, ರವಿಕುಮಾರ್, ಪುಟ್ಟಸ್ವಾಮಿ, ಗೀತಾ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ತುಷಾರಮಣಿ, ಪೌರಾಯುಕ್ತ ಕೃಷ್ಣಕುಮಾರ್, ಇಂಜಿನಿಯರ್ ರುದ್ರೇಗೌಡ, ಹೊರಗುತ್ತಿಗೆ ನೌಕರರ ಸಂಘದ ಅಧ್ಯಕ್ಷ ಎಂ.ಬಿ.ನಾಗಣ್ಣಗೌಡ ಇತರರಿದ್ದರು.
ಇದೇ ವೇಳೆ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ತುಷಾರಮಣಿ ತಮ್ಮ ಪಾಲಕರ ಹೆಸರಿನಲ್ಲಿ ಪೌರಕಾರ್ಮಿಕರ ಕ್ಷೇಮಾನಿಧಿಗೆ 2 ಲಕ್ಷ ರೂ ಆರ್ಥಿಕ ನೆರವು ನೀಡಿದರು. ಅಂತೆಯೇ ದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ ವಿವಿಧ ಕ್ರೀಡೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಶ್ರಮಜೀವಿ ಪೌರ ಕಾರ್ಮಿಕರನ್ನು ಸನ್ಮಾನಿಸಲಾಯಿತು. ಇದಕ್ಕೂ ಮುನ್ನ ನಗರಸಭೆಯಿಂದ ವಿ.ವಿ ರಸ್ತೆ, ಆರ್.ಪಿ ರಸ್ತೆ ಮೂಲಕ ಅಂಬೇಡ್ಕರ್ ಭವನದವರೆಗೂ ಜಾನಪದ ಕಲಾತಂಡದೊಂದಿಗೆ ಮೆರವಣಿಗೆ ನಡೆಯಿತು.