

ಶಿವಮೊಗ್ಗ: ತಾಲೂಕಿನ ಮತ್ತೋಡು ರಸ್ತೆಯಲ್ಲಿ ಭಾನುವಾರ ಬೆಳಗ್ಗೆ ಸ್ಕೂಟಿಯಲ್ಲಿ ತೆರಳುತ್ತಿದ್ದ ವ್ಯಕ್ತಿಯೊಬ್ಬರನ್ನು ಜಮೀನು ವಿವಾದದಲ್ಲಿ ಪೆಟ್ರೋಲ್ ಸುರಿದು ಜೀವಂತವಾಗಿ ಸುಟ್ಟು ಹಾಕಲಾಗಿದೆ. ಆರೋಪಿಗಳಿಬ್ಬರು ತಲೆಮರೆಸಿಕೊಂಡಿದ್ದಾರೆ.
ಬೆಳಲಕಟ್ಟೆ ಗ್ರಾಮದ ಮಹೇಶ್ವರಪ್ಪ (60) ಕೊಲೆಯಾದವರು. ಅದೇ ಗ್ರಾಮದ ಕುಮಾರಪ್ಪ ಮತ್ತು ಅವರ ಪುತ್ರ ಕಾರ್ತಿಕ್ ಬೆಂಕಿ ಹಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ ಎಂದು ಮಹೇಶ್ವರಪ್ಪ ಅವರ ಕುಟುಂಬದವರು ಆರೋಪಿಸಿದ್ದಾರೆ.
ಮಹೇಶ್ವರಪ್ಪ ಬೆಳಗ್ಗೆ ಎಂದಿನಂತೆ ತೋಟಕ್ಕೆ ತೆರಳಿ ನೀರು ಬಿಟ್ಟು ಮನೆಗೆ ಬಂದಿದ್ದರು. ಬಳಿಕ ಬಿಕ್ಕೋನಹಳ್ಳಿಯಲ್ಲಿರುವ ಮಗಳ ಮನೆಗೆ ತೆರಳಿ ಅಲ್ಲಿಂದ ಶಿವಮೊಗ್ಗದಲ್ಲಿ ಬೋರ್‌ವೆಲ್ ಮೋಟಾರ್ ಖರೀದಿಗೆಂದು 60 ಸಾವಿರ ರೂ. ಹಣ ಕೊಂಡೊಯ್ಯುತ್ತಿದ್ದರು. ಈ ವೇಳೆ ಮತ್ತೋಡು ರಸ್ತೆಯಲ್ಲಿ ಅಡ್ಡಗಟ್ಟಿದ ಕುಮಾರಪ್ಪ ಮತ್ತು ಕಾರ್ತಿಕ್ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಸುಟ್ಟ ಗಾಯಗೊಂಡಿದ್ದ ಗಂಭೀರ ಸ್ಥಿತಿಯಲ್ಲಿದ್ದ ಮಹೇಶ್ವರಪ್ಪ ಅವರನ್ನು ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಅಲ್ಲಿಂದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.
ಬೆಂಕಿಯ ಕೆನ್ನಾಲಗೆಗೆ ಕೆಲವೇ ನಿಮಿಷದಲ್ಲಿ ಮಹೇಶ್ವರಪ್ಪ ಸಂಪೂರ್ಣ ಸುಟ್ಟು ಹೋಗಿದ್ದರು. ಆದರೆ ಪ್ರಾಣ ಉಳಿಸಿಕೊಳ್ಳುವ ಸಲುವಾಗಿ ನೆಲದ ಮೇಲೆ ಹೊರಳಾಡಿ, ನರಳಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯರು ಮಹೇಶ್ವರಪ್ಪ ಅವರನ್ನು ಕೂಡಲೆ ಆಸ್ಪತ್ರೆಗೆ ಕರೆದೊಯ್ದರೂ ಪ್ರಯೋಜನ ಆಗಿಲ್ಲ. ಇನ್ನು, ಬೆಂಕಿಯ ತೀವ್ರತೆಗೆ ದ್ವಿಚಕ್ರ ವಾಹನ ಸಂಪೂರ್ಣ ಸುಟ್ಟು ಹೋಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಮಹೇಶ್ವರಪ್ಪ ಅವರು ಸ್ಥಳೀಯರ ಎದುರು ಕೃತ್ಯವೆಸಗಿದವರ ಹೆಸರು ಬಾಯ್ಬಿಟ್ಟಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.