

ಉಡುಪಿ: ಇತರ ರಾಜ್ಯಗಳಲ್ಲಿ ಹಕ್ಕಿಜ್ವರ ಕಂಡುಬಂದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಜಿಲ್ಲೆಯಲ್ಲಿ ಕಟ್ಟೆಚ್ಚರ ವಹಿಸುವಂತೆ ಸೂಚನೆ ನೀಡಿದೆ. ಅದರಂತೆ ಹೊರ ರಾಜ್ಯಗಳಿಂದ ಕೋಳಿ ಆಮದು ನಿಷೇಧಿಸಲಾಗಿದೆ. ಅಂತರ್ ಜಿಲ್ಲಾ ಸಾಗಾಟಕ್ಕೆ ಅನುಮತಿ ನೀಡಲಾಗಿದ್ದು, ಗಡಿಗಳಲ್ಲಿ ಕೋಳಿ ಸಾಗಾಟ ವಾಹನಗಳನ್ನು ತಪಾಸಣೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು.
ಜಿಲ್ಲೆಯಲ್ಲಿ 147 ಕೋಳಿ ಫಾರ್ಮ್‌ಗಳು ಕಾರ್ಯ ನಿರ್ವಹಿಸುತ್ತಿದ್ದು, ನಿಯೋಜಿತ ಅಧಿಕಾರಿಗಳು ಭೇಟಿ ನೀಡಿ ಆರೋಗ್ಯ ತಪಾಸಣೆ ನಡೆಸಲಿದ್ದಾರೆ. ಪ್ರತೀ ಕೋಳಿ ಫಾರ್ಮ್‌ಗಳಲ್ಲಿ ಸೋಡಿಯಂ ದ್ರಾವಣ ಸಿಂಪಡಿಸಬೇಕು. ಪ್ರತಿದಿನ 5 ಮಾದರಿಗಳನ್ನು ಸಂಗ್ರಹಿಸಿ ಬೆಂಗಳೂರಿನ ಪ್ರಯೋಗಾಲಯಕ್ಕೆ ರವಾನಿಸಲಾಗುವುದು. ಪಾಸಿಟಿವ್ ವರದಿ ಬಂದರೆ ಆ ಪ್ರದೇಶದ ಸುತ್ತಮುತ್ತಲಿನ 5 ಕಿ.ಮೀ. ವ್ಯಾಪ್ತಿಯಲ್ಲಿ ಬರ್ಡ್ ಕಿಲ್ಲಿಂಗ್ ಪ್ರಕ್ರಿಯೆ ಪ್ರಾರಂಭಿಸಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಕಂಟ್ರೋಲ್ ರೂಂಗೆ ಮಾಹಿತಿ ನೀಡಿ: ಸಾಕು ಪ್ರಾಣಿಗಳು, ಕೋಳಿ ಅಚಾನಕ್ಕಾಗಿ ಅನಾರೋಗ್ಯಕ್ಕೆ ಈಡಾದರೆ ಅಥವಾ ಮೃತಪಟ್ಟರೆ ಕೂಡಲೇ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರಾರಂಭಿಸಿರುವ ಕಂಟ್ರೋಲ್ ರೂಂ ಸಂಖ್ಯೆ 0820-2534024ಕ್ಕೆ ಕರೆ ಮಾಡಿ ಮಾಹಿತಿ ನೀಡಬಹುದು. ಸದ್ಯಕ್ಕೆ ಜನರು ಆತಂಕ ಪಡುವ ಅಗತ್ಯವಿಲ್ಲ. ಕೋಳಿ ಮಾಂಸವನ್ನು ಚೆನ್ನಾಗಿ ಬೇಯಿಸಿದರೆ ವೈರಸ್ ಹರಡುವುದಿಲ್ಲ. ಹಕ್ಕಿಜ್ವರವು ಕೋವಿಡ್ ರೋಗ ಲಕ್ಷಣವನ್ನೇ ಹೊಂದಿದ್ದು, ಕರೊನಾ ಮುನ್ನಚ್ಚರಿಕಾ ಕ್ರಮಗಳು ಈ ಕಾಯಿಲೆಗೂ ಅನ್ವಯವಾಗುತ್ತದೆ. ಗ್ರಾಪಂ ಮಟ್ಟದಲ್ಲಿ ಮನೆ ಮನೆಗೆ ಜಾಗೃತಿ ಕರಪತ್ರ ಹಂಚಿಕೆ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ. ಸುಧೀರ್‌ಚಂದ್ರ ಸೂಡ, ಪಶುಸಂಗೋಪನಾ ಇಲಾಖೆ ಉಪನಿರ್ದೇಶಕ ಡಾ.ಹರೀಶ್, ಸರ್ವೇಕ್ಷಣಾಧಿಕಾರಿ ಡಾ. ವಾಸುದೇವ ಉಪಾಧ್ಯಾಯ, ಜಿಲ್ಲಾಸ್ಪತ್ರೆಯ ಡಾ. ಚಂದ್ರಶೇಖರ ಅಡಿಗ, ಮಣಿಪಾಲ ಕೆಎಂಸಿ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ ಉಪಸ್ಥಿತರಿದ್ದರು.