

ಆನೇಕಲ್: ಸರ್ಜಾಪುರ&ದೊಮ್ಮಸಂದ್ರ ಮಾರ್ಗವಾಗಿ ಬೆಂಗಳೂರಿಗೆ ಹೋಗುವ ಮುತ್ತಾನಲ್ಲೂರು ಸರ್ಕಲ್ ಬಳಿ ರಸ್ತೆ ಸಂಪೂರ್ಣ ಗುಂಡಿಮಯವಾಗಿದೆ.
ರಸ್ತೆಯಲ್ಲಿ ಎಲ್ಲಿ ನೋಡಿದರೂ ಗುಂಡಿಗಳು ಇರುವುದರಿಂದ ವಾಹನ ಸವಾರರು ರಸ್ತೆಯಲ್ಲಿ ಸಂಚಾರ ಮಾಡಲು ಸಾಧ್ಯವಾಗದೆ ಪರದಾಡುವ ಸ್ಥಿತಿ ನಿರ್ಮಾಣ ಆಗಿದೆ.
ಮುತ್ತನಲ್ಲೂರು ಕ್ರಾಸ್ ಮಾರ್ಗವಾಗಿ ಬೆಂಗಳೂರಿಗೆ, ಚಂದಾಪುರಕ್ಕೆ ಬರುವ ಹಾಗೂ ದೊಮ್ಮಸಂದ್ರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದ್ದು, ಜನ ಹೈರಾಣಾಗಿದ್ದಾರೆ.
ಹಲವು ವರ್ಷಗಳಿಂದ ಇದೇ ಪರಿಸ್ಥಿತಿ ಇದ್ದರೂ ಸಂಬಂಧಪಟ್ಟ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ರಸ್ತೆ ದುರಸ್ತಿ ಮಾಡುವುದಿರಲಿ, ಕನಿಷ್ಠ ಗುಂಡಿ ಮುಚ್ಚುವ ಕೆಲಸಕ್ಕೂ ಕೈಹಾಕಿಲ್ಲ.
ಪ್ರತಿನಿತ್ಯ ಬೆಳಗ್ಗೆ ಹಾಗೂ ಸಂಜೆ ಮತ್ತು ರಾತ್ರಿ ಸಮಯದಲ್ಲಿ ಈ ರಸ್ತೆಯಲ್ಲಿ ಸಾಕಷ್ಟು ಟ್ರಾಫಿಕ್ ಜಾಮ್ ಆಗುತ್ತಿದ್ದು ಒಂದೆಡೆ ಟ್ರಾಫಿಕ್ ಕಿರಿಕಿರಿ, ಇನ್ನೊಂದೆಡೆ ರಸ್ತೆ ಗುಂಡಿಯಲ್ಲಿ ಎದ್ದು ಬಿದ್ದು ಹೋಗಬೇಕಾದ ಪರಿಸ್ಥಿತಿ, ದ್ವಿಚಕ್ರವಾಹನ ಸವಾರರಂತೂ ಈ ರಸ್ತೆಯಲ್ಲಿ ಸಂಚಾರ ಮಾಡಲು ಜೀವ ಕೈಯಲ್ಲಿ ಹಿಡಿದುಕೊಂಡಿರುತ್ತಾರೆ. ಸ್ವಲ್ಪ ಯಾಮಾರಿದರೂ ಗುಂಡಿಗಳಲ್ಲಿ ಬಿದ್ದು ಕೈ ಕಾಲು ಮುರಿದುಕೊಳ್ಳಬೇಕಾಗುತ್ತದೆ, ಸ್ಥಳಿಯರು ಹಲವಾರು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರೂ ಪ್ರಯೋಜನ ಆಗಿಲ್ಲ.
ಶಾಲಾ , ಕಾಲೇಜು ವಾಹನಗಳ ಪರದಾಟ
ಈ ಭಾಗದಲ್ಲಿ ಅತಿ ಹೆಚ್ಚು ಖಾಸಗಿ ಶಾಲೆ ಹಾಗೂ ಕಾಲೇಜುಗಳು ಇದ್ದು, ಬೆಳಗ್ಗೆ ಹಾಗೂ ಸಂಜೆ ಸಮಯದಲ್ಲಿ ವಿದ್ಯಾರ್ಥಿಗಳನ್ನು ಕರೆದೊಯ್ಯುವ ವಾಹನ ಚಾಲಕರು ಗಂಟೆಗಟ್ಟಲೆ ರಸ್ತೆಯಲ್ಲಿ ನಿಧಾನವಾಗಿ ಸಂಚಾರ ಮಾಡಬೇಕಾದ ಪರಿಸ್ಥಿತಿ ನಿರ್ಮಾಣ ಆಗಿದೆ.
ಬೆಂಗಳೂರು&ಸರ್ಜಾಪುರ ಮುಖ್ಯ ರಸ್ತೆ ಐಟಿ&ಬಿಟಿ ಉದ್ಯೋಗಿಗಳು ಹಾಗೂ ಕೈಗಾರಿಕಾ ಪ್ರದೇಶಗಳು ಇದ್ದು ಪ್ರತಿದಿನ ಸಾವಿರಾರು ವಾಹನಗಳು ಈ ರಸ್ತೆಯಲ್ಲಿ ಸಂಚಾರ ಮಾಡುತ್ತವೆ ಆದರೆ ಕಳೆದ ನಾಲ್ಕೆದು ವರ್ಷದಿಂದ ಇರುತ್ತೆ ಮಾತ್ರ ದುರಸ್ತಿ ಕಂಡಿಲ್ಲ. ಪ್ರತಿ ವರ್ಷ ಮಳೆ ಬಂದಾಗ ಈ ರಸ್ತೆ ಕೆಸರು ಗದ್ದೆಯಾಗುತ್ತದೆ,
ಶಾಸಕರ ಸೂಚನೆಗೂ ಕಿಮ್ಮತ್ತಿಲ್ಲ
ದೊಮ್ಮಸಂದ್ರ ವೃತ್ತದಲ್ಲಿ ಮೇಲು ಸೇತುವೆ ನಿರ್ಮಾಣ ಮಾಡಲು ಕಾಮಗಾರಿ ಕೈಗೆತ್ತಿಕೊಂಡ ಅಧಿಕಾರಿಗಳು 5 ವರ್ಷದ ಹಿಂದೆ ಅರ್ಧಕ್ಕೆ ಮೇಲ್ಸೇತುವೆ ಕೆಲಸ ನಿಲ್ಲಿಸಿದ್ದಾರೆ. ಆದರೆ ಹಲವು ವರ್ಷಗಳ ಪ್ರತಿಭಟನೆಯ ನಂತರವೂ ಈ ರಸ್ತೆ ಅರ್ಧಕ್ಕೆ ನಿಂತಿದೆ.
ದೊಮ್ಮಸಂದ್ರ, ಸರ್ಜಾಪುರ ಮತ್ತು ಮುತ್ತಾನಲ್ಲೂರು ಭಾಗದ ರಸ್ತೆಯ ಅಭಿವೃದ್ಧಿಗೆ ಹಲವು ಬಾರಿ ಸ್ಥಳಿಯ ಶಾಸಕ ಬಿ.ಶಿವಣ್ಣ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದರೂ ಪ್ರಯೋಜನವಾಗಿಲ್ಲ.
ಐದಾರು ವರ್ಷಗಳ ಸಾರ್ವಜನಿಕರ ಹೋರಾಟಕ್ಕೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ತಲೆಕೆಡಿಸಿಕೊಳ್ಳುತ್ತಿಲ್ಲ. ಪ್ರತಿದಿನವೂ ಕೂಡ ರಸ್ತೆಯಲ್ಲಿ ವಾಹನ ಸಂಚಾರರಿಗೆ ನರಕಾಯತನೇಯಾಗಿದೆ.
- ಭರತ್ ಸರ್ಜಾಪುರ ನಿವಾಸಿ
ಮುತ್ತಾನಲ್ಲೂರು ಕ್ರಾಸ್ ರಸ್ತೆ ವಿಸ್ತರಣೆಗೆ ಖಾಸಗಿ ಜಮೀನಿನ ಮಾಲೀಕರು ಕೋರ್ಟ್ನಲ್ಲಿ ದಾವೆ ಹೂಡಿದ್ದಾರೆ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಜಮೀನಿನ ಮಾಲೀಕರ ಜತೆ ಚರ್ಚಿಸಿ ರಸ್ತೆ ಅಗಲೀಕರಣ ಮಾಡಬಹುದು.
- ಉಮೇಶ್, ದೊಮ್ಮಸಂದ್ರ ಗ್ರಾಮ ಪಂಚಾಯತಿ ಮಾಜಿ ಅಧ್ಯ