

ಚಿಕ್ಕಬಳ್ಳಾಪುರ: ಕ್ಷೇತ್ರದಲ್ಲಿ ಜನರಿಗೆ ನಾಲ್ಕೆದು ತಿಂಗಳಿಗೆ 14 ವರ್ಷ ವನವಾಸದ ಅನುಭವವಾಗಿದೆ. ಹೊಸ ರಸ್ತೆ ನಿರ್ಮಾಣ ಇರಲಿ, ಹಳೇ ರಸ್ತೆಗಳಲ್ಲಿ ಗುಂಡಿಗಳನ್ನು ಮುಚ್ಚಲು ಆಗುತ್ತಿಲ್ಲ ಎಂದು ಸಂಸದ ಡಾ ಕೆ.ಸುಧಾಕರ್ ವ್ಯಂಗ್ಯವಾಡಿದರು.
ಇಲ್ಲಿನ ಜಿಲ್ಲಾಡಳಿತ ಭವನದಲ್ಲಿನ ಕಚೇರಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಇಲ್ಲಿನವರ ಆಡಳಿತವನ್ನು ನೋಡಿ, ಜನ ಬೇಸತ್ತಿ ಹೋಗಿದ್ದಾರೆ. ಏನು ಮಾಡೋದು? ಎಂದು ಪ್ರಶ್ನಿಸಿದ ಅವರು, ಯಾವುದೋ ಪೂರ್ವ ಜನ್ಮ ಸುಕೃತ ಲದಿಂದ ಜನರ ಸೇವೆ ಸಲ್ಲಿಸುವ ಅವಕಾಶ ಸಿಗುತ್ತದೆ. ಈಗಲಾದರೂ ಕ್ಷೇತ್ರದಲ್ಲಿ ಉತ್ತಮ ಆಡಳಿತ ನಿರ್ವಹಣೆ, ಅಭಿವೃದ್ಧಿ ಕೆಲಸ, ಜನರ ಸಮಸ್ಯೆಗಳ ಕಡೆಗೆ ಗಮನ ಕೊಡಲಿ ಎಂದು ಶಾಸಕ ಪ್ರದೀಪ್ ಈಶ್ವರ್‌ಗೆ ಸಲಹೆ ನೀಡಿದರು.
ಕರ್ನಾಟಕವನ್ನು ಸಂಪದ್ಭರಿತ ಪ್ರದೇಶವನ್ನಾಗಿಸಲಾಗುತ್ತಿದೆ ಎಂಬುದಾಗಿ ರಾಜ್ಯ ಸರ್ಕಾರವು ಹೇಳುತ್ತಿದೆ. ಆದರೆ, ಮಳೆಗಾಲದಲ್ಲೂ ಕೆಲ ಗ್ರಾಮಗಳಲ್ಲಿ ಜನರು ನೀರಿನ ಹಾಹಾಕಾರ ಸಮಸ್ಯೆಯಿಂದ ತೊಂದರೆ ಅನುಭವಿಸುತ್ತಿದ್ದಾರೆ. ಇದರ ನಡುವೆ ಅಧಿಕಾರಿಗಳು ಕೊಳವೆ ಬಾವಿಯನ್ನು ಕೊರೆಸಲು ಹಣ ಇಲ್ಲ ಮತ್ತು ಇದಕ್ಕೆ ಕೆಲಸ ನಿರ್ವಹಿಸಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ ಎಂದು ತಿಳಿಸಿದರು.
ಹೊಸ ರಸ್ತೆಗಳ ನಿರ್ಮಾಣ ಕೆಲಸವಾಗುತ್ತಿಲ್ಲ. ಅನುದಾನದ ಕೊರತೆ ಇದೆ. ಇನ್ನು ಹದಗೆಟ್ಟ ಹಳೇ ರಸ್ತೆಗಳಲ್ಲಿನ ಗುಂಡಿಗಳನ್ನಾದರೂ ಮುಚ್ಚಬೇಕು. ಆದರೆ, ಇದು ಸಾಧ್ಯವಾಗದಿರುವುದು ದುರದೃಷ್ಟಕರ ಎಂದು ಬೇಸರಿಸಿದರು.
ಕೋಚಿಮುಲ್ ಮಾಜಿ ನಿರ್ದೇಶಕ ಕೆ.ವಿ.ನಾಗರಾಜ್, ಜಿ.ಪಂ.ಮಾಜಿ ಅಧ್ಯಕ್ಷ ಸಿ.ಆರ್.ನರಸಿಂಹಮೂರ್ತಿ ಮತ್ತಿತರರು ಇದ್ದರು.
*ಅವರ ನಾಯಕರ ಮನೇನೇ ನೋಡಿಲ್ಲ
ಅವರಿಗೆ (ಶಾಸಕ ಪ್ರದೀಪ್ ಈಶ್ವರ್‌ಗೆ) ಜನರ ಜತೆ ಇದ್ದು ಅಭ್ಯಾಸ ಇಲ್ಲ. ಅವರ ಮನೆಯನ್ನು ನಾಯಕರೇ ನೋಡಿಲ್ಲ. ಹಾಗೆಯೇ ಮನೆ ವಿಳಾಸವೂ ಗೊತ್ತಿಲ್ಲ. ಇನ್ನೆಲ್ಲಿ ಸುಲಭವಾಗಿ ಸಿಗುತ್ತಾರೆ ಎಂದು ಸಂಸದರು ಕಿಡಿಕಾರಿದರು.
ನನ್ನ ಕರ್ತವ್ಯ ನನಗೆ ಗೊತ್ತಿದೆ. ಅವರ ಕರ್ತವ್ಯವನ್ನು ಅವರು ತಿಳಿದುಕೊಳ್ಳಲಿ, ನಾನು ಇರೋದೇ ಹೀಗೆ, ಮೊದಲಿನಿಂದಲೂ ಜನರ ಮಧ್ಯೆ ಇರುತ್ತಿದ್ದು ಅವರ ನೀಡಿದ ಬಿಕ್ಷೆ ಯಿಂದ ಅಧಿಕಾರ ಸಿಕ್ಕಿದೆ. ಭಾರಿ ಮತಗಳ ಅಂತರದಿಂದ ಗೆಲ್ಲಿಸಿ, ಸಂಸದರನ್ನಾಗಿಸಿದ್ದಾರೆ ತಿಳಿಸಿದರು.