ಕೋಣ್ಕಿ ರಸ್ತೆಯುದ್ದಕ್ಕೂ ಗುಂಡಿಗಳು

gan (5)
Published on

ರಾಘವೇಂದ್ರ ಪೈ ಕುಂದಾಪುರ ನಾಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಡಾಕೆರೆಯಿಂದ ಕೋಣ್ಕಿಗೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆ ತೀರಾ ಹದಗೆಟ್ಟಿದ್ದು, ನಿತ್ಯ ನೂರಾರು ವಾಹನಗಳು ಸಂಚರಿಸುವ ಪ್ರಮುಖ ರಸ್ತೆ ಇದಾಗಿದ್ದರೂ, ಅನೇಕ ವರ್ಷಗಳಿಂದ ಅಭಿವೃದ್ಧಿ ಕಾಣದೆ ನಿರ್ಲಕ್ಷೃಕ್ಕೊಳಗಾಗಿದೆ. ಕೋಣ್ಕಿ, ಬಡಾಕೆರೆ, ನಾಡ, ಗುಡ್ಡೆಹೋಟೆಲ್, ಮಾರಣಕಟ್ಟೆ ಕಡೆಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಇದಾಗಿದೆ. ಒಟ್ಟು 8 ಕಿ.ಮೀ. ದೂರವಿದೆ. ಈ ಪೈಕಿ ಹಿಂದಿನ ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ ಮುತುವರ್ಜಿಯಲ್ಲಿ 700 ಮೀ.ವರೆಗೆ ಕಾಂಕ್ರೀಟೀಕರಣ ಆಗಿತ್ತು. ಆದರೆ ಬಾಕಿ ಉಳಿದ 7 ಕಿ.ಮೀ.ಗೂ ಹೆಚ್ಚು ದೂರದ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ವಾಹನ ಸಂಚಾರ ದುಸ್ತರಗೊಂಡಿದೆ. ಇಲ್ಲಿ ರಸ್ತೆಯಲ್ಲಿ ಹೊಂಡವಿದೆಯೋ ಅಥವಾ ಹೊಂಡದಲ್ಲಿ ರಸ್ತೆ ಇದೆಯೋ ಎನ್ನುವಷ್ಟು ರಸ್ತೆ ಹದಗೆಟ್ಟಿದೆ. ಮಳೆಗೆ ಈ ಹೊಂಡಗಳಲ್ಲಿ ನೀರು ನಿಂತು ವಾಹನ ಸವಾರರು ಪ್ರಯಾಸಪಡುವಂತಾಗಿದೆ.

ಅಭಿವೃದ್ಧಿ ಎಂದು?:

ಈ ರಸ್ತೆಯ ಅಭಿವೃದ್ಧಿಗಾಗಿ ಇಲ್ಲಿನ ಗ್ರಾಮಸ್ಥರು ಕೆಲ ವರ್ಷದ ಹಿಂದೆ ಬೀದಿಗಿಳಿದು ಬೃಹತ್ ಪ್ರತಿಭಟನೆ ನಡೆಸಿದ್ದರು. ಆ ಬಳಿಕ ಒಂದಷ್ಟು ದೂರದವರೆಗೆ ಕಾಂಕ್ರೀಟೀಕರಣಗೊಂಡಿತ್ತು. ಅದಾಗಿ ಹಲವು ವರ್ಷಗಳೇ ಕಳೆದರೂ, ಬಾಕಿ ಉಳಿದ ರಸ್ತೆಯ ಮರು ಡಾಮರೀಕರಣ ಆಗಲಿ ಅಥವಾ ಕಾಂಕ್ರೀಟಿಕರಣ ಕಾಮಗಾರಿಯಾಗಲೀ ಯಾವುದೂ ನಡೆದಿಲ್ಲ. ಹದಿನೈದು ವರ್ಷಗಳ ಹಿಂದೆ ಈ ರಸ್ತೆ ಡಾಂಬರು ಕಂಡಿದ್ದು ಬಿಟ್ಟರೆ ಈವರೆಗೆ ಅಭಿವೃದ್ಧಿಯಾಗಿಲ್ಲ. ತಾತ್ಕಾಲಿಕವಾಗಿ ಆಗಾಗ ಗುಂಡಿಗಳಿಗೆ ಅಲ್ಲಲ್ಲಿ ತೇಪೆ ಕಾರ್ಯ ನಡೆಸಲಾಗಿದೆ.

ಬೃಹದಾಕಾರದ ಗುಂಡಿಗಳು

ಗುಂಡಿಗಳಿಗೆ ಹಾಕಿದ್ದ ತೇಪೆಯೂ ಎದ್ದು ಹೋಗಿದ್ದು, ಬೃಹದಾಕಾರದ ಗುಂಡಿಗಳು ನಿರ್ಮಾಣವಾಗಿವೆ. ಈ ಗುಂಡಿಗಳಲ್ಲಿ ಮಳೆ ನೀರು ನಿಂತು, ವಾಹನ ಸವಾರರು ಹೊಂಡ ತಪ್ಪಿಸಿ ಸಂಚರಿಸುವುದೇ ಸಾಹಸವಾಗಿದೆ. ರಾತ್ರಿ ವೇಳೆಯಂತೂ ದ್ವಿಚಕ್ರ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದುಕೊಂಡು ಸಂಚರಿಸುವಂತಾಗಿದೆ.

ನಿರ್ಲಕ್ಷೃಕ್ಕೆ ಜನರ ಆಕ್ರೋಶ

ಈ ರಸ್ತೆ ನಾಡ ಗ್ರಾಮದ 500ಕ್ಕೂ ಮಿಕ್ಕಿ ಮನೆಗಳಿಗೆ ಸಂಪರ್ಕ ಕಲ್ಪಿಸತ್ತದೆ. ಕೋಣ್ಕಿ, ಬಡಾಕೆರೆ, ಗುಡ್ಡೆಹೋಟೆಲ್ ಹೀಗೆ ಹತ್ತಾರು ಪ್ರಮುಖ ಊರುಗಳನ್ನು ಬೆಸೆಯುವ ರಸ್ತೆ ಇದಾಗಿದೆ. ಈ ಭಾಗದಿಂದ ನಿತ್ಯ ನೂರಾರು ವಿದ್ಯಾರ್ಥಿಗಳು ದೂರದ ಊರುಗಳಿಗೆ ಶಾಲಾ- ಕಾಲೇಜಿಗೆ ಹೋಗಿ ಬರುತ್ತಾರೆ. ನಿತ್ಯ ಕನಿಷ್ಠವೆಂದರೂ 700 ಮಿಕ್ಕಿ ವಾಹನಗಳು ಈ ಮಾರ್ಗದಲ್ಲಿ ಸಂಚರಿಸುತ್ತವೆ. ಪ್ರಮುಖ ರಸ್ತೆಯೊಂದು ತೀರಾ ನಾದುರಸ್ತಿಯಲ್ಲಿದ್ದರೂ ರಸ್ತೆ ಬಗ್ಗೆ ನಿರ್ಲಕ್ಷೃ ವಹಿಸಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಬೇಸಗೆಯಲ್ಲಿ ಹೊಂಡಗುಂಡಿಯ ಈ ರಸ್ತೆಯಲ್ಲಿ ಹೇಗೋ ಸಂಚರಿಸುತ್ತಿದ್ದೇವು. ಆದರೆ ಈಗ ಮಳೆ ಆರಂಭವಾದ ಬಳಿಕ ಗುಂಡಿಗಳು ಜಾಸ್ತಿಯಾಗಿವೆ. ದ್ವಿಚಕ್ರ ವಾಹನ ಸವಾರರಿಗೆ ಸಂಚರಿಸುವುದು ತುಂಬಾ ಕಷ್ಟ. ಒಂದು ಗುಂಡಿ ತಪ್ಪಿಸಿದರೆ, ಇನ್ನೊಂದು ಗುಂಡಿಗೆ ಬೀಳುವ ಪರಿಸ್ಥಿತಿಯಿದೆ. ಮರು ಡಾಮರೀಕರಣ ಆಗಲು ನಾವು ಇನ್ನೆಷ್ಟು ವರ್ಷ ಕಾಯಬೇಕೋ? ಸುಧೀರ್ ನಾಡ, ಸ್ಥಳೀಯರು https://www.vijayavani.net/demand-for-yaksha-education-from-twenty-two-schools https://www.vijayavani.net/karthik-receives-red-cross-state-award

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net