

ವಿಜಯವಾಣಿ ಸುದ್ದಿಜಾಲ ಧಾರವಾಡ
ಮಳೆಯಿಂದ ನಗರದ ಸಾಕಷ್ಟು ರಸ್ತೆಗಳು ಹಾಳಾಗಿವೆ. ಕೆಲ ಸ್ಥಳಗಳಲ್ಲಿ ರಸ್ತೆಯಲ್ಲಿ ಗುಂಡಿ ಇವೆಯೋ? ಅಥವಾ ಗುಂಡಿಯಲ್ಲೇ ರಸ್ತೆ ಇದೆಯೇ ಎಂಬುದೇ ತಿಳಿಯದಂತಾಗಿದೆ. ಜನರ ಸುಗಮ ಸಂಚಾರಕ್ಕೆ ಸಂಚಕಾರವಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ದುರಸ್ತಿ ಕಾರ್ಯಗಳಿಗೆ ತರ್ತು ಕ್ರಮ ವಹಿಸುತ್ತಿಲ್ಲ.
ನಗರದ ಮುಖ್ಯ ರಸ್ತೆಗಳನ್ನು ಕಾಂಕ್ರೀಟ್ ರಸ್ತೆಗಳನ್ನಾಗಿ ಪರಿವತಿರ್ಸಲಾಗಿದೆ. ಉಳಿದ ರಸ್ತೆಗಳ ಸ್ಥಿತಿಯಂತೂ ಹೇಳ ತೀರದಾಗಿದೆ. ಕೆಲ ಕಡೆಗಳಲ್ಲಿ ಕಾಂಕ್ರೀಟ್ ರಸ್ತೆಗಳ ಪಕ್ಕದಲ್ಲಿ ಗುಂಡಿಗಳು ನಿರ್ಮಾಣವಾಗಿ ಅಪಾಯಕ್ಕೆ ಆಹ್ವಾನ ನೀಡುವಂತಾಗಿದೆ. ಇಷ್ಟು ದಿನಗಳ ಕಾಲ ಮಳೆ ಇದೆ ಎಂಬ ನೆಪ ಇತ್ತು. ಇದೀಗ ಮಳೆ ಕಡಿಮೆಯಾಗಿ ತಿಂಗಳು ಕಳೆಯುತ್ತ ಬಂದರೂ ಪಾಲಿಕೆ ಮಾತ್ರ ಗುಂಡಿ ಮುಚ್ಚುವ ಕಾರ್ಯ ಆರಂಭಿಸಿಲ್ಲ.
ತಪೋವನ, ಹಾಶ್ಮಿನಗರ, ಮೆಹಬೂಬನಗರ, ಗೌಸಿಯಾ ಟೌನ್, ಬನಶಂಕರಿ ಬಡಾವಣೆ ಸೇರಿ ಇನ್ನೂ ಕೆಲ ಕಡೆಗಳಲ್ಲಿ ರಸ್ತೆಗಳೇ ಇಲ್ಲ. ಅಲ್ಲಿನ ಮಣ್ಣಿನ ರಸ್ತೆಗಳು ಮಳೆಗೆ ಕೆಸರು ಗದ್ದೆಯಂತಾಗಿದ್ದವು. ಈಗ ಆ ರಾಡಿ ಒಣಗಿ ಧೂಳಿನ ರೂಪ ಪಡೆದು ಸವಾರರ ಜೀವ ಹಿಂಡುತ್ತಿವೆ.
ಬಡಾವಣೆಗಳ ನಿವಾಸಿಗಳು ಡಾಂಬರ್ ಅಥವಾ ಕಾಂಕ್ರೀಟ್ ರಸ್ತೆಗಳ ನಿರ್ಮಾಣಕ್ಕೆ ಪಾಲಿಕೆ ಸದ್ಯರಿಂದ ಅಧಿಕಾರಿಗಳವರೆಗೆ ಮನವಿ ಸಲ್ಲಿಸುತ್ತಲೇ ಇದ್ದಾರೆ. ಆದರೆ ಯಾರೊಬ್ಬರೂ ಸ್ಪಂದನೆ ಮಾಡುತ್ತಿಲ್ಲ. ಇದೀಗ ಮಳೆ ನಿಂತಿದೆ. ಈಗಲಾದರೂ ಮಹಾನಗರ ಪಾಲಿಕೆ ಅಧಿಕಾರಿಗಳು ಗುಂಡಿ ಮುಚ್ಚುವ ಕಾರ್ಯ ನಡೆಸಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂಬುದು ನಿವಾಸಿಗಳ ಆಗ್ರಹ.
ಧೂಳುಮಯ ರಸ್ತೆ: ಕೆಲ ಕಡೆಗಳಲ್ಲಿ ರಸ್ತೆಗಳು ಗುಂಡಿಗಳಿಂದ ಕೂಡಿದ್ದರೆ, ಇನ್ನು ಕೆಲವೆಡೆ ಧೂಳುಮಯ ರಸ್ತೆಗಳಿಂದ ಜನರು ಹೈರಾಣಾಗಿದ್ದಾರೆ. ಕಲಘಟಗಿ ರಸ್ತೆ ಸೇರಿ ಕೆಲ ಕಡೆಗಳಲ್ಲಿ ಕಾಂಕ್ರೀಟ್ ರಸ್ತೆಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿವೆ. ಈ ಸ್ಥಳಗಳು ಧೂಳಿನಿಂದ ಕೂಡಿದ್ದು, ವಾಹನ ಸವಾರರು ಮೂಗು ಮುಚ್ಚಿಕೊಂಡೆ ಓಡಾಡುವಂತಾಗಿದೆ.
ಅರ್ಧಕ್ಕೆ ನಿಂತ ಕಾಮಗಾರಿಗಳು: ಕಾಂಕ್ರೀಟ್ ರಸ್ತೆಗಳ ನಿರ್ಮಾಣ ಕಾಮಗಾರಿ ನಡೆದಿರುವ ಕೆಲ ಕಡೆಗಳಲ್ಲಿ ಕಾಮಗಾರಿಗಳು ಅರ್ಧಕ್ಕೆ ನಿಂತಿವೆ. ನಗರದ ಮುಖ್ಯ ಅಂಚೆ ಕಚೇರಿಯಿಂದ ಹಿಂದಿ ಪ್ರಚಾರ ಸಭಾ ವೃತ್ತವರೆಗೆ ಕಾಂಕ್ರೀಟ್ ರಸ್ತೆ ಮಾಡಲಾಗುತ್ತಿದೆ. ಆದರೆ ಸುಮಾರು ತಿಂಗಳಿಂದ ಅರ್ಧಕ್ಕೆ ನಿಂತಿರುವ ಕಾಮಗಾರಿ ಇನ್ನೂ ಶುರುವಾಗಿಲ್ಲ. ಹೀಗಾಗಿ ಉಳಿದ ಅರ್ಧ ರಸ್ತೆಯಲ್ಲಿನ ಗುಂಡಿ ಮುಚ್ಚಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಗುಂಡಿ ಮುಚ್ಚಲು ಹೇಳಿದರೆ, ಕಾಂಕ್ರೀಟ್ ರಸ್ತೆ ನಿರ್ಮಾಣವಾಗಲಿದೆ ಎಂದು ಹೇಳಿ ಅಧಿಕಾರಿಗಳು ನುಣುಚಿಕೊಳ್ಳುತ್ತಿದ್ದಾರೆ.