

ಬೆಂಗಳೂರು: ರಸ್ತೆ ಗುಂಡಿಯಿಂದಾಗಿ ಸ್ಕೂಟರ್ ಸವಾರ ಕೆಳಕ್ಕೆ ಬಿದ್ದು ಮತ್ತೊಂದು ವಾಹನಕ್ಕೆ ಸಿಲುಕಿ ಸಾವನ್ನಪ್ಪಿದ ಘಟನೆಗೆ ಸಂಬಂಧಿಸಿದಂತೆ ಬೆಂಗಳೂರು ಸಂಚಾರ ಪೊಲೀಸರು ಬಿಬಿಎಂಪಿ ಅಸಿಸ್ಟೆಂಟ್ ಎಕ್ಸಿಕ್ಯುಟೀವ್ ಇಂಜಿನಿಯರ್(ಎಇಇ) ಮತ್ತು ಖಾಸಗಿ ಗುತ್ತಿಗೆದಾರನ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿದ್ದಾರೆ.
ನ.27ರ ಮಧ್ಯಾಹ್ನ 1.30ರ ವೇಳೆಗೆ ಥಣಿಸಂದ್ರ ಮುಖ್ಯರಸ್ತೆಯಲ್ಲಿ ಅಜೀಂ ಅಹ್ಮದ್(21) ಸ್ಕೂಟರ್‌ನಲ್ಲಿ ಹೆಗಡೆನಗರದ ಕಡೆಗೆ ಹೋಗುತ್ತಿದ್ದರು. ರಸ್ತೆ ಗುಂಡಿ ಗಮನಿಸದೆ ಗುಂಡಿಗೆ ಸ್ಕೂಟರ್ ಬಿಟ್ಟಾಗ ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದ್ದರು. ಅದೇ ಸಮಯಕ್ಕೆ ಹಿಂದಿನಿಂದ ಅತಿವೇಗವಾಗಿ ಬಂದ 407 ಗೂಡ್ಸ್ ವಾಹನ ಸವಾರನ ಬಲಗಾಲಿನ ತೊಡೆಯ ಮೇಲೆ ಚಲಿಸಿತ್ತು. ತೊಡೆ ಮತ್ತು ಬಲಗೈಗೆ ಗಾಯವಾಗಿ ರಕ್ತಸ್ರಾವ ಉಂಟಾದ ಅಜೀಂರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಸಂಜೆ ಅಸುನೀಗಿದ್ದರು. ಬಾಣಸವಾಡಿ ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು.
ರಸ್ತೆ ಕಾಮಗಾರಿ ಗುತ್ತಿಗೆದಾರ ಕೆಲಸ ಪೂರ್ಣ ಮಾಡಿರಲಿಲ್ಲ ಹಾಗೂ ಕಾಮಗಾರಿಯ ಉಸ್ತುವಾರಿ ಹೊಂದಿದ್ದ ಬಿಬಿಎಂಪಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಸವಿತಾ ನಿರ್ಲಕ್ಷ್ಯ ತೋರಿದ್ದಾರೆ. ಪರಿಣಾಮವಾಗಿ ರಸ್ತೆ ಗುಂಡಿಗೆ ಸ್ಕೂಟರ್ ಇಳಿಸಿದ ಸವಾರ ನಿಯಂತ್ರಣ ತಪ್ಪಿ ಕೆಳಗೆ ಬಿದ್ದು ಮೃತಪಟ್ಟಿದ್ದಾನೆ ಎಂದು ತನಿಖೆ ವೇಳೆ ಕಂಡುಬಂದಿದೆ. ಹೀಗಾಗಿ ಸುಪ್ರೀಂಕೋರ್ಟ್ ನಿಯಮಾನುಸಾರ ಪ್ರಕರಣದಲ್ಲಿ ಪಾಲಿಕೆ ಎಇಇ ಸವಿತಾ(34) ಮತ್ತು ಗುತ್ತಿಗೆದಾರನ ವಿರುದ್ಧ ಹಾಗೂ ಗೂಡ್ಸ್ ವಾಹನ ಚಾಲಕ ರವಿ(31) ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಕೇಸಿನಲ್ಲಿ ಪಾಲಿಕೆ ಅಧಿಕಾರಿಯನ್ನು 1ನೇ ಆರೋಪಿ ಮತ್ತು ಗುತ್ತಿಗೆದಾರನನ್ನು 2ನೇ ಆರೋಪಿ ಎಂದು ಹೆಸರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.