

ಚಿಕ್ಕಬಳ್ಳಾಪುರ
ಗುಣಮಟ್ಟದ ಇಳುವರಿ ಬಂದಿದ್ದರೂ ಆಲೂಗಡ್ಡೆಗೆ ಸೂಕ್ತ ಬೆಲೆ ಇಲ್ಲ. ಇದರಿಂದ ರೈತರು ಆರ್ಥಿಕ ಸಂಕಷ್ಟದ ತಲೆ ನೋವು ಅನುಭವಿಸುವಂತಾಗಿದೆ.
ಹಿಂದೆ 50 ಕೆ.ಜೆ.ಮೂಟೆಗೆ 2800 ರೂಗಳಿಂದ 3200 ರೂಗಳವರೆಗೂ ಬೆಲೆ ಇತ್ತು. ಆದರೆ, ಇದೀಗ 600 ರೂಗಳಿಂದ 1200 ರೂಗಳಿಗೆ ಕುಸಿದಿದೆ. ಭಾರಿ ಪ್ರಮಾಣದಲ್ಲಿ ಉತ್ಪನ್ನವು ಮಾರುಕಟ್ಟೆಗೆ ಪೂರೈಕೆಯಾಗುತ್ತಿದೆ. ಆದರೆ, ಸೂಕ್ತ ಬೆಲೆಯೇ ಇಲ್ಲ. ಇದರಿಂದ ಹಲವರು ಕೃಷಿ ಮಾರುಕಟ್ಟೆ ಇಲ್ಲವೇ ಖಾಸಗಿ ಗೋದಾಮುಗಳಲ್ಲಿ ಶೇಖರಿಸಿ, ಬಳಿಕ ಉತ್ತಮ ದರ ಸಿಕ್ಕಿದಾಗ ಮಾರಾಟದ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.
ಆಲೂಗಡ್ಡೆ ಬಿತ್ತನೆಗೆ ಅಕ್ಟೋಬರ್ ಸೂಕ್ತ ಕಾಲ. ಆದರೂ ರೈತರು ಡಿಸೆಂಬರ್ ಅಂತ್ಯದವರೆಗೂ ಬಿತ್ತನೆ ಕಾರ್ಯ ಕೈಗೊಳ್ಳುತ್ತಾರೆ. ಪ್ರತಿ ವರ್ಷ ಹೆಚ್ಚಿನ ಬೇಡಿಕೆ ಇರುವ ಹಿನ್ನೆಲೆಯಲ್ಲಿ ವ್ಯಾಪಾರಿಗಳು ಚಿಪ್ಸೋನಾ, ಚೆಂಬಲ್, ಪೆಪ್ಸಿ, ಜ್ಯೋತಿ ಸೇರಿ ಬಗೆಬಗೆಯ ಬಿತ್ತನೆ ಆಲೂಗಡ್ಡೆ ತಳಿಗಳನ್ನು ಲೋಡುಗಟ್ಟಲೇ ಪಂಜಾಬ್ ಸೇರಿದಂತೆ ವಿವಿಧ ಭಾಗಗಳಿಂದ ತರಿಸಿಕೊಂಡು ಒಳ್ಳೆಯ ಲಾಭ ಗಳಿಸುತ್ತಾರೆ. ಇನ್ನೂ ಜಿಲ್ಲೆಯಲ್ಲಿ ಸರಾಸರಿ 3200 ಹೆಕ್ಟೇರ್ಗಿಂತಲೂ ಹೆಚ್ಚಿನ ಪ್ರದೇಶದಲ್ಲಿ ಆಲೂಗಡೆ ಬೆಳೆಯಲಾಗುತ್ತದೆ. ಕಳೆದ ಹಿಂಗಾರಿನಲ್ಲಿ 50 ಕೆ.ಜಿ.ಮೂಟೆ ಬೆಲೆ ಕನಿಷ್ಠ 1600 ರೂಪಾಯಿಗಳಿಂದ 1900 ರೂಗಳಿಗೆ ಮಾರಾಟವಾಗಿದ್ದು ಕಡಿಮೆ ಬೆಲೆ ಸಿಕ್ಕಿದ್ದರ ಜತೆಗೆ ತೋಟಗಾರಿಕಾ ಇಲಾಖೆಯ ಮಾರ್ಗದರ್ಶನದಲ್ಲಿ ರೈತರು ಹೆಚ್ಚಿನ ಪ್ರಮಾಣದಲ್ಲಿ ಆಲೂಗಡ್ಡೆಯನ್ನು ಬೆಳೆದಿದ್ದಾರೆ.
*ದಾಸ್ತಾನಿನ ಕಡೆಗೆ ಕಸರತ್ತು
ಪ್ರಸ್ತುತ ಬೆಲೆ ಮತ್ತು ಬೇಡಿಕೆ ಕುಸಿತದಿಂದ ಕಂಗಾಲಾಗಿರುವ ರೈತರು, ಕೋಲ್ಡ್ ಸ್ಟೋರೇಜ್ಗಳಲ್ಲಿ ಲೋಡುಗಳನ್ನು ದಾಸ್ತಾನಿಟ್ಟು ಸಂರಸಿಕೊಳ್ಳಲು, ಮುಂಬರುವ ದಿನಗಳಲ್ಲಿ ಬೆಲೆ ಏರಿಕೆಯಾದಾಗ ಮಾರಾಟಕ್ಕೆ ಕಸರತ್ತು ನಡೆಸುತ್ತಿದ್ದಾರೆ. ಬೇರೆ ಭಾಗಗಳಿಂದ ಲೋಡುಗಟ್ಟಲೇ ಆಲೂಗಡ್ಡೆ ಉತ್ಪನ್ನಗಳನ್ನು ಲಾರಿ, ಟೆಂಪೋಗಳಲ್ಲಿ ತರಲಾಗುತ್ತಿದೆ. ಪ್ರಸ್ತುತ ಪ್ರಮಾಣ ಹೆಚ್ಚಿನ ರವಾನೆಯಿಂದ ಗೋದಾಮುಗಳಿಗೆ ಬೇಡಿಕೆ ಜಾಸ್ತಿಯಾಗಿದೆ. ಪ್ರತಿ ವರ್ಷದಂತೆ ಜಿಲ್ಲೆಯಲ್ಲಿ ಬಿತ್ತನೆ ಮಾಡಿದ್ದ ಆಲೂಗಡ್ಡೆ ಒಳ್ಳೆಯ ಇಳುವರಿ ಬಂದಿದೆ. ಹಿಂದೆ 50 ಕೆ.ಜಿ ಮೂಟೆಗೆ 2300 ರಿಂದ 2600 ರೂ. ಸಿಗುತ್ತಿತ್ತು. ಈಗ ಶೇ.60 ದರ ಕುಸಿದಿದೆ.