ಮಗಳ ಕೈ ಹಿಡಿದ ತಾಯಿಯ ಕುಲ ಕಸುಬು

ಪ್ರಚೀನ ಕುಮಾರಿ
ಪ್ರಚೀನ ಕುಮಾರಿ
Published on

ಪ್ರಮುಖ ಮುಖ್ಯಾಂಶಗಳು

  • ಮಡಕೆ ತಯಾರಿ, ಮಾರಾಟದಿಂದ ಜೀವನ ಕಟ್ಟಿಕೊಂಡ ಬಿ.ಕಾಂ. ಪದವೀಧರೆ
  • ವರವಾಯಿತು ಸಂಜೀವಿನಿ
ಬಂಟ್ವಾಳ: ಪರಿವರ್ತನೆಯ ಕಾಲಘಟ್ಟದಲ್ಲಿ ಕುಲಕಸುಬು ಒಂದೊಂದಾಗಿಯೇ ನಶಿಸಿ ಉದ್ಯೋಗಕ್ಕಾಗಿ ಅನ್ಯವೃತ್ತಿಯ ಹುಡುಕಾಟದಲ್ಲಿರುವ ಆಧುನಿಕ ಕಾಲದಲ್ಲಿ, ತನ್ನ ಹಿರಿಯರಿಂದ ಪಾರಂಪರಿಕವಾಗಿ ಬಂದ ಮಡಕೆ ತಯಾರಿಸಿ ಮಾರಾಟ ಮಾಡುವ ಕುಲಕಸುಬನ್ನು ಆಧಾರವಾಗಿಟ್ಟು ಬದುಕು ಕಟ್ಟಿಕೊಳ್ಳುವ ಮೂಲಕ ಮಹಿಳೆಯೊಬ್ಬರು ಸಾರ್ಥಕ್ಯ ಮೆರೆದಿದ್ದಾರೆ.
ಬಂಟ್ವಾಳ ತಾಲೂಕಿನ ವೀರಕಂಭ ಗ್ರಾಮದ ಮಜಿ ನಿವಾಸಿ ಪ್ರಚೀನ ಕುಮಾರಿ ತಾಯಿಯ ಆಶಯದಂತೆ ಕುಲಕಸುಬಿನಲ್ಲಿಯೇ ಬದುಕು ಕಟ್ಟಿಕೊಂಡವರು. ತಾಯಿಯ ಉಸಿರಾಗಿದ್ದ ಮಡಕೆ ಮಾಡುವ ವೃತ್ತಿಗೆ ಮರುಜೀವ ತುಂಬಿದವರು.
ಕಂಪ್ಯೂಟರ್ ಆಪರೇಟರ್ ವೃತ್ತಿ ಮಾಡಿಕೊಂಡಿದ್ದ ಪ್ರಚೀನ ಕುಮಾರಿ ಬಿ.ಎ. ಪದವೀಧರೆ. ಜಗನ್ನಾಥ ಎಂಬುವರ ಬಾಳಸಂಗಾತಿಯಾಗಿ ಕುಶಾಲನಗರದಲ್ಲಿ 5 ವರ್ಷ ನೆಲೆಸಿದ್ದರು. ಕರೋನಾ ಸಂದರ್ಭ ವೀರಕಂಭ ಗ್ರಾಮದ ಮಜಿಗೆ ವಾಪಸ್ಸಾಗಿ ಮಗಳ ವಿದ್ಯಾಭ್ಯಾಸ, ಮುಂದಿನ ಬದುಕಿನ ಚಿಂತನೆಯೊಂದಿಗೆ ಅಲ್ಲಿಯೇ ಉಳಿದುಕೊಂಡರು. ಅವರ ತಾಯಿ ಕುಂಬಾರಿಕೆ ವೃತ್ತಿ ಮಾಡಿಕೊಂಡು, ತಲೆಯ ಮೇಲೆ ಮಡಕೆ ಹೊತ್ತು ಮನೆಗೆ-ಮನೆಗೆ ತೆರಳಿ ವ್ಯಾಪಾರ ಮಾಡಿ ಶಿಕ್ಷಣ ನೀಡಿದ್ದರು. ಇದೇ ಪ್ರೇರಣೆ ಪಡೆದು ಈ ಕಸುಬನ್ನು ಮುಂದುವರಿಸುವ ಉದ್ದೇಶವನ್ನಿಟ್ಟುಕೊಂಡು ಮಡಕೆ ಮಾರಾಟ ಮಾಡುವ ಉದ್ಯೋಗ ಅವಲಂಭಿಸಿದರು. ಮಡಕೆ ತಯಾರಿಯೂ ತಿಳಿದಿರುವ ಪ್ರಚೀನ ಕುಮಾರಿ ಸದ್ಯ ಇತರರು ತಯಾರಿಸಿ ನೀಡುವ ಮಣ್ಣಿನ ಪರಿಕರಗಳನ್ನು ಮಾರಾಟ ಮಾಡುತ್ತಾರೆ.

ವರವಾಯಿತು ಸಂಜೀವಿನಿ

ಸ್ಥಳೀಯ ಉಮಾಮಹೇಶ್ವರಿ ಸ್ನೇಹ ಸಂಜೀವಿನಿ ಸಂಘ ಸೇರಿದ ಅವರು ಸಂಜೀವಿನಿ ಗ್ರಾಮ ಪಂಚಾಯಿತಿ ಒಕ್ಕೂಟದ ಸದಸ್ಯರಾದರು. 50 ಸಾವಿರ ರೂ. ಸಮುದಾಯ ಬಂಡವಾಳ ನಿಧಿ ಪಡೆದು ವ್ಯಾಪಾರ ಆರಂಭಿಸಿದರು. ವ್ಯಾಪಾರದಲ್ಲಿ ಅಭಿವೃದ್ಧಿ ಕಾಣುತ್ತಿದ್ದಂತೆಯೆ ಮತ್ತೆ ಒಂದೂವರೆ ಲಕ್ಷ ರೂ. ಸಾಲ ಪಡೆದು ಮಜಿಯಲ್ಲಿ ಗಂಡನ ಅಂಗಡಿಯಲ್ಲಿ ನಡೆಸುತ್ತಿದ್ದ ಮಡಕೆ ವ್ಯಾಪಾರವನ್ನು ದೊಡ್ಡಮಟ್ಟದಲ್ಲಿ ಮಾಡಲು ನಿರ್ಧರಿಸಿದರು. ಅಮೂಲ್ಯ ಎಂಬ ಹೆಸರಿನಡಿ ಅಂಗಡಿ ಆರಂಭಗೊಂಡಿತು. ಸಂಜೀವಿನಿ ಒಕ್ಕೂಟದ ಮಾಸಿಕ ಸಂತೆ ಅವರಿಗೆ ನೆರವಾಯಿತು. ಬಳಿಕ ವಾರದ ಸಂತೆಯ ಅವಕಾಶವೂ ದೊರೆಯಿತು. ವಿವಿಧ ಕಡೆ ಜಾತ್ರೆಗಳಲ್ಲಿ ಮಡಕೆ ವ್ಯಾಪಾರಕ್ಕೆ ಮುಂದಾದರು. ಜಿಲ್ಲೆಯ ವಿವಿಧ ಕಡೆ ಮಣ್ಣಿನ ಬೇರೆ ಬೇರೆ ವಸ್ತು ಮಾರಾಟ ಮಾಡಿದ್ದು ಅಂದು ಕಷ್ಟಕಾಲದಲ್ಲಿ ಕೈಹಿಡಿದ ವೃತ್ತಿ ಇಂದು ಬದುಕಿಗೆ ಹೊಸ ದಿಕ್ಕು ನೀಡಿದೆ.

ಮಡಕೆ ವ್ಯಾಪಾರದಲ್ಲಿ ಅಮ್ಮ ತುಂಬ ಕಷ್ಟಪಟ್ಟಿದ್ದಾರೆ. ಅವರ ನೆನಪಿನಲ್ಲಿ ಈಗ ನಾನು ಗಂಡನ ಸಹಕಾರದಿಂದ ಮುಂದುವರಿಸುತ್ತಿದ್ದೇನೆ. ಇದಕ್ಕೆ ಸಂಜೀವಿನಿ ನನಗೆ ಶ್ರೀ ರಕ್ಷೆಯಾಗಿದೆ. ಸಂಜೀವಿನಿ ಕೇವಲ ಸಮುದಾಯ ಬಂಡವಾಳ ನಿಧಿ ಒದಗಿಸುವುದು ಮಾತ್ರವಲ್ಲ, ಸ್ವ ಉದ್ಯೋಗಕ್ಕೆ ಪ್ರೇರಣೆ, ತರಬೇತಿ ನೀಡುವ ಸಂಘಟನೆ.

— ಪ್ರಚೀನ ಕುಮಾರಿ ಮಡಕೆ ವ್ಯಾಪಾರ ಮಾಡುವವರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net