

ಲಕ್ಷ್ಮೇಶ್ವರ: ಪಟ್ಟಣದ ಶ್ರೀ ತಾಯಿ ಪಾರ್ವತಿ ಮಕ್ಕಳ ಬಳಗದ ಎಸ್‌ಟಿಪಿಎಂಬಿ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಮಣ್ಣಿನಿಂದ ತಯಾರಿಸಿದ ವಸ್ತುಗಳಿಂದಾಗುವ ಪ್ರಯೋಜನಗಳ ಬಗ್ಗೆ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಪಟ್ಟಣದ ಜೋಳದ ಪೇಟೆಯ ಕುಂಬಾರ ಕುಟುಂಬದವರ ಮನೆಗಳಿಗೆ ವಿದ್ಯಾರ್ಥಿಗಳೊಂದಿಗೆ ಶಿಕ್ಷಕರು ಆಗಮಿಸಿ ಮಕ್ಕಳಿಗೆ ಮಣ್ಣಿನಿಂದ ಮಾಡಿದ ವಸ್ತುಗಳಿಂದ ಆಗುವ ಪ್ರಯೋಜನದ ಬಗ್ಗೆ ಪ್ರಾಯೋಗಿಕವಾಗಿ ತಿಳಿಸಿಕೊಟ್ಟರು. ಮಣ್ಣಿನ ವಸ್ತುಗಳ ಬಗ್ಗೆ ಮಕ್ಕಳು ಮಾಹಿತಿ ಪಡೆದುಕೊಂಡರು.
ಮಡಕೆಗಳನ್ನು ಸಿದ್ಧಪಡಿಸುವ ವಿರೂಪಾಕ್ಷಪ್ಪ ಕುಂಬಾರ ಮಕ್ಕಳಿಗೆ ಮಾಹಿತಿ ನೀಡಿ, ಮಣ್ಣಿನ ಪಾತ್ರೆಗಳ ಮಹತ್ವ ಕಡಿಮೆಯಾಗುತ್ತಿದೆ, ಮಣ್ಣಿನಲ್ಲಿರುವ ಶಕ್ತಿಯ ಬಗ್ಗೆ ಜನರಲ್ಲಿ ಮೊದಲಿನಂತೆ ತಿಳಿವಳಿಕೆ ಇಲ್ಲದಾಗಿದೆ. ಹಿರಿಯರು ಮಣ್ಣಿನ ಮಡಕೆಗಳಲ್ಲಿ ಅಡುಗೆಯನ್ನು ಮಾಡಿ ತಿನ್ನುತ್ತಿದ್ದರು, ಇದು ಆರೋಗ್ಯಕ್ಕೂ ಉತ್ತಮವಾಗಿರುತ್ತದೆ. ಮಣ್ಣಿನ ಮಡಕೆಗಳು ಶುಭ ಕಾರ್ಯದಲ್ಲಿ ಮತ್ತು ಅಶುಭ ಕಾರ್ಯಗಳಲ್ಲಿಯೂ ಸಹ ಹೆಚ್ಚು ಪ್ರಾಶಸ್ತ್ಯವನ್ನು ಪಡೆದುಕೊಂಡಿವೆ, ಇವುಗಳ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಶಿಕ್ಷಕರು ಉತ್ತಮ ಕಾರ್ಯ ಮಾಡುತ್ತಿದ್ದಾರೆ ಎಂದು ಹೇಳಿದರು.
ಶಿಕ್ಷಕ ಎಚ್.ಎಂ. ಕೊಂಡಾಬಂಗಿ ಮಾತನಾಡಿ, ಮಕ್ಕಳಿಗೆ 3ನೇ ತರಗತಿಯ ಪುಸ್ತಕದಲ್ಲಿ ಮಡಕೆ ಮಹತ್ವ ಎಂಬ ಪಾಠ ಇದೆ. ಮಣ್ಣಿನ ವಸ್ತುಗಳನ್ನು ಪ್ರಾಯೋಗಿಕವಾಗಿ ತೋರಿಸಲು ವಿನೂತನ ಕಾರ್ಯಕ್ರಮಕ್ಕೆ ಮುಂದಾಗಿದ್ದೇವೆ ಎಂದರು.