ಕಾಂಗ್ರೆಸ್‌ನಿಂದ ಅನರ್ಹತೆಯ ಅಸ್ತ್ರ: ಮನ್ಮುಲ್ ಚುನಾವಣೆ ಮುಂದೂಡಿಕೆ

1 (2)
Published on

ಮಂಡ್ಯ: ಜಿಲ್ಲೆಯ ಪ್ರತಿಷ್ಠಿತ ಸಹಕಾರ ಸಂಸ್ಥೆ ಮನ್‌ಮುಲ್‌ನಲ್ಲಿ ಅಧಿಕಾರ ತಪ್ಪುವ ಆತಂಕದಲ್ಲಿದ್ದ ಕಾಂಗ್ರೆಸ್ ಪಾಳಯ ಅನರ್ಹತೆಯ ಅಸ್ತ್ರವನ್ನು ಪ್ರಯೋಗಿಸಿ ಅಧ್ಯಕ್ಷರ ಆಯ್ಕೆ ಚುನಾವಣೆಯನ್ನು ಮುಂದೂಡುವ ಮೂಲಕ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡು ನಿಟ್ಟುಸಿರು ಬಿಟ್ಟಿದೆ.

ಇನ್ನು 14 ತಿಂಗಳ ಅವಧಿಗೆ ಅಧ್ಯಕ್ಷ ಸ್ಥಾನದ ಆಯ್ಕೆಗೆಂದು ಮನ್‌ಮುಲ್ ಕಚೇರಿಯಲ್ಲಿ ನಿಗದಿಯಾಗಿ ಚುನಾವಣೆಗೆ ಕೋರಂ ಕೊರತೆ ಎದುರಾದ ಹಿನ್ನೆಲೆಯಲ್ಲಿ ಒಂದು ವಾರ ಮುಂದೂಡಲಾಯಿತು. ಗಮನಾರ್ಹ ಅಂಶವೆಂದರೆ 2020ರಲ್ಲಿ ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನದ ಚುನಾವಣೆ ಸಮಯದಲ್ಲಿ ಕಾಂಗ್ರೆಸ್‌ನಿಂದ ಅಧಿಕಾರ ತಪ್ಪಿಸಲು ಬಿಜೆಪಿ ಮತ್ತು ಜೆಡಿಎಸ್ ಬಳಸಿದ್ದ ಅನರ್ಹತೆಯ ಅಸ್ತ್ರವನ್ನು ಇದೀಗ ಮನ್‌ಮುಲ್ ಚುನಾವಣೆಯಲ್ಲಿ ಕೈ ಪಾಳಯ ಉಪಯೋಗಿಸಿದೆ.

ಇಬ್ಬರ ಸದಸ್ಯತ ಅನರ್ಹ: ಬೆಳಗ್ಗೆ 9 ರಿಂದ 11 ಗಂಟೆಯೊಳಗೆ ನಾಮಪತ್ರ ಸಲ್ಲಿಸಲು ನೀಡಿದ್ದ ಕಾಲಾವಕಾಶದಲ್ಲಿ ಜೆಡಿಎಸ್ ಬೆಂಬಲಿತ ನಿರ್ದೇಶಕರಾದ ಶಾಸಕ ಎಚ್.ಟಿ.ಮಂಜು, ರಘುನಂದನ್, ನೆಲ್ಲಿಗೆರೆ ಬಾಲಕೃಷ್ಣ ಮತ್ತು ಕಾಂಗ್ರೆಸ್ ಬೆಂಬಲಿತ ಬೋರೇಗೌಡ ನಾಮಪತ್ರ ಸಲ್ಲಿಸಿದ್ದರು.

ಈ ನಡುವೆಯೇ ಕಾಂಗ್ರೆಸ್ ಜೆಡಿಎಸ್ ವಿರುದ್ಧ ಅನರ್ಹತೆಯ ಅಸ್ತ್ರದ ಪ್ರಯೋಗ ಮಾಡಿತ್ತು. ಅದರಂತೆ ಸಹಕಾರಿ ಸಂಸ್ಥೆಗೆ ನಿವೇಶನ ಖರೀದಿಸಿರುವುದು ಹಾಗೂ ಪ್ರಾಧಿಕಾರದ ಅನುಮತಿ ಪಡೆಯದೇ ಸಹಕಾರಿ ಸಂಘದ ಕಟ್ಟಡ ನಿರ್ಮಾಣ ಮಾಡಲು ಮುಂದಾಗಿರುವ ಅಂಶಗಳನ್ನು ಪರಿಗಣಿಸಿ ಮಾಜಿ ಅಧ್ಯಕ್ಷ ಬಿ.ಆರ್.ರಾಮಚಂದ್ರು ಹಾಗೂ ವಿಶ್ವನಾಥ್ ಅವರನ್ನು ಅನರ್ಹಗೊಳಿಸುವುದರ ಜತೆಗೆ ಸಹಕಾರ ಸಂಘಗಳ ಯಾವುದೇ ಸಭೆಯಲ್ಲಿ ಭಾಗವಹಿಸದಂತೆ ಸೂಚನೆಯೊಂದಿಗೆ ಮಂಡ್ಯ ತಾಲೂಕು ಸಹಕಾರ ಸಂಘಗಳ ಉಪ ನೋಂದಣಾಧಿಕಾರಿ ಹೊರಡಿಸಿದ ಆದೇಶವನ್ನು ಕಾಂಗ್ರೆಸ್ ಚುನಾವಣಾಧಿಕಾರಿಗೆ ಸಲ್ಲಿಸಿತು.

ಈ ಹಿನ್ನೆಲೆಯಲ್ಲಿ ಜೆಡಿಎಸ್ ನಿರ್ದೇಶಕರು ಮತದಾನ ಪ್ರಕ್ರಿಯೆ ದೂರ ಉಳಿದರು. ಇತ್ತ ಮಧ್ಯಾಹ್ನ 1 ಗಂಟೆಗೆ ನಿಗದಿಯಾಗಿದ್ದ ಚುನಾವಣಾ ಸಮಯಕ್ಕೆ ಯಾವುದೇ ನಿರ್ದೇಶಕರು ಹಾಜರಾಗದ ಹಿನ್ನೆಲೆಯಲ್ಲಿ ಸಹಕಾರ ಸಂಘಗಳ ಕಾಯ್ದೆಯಡಿ ಹೆಚ್ಚುವರಿಯಾಗಿ 1 ಗಂಟೆಗಳ ಕಾಲ ಚುನಾವಣಾ ಪ್ರಕ್ರಿಯೆಯನ್ನು ವಿಸ್ತರಿಸಿ ಮಧ್ಯಾಹ್ನ 2 ಗಂಟೆವರೆಗೆ ಕಾಲಾವಕಾಶ ನೀಡಲಾಗಿತ್ತು. ಆದರೂ ನಿರ್ದೇಶಕ ಡಾಲು ರವಿ ಹೊರತು ಪಡಿಸಿ ಇತರೆ ನಿರ್ದೇಶಕರು ಸಭೆಗೆ ಹಾಜರಾಗದೇ ಕೋರಂ ಕೊರತೆ ಎದುರಾದ ಹಿನ್ನೆಲೆಯಲ್ಲಿ ಸಹಕಾರ ಸಂಘಗಳ ಕಾಯ್ದೆಯಡಿ ಒಂದು ವಾರಗಳ ಕಾಲ ಅಧ್ಯಕ್ಷ ಸ್ಥಾನದ ಚುನಾವಣಾ ಪ್ರಕ್ರಿಯೆಯನ್ನು ಮುಂದೂಡಿ ಚುನಾವಣಾಧಿಕಾರಿಯೂ ಆದ ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಘೋಷಣೆ ಮಾಡಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಎಡಿಸಿ, 12 ಜನ ಚುನಾಯಿತ ಮತ್ತು ಓರ್ವ ನಾಮನಿರ್ದೇಶಿತ ನಿರ್ದೇಶಕ ಹಾಗೂ ನಾಲ್ವರು ಅಧಿಕಾರಿ ವರ್ಗದ ನಿರ್ದೇಶಕರಿಗೆ ಚುನಾವಣಾ ಪ್ರಕ್ರಿಯೆಯಲ್ಲಿ ಮತ ಚಲಾಯಿಸಲು ಅವಕಾಶವಿತ್ತು. ಅದರಂತೆಯೇ ಸಂಬಂಧಿಸಿದ ಎಲ್ಲರಿಗೂ ಲಿಖಿತವಾಗಿ ಅಂಚೆ ಮೂಲಕ ನೋಟಿಸ್ ನೀಡಲಾಗಿತ್ತು. ನಾಮಪತ್ರ ಸಲ್ಲಿಕೆ ನಂತರ ನಿಗದಿಯಾಗಿದ್ದ ಸಮಯದಲ್ಲಿ ಚುನಾವಣೆಗೆ ಆಗಮಿಸದ ಹಿನ್ನೆಲೆಯಲ್ಲಿ ಚುನಾವಣೆ ಮುಂದೂಡುವುದು ಅನಿವಾರ್ಯವಾಯಿತು. ಮುಂದಿನ 7 ದಿನಗಳೊಳಗೆ ಬಾಕಿ ಇರುವ ಚುನಾವಣಾ ಪ್ರಕ್ರಿಯೆಯನ್ನು ಮುಕ್ತಾಯಗೊಳಿಸಲಾಗುವುದು. ಈಗಾಗಲೇ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮುಗಿದಿರುವುದರಿಂದ ಮತ್ತೆ ಅವಕಾಶವಿರುವುದಿಲ್ಲವೆಂದು ಸ್ಪಷ್ಟಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net