

ಮಳವಳ್ಳಿ: ತಾಲೂಕಿನ ಚೊಟ್ಟನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಮಂಗಳವಾರ ನಿಗದಿಯಾಗಿದ್ದ ಚುನಾವಣೆ ಕೋರಂ ಕೊರತೆಯಿಂದ ಮುಂದೂಡಲಾಯಿತು.
ಇಲ್ಲಿನ ಸಂಘದ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಕ್ಕೆ ಇತ್ತೀಚಿಗೆ ಚುನಾವಣೆ ನಡೆದು 11 ನಿರ್ದೇಶಕರು ಚುನಾಯಿತರಾಗಿದ್ದರು. ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗಾಗಿ ಚುನಾವಣೆ ನಿಗದಿಪಡಿಸಲಾಗಿತ್ತು. ಅದರಂತೆ ಚುನಾವಣೆ ಪ್ರಕ್ರಿಯೆ ಪ್ರಾರಂಭವಾದಾಗ ಅಧ್ಯಕ್ಷ ಸ್ಥಾನಕ್ಕೆ ಸಿ.ಎಸ್.ಕುಮಾರ ಹಾಗೂ ಬಿ.ದಾಸೇಗೌಡ. ಉಪಾಧ್ಯಕ್ಷ ಸ್ಥಾನಕ್ಕೆ ಬಸವರಾಜು, ಚೌಡೇಶ್ವರಿ ಉಮೇದುವಾರಿಕೆ ಸಲ್ಲಿಸಿದ್ದರು. ಆದರೆ ಚುನಾವಣೆ ನಿಗದಿತ ಸಮಯ ಮುಗಿಯುವ ವೇಳೆಗೆ ಅಧ್ಯಕ್ಷ ಆಕಾಂಕ್ಷಿ ಸಿ.ಎಸ್.ಕುಮಾರ ಹಾಗೂ ಉಪಾಧ್ಯಕ್ಷ ಸ್ಥಾನದ ಆಕಾಂಕ್ಷಿ ಬಸವರಾಜು ಸೇರಿ ಆರು ನಿರ್ದೇಶಕರು ಮಾತ್ರ ಹಾಜರಾದರು. ಮತ್ತಿಬ್ಬರು ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಬಿ.ದಾಸಪ್ಪ ಹಾಗೂ ಚೌಡಮ್ಮ ಸೇರಿ ಉಳಿದ ಐದು ನಿರ್ದೇಶಕರು ಗೈರಾದ ಹಿನ್ನೆಲೆಯಲ್ಲಿ ಚುನಾವಣೆ ಮುಂದೂಡಲಾಗಿದೆ.
ಚುನಾವಣಾಧಿಕಾರಿಯಾಗಿದ್ದ ರಾಮಕೃಷ್ಣ ಮಾತನಾಡಿ, ಹಾಲು ಉತ್ಪಾದಕರ ಸಂಘಕ್ಕೆ 13 ನಿರ್ದೇಶಕ ಸ್ಥಾನವಿದ್ದು, ಇವುಗಳ ಪೈಕಿ ಒಂದು ಸ್ಥಾನ ನಾಮಿನಿ ಹಾಗೂ ಮತ್ತೊಂದು ಎಸ್ಟಿ ಮೀಸಲಿದೆ. ಇದರಲ್ಲಿ ಎಸ್ಟಿಗೆ ಷೇರುದಾರರು ಇಲ್ಲದಿರುವ ಕಾರಣ 11 ನಿರ್ದೇಶಕರು ಚುನಾಯಿಯಿತರಾಗಿದ್ದು, ಇಂದಿನ ಚುನಾವಣಾ ನಿಗದಿತ ಸಮಯದಲ್ಲಿ ಆರು ನಿರ್ದೇಶಕರಷ್ಟೇ ಭಾಗಿಯಾಗಿದ್ದರು. ಕೋರಂ ಕೊರತೆಯಿಂದ ಅನಿರ್ದಿಷ್ಟ ಅವಧಿ ಚುನಾವಣೆ ಮುಂದೂಡಲಾಗಿದೆ. ಸಹಕಾರ ಸಂಘದ ಜಿಲ್ಲಾ ನಿಬಂಧಕರಿಗೆ ವರದಿ ನೀಡುವ ಮೂಲಕ ಮತ್ತೊಮ್ಮೆ ಚುನಾವಣೆ ದಿನಾಂಕ ನಿಗದಿಪಡಿಸಲಾಗುವುದು ಎಂದರು. ನಿರ್ದೇಶಕರಾದ ಲೋಕೇಶ್, ಸುರೇಶ್, ಸಿ.ಪುಟ್ಟಸ್ವಾಮಿ, ರಮಾಮಣಿ ಇದ್ದರು.