

ಹರಿಹರ: ಬಡ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ವಿದ್ಯಾರ್ಥಿ ವೇತನ ಯೋಜನೆಯಡಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳ ಬಯೋಮೆಟ್ರಿಕ್ ಪಡೆದುಕೊಳ್ಳುವ ಅವಧಿ ಮುಂದೂಡಿಕೆಗೆ ಆಗ್ರಹಿಸಿ ಇಲ್ಲಿನ ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಜೇಷನ್ ಕಾರ್ಯಕರ್ತರು ಶುಕ್ರವಾರ ತಹಸೀಲ್ದಾರ್ ಪೃಥ್ವಿ ಸಾನಿಕಂ ಅವರಿಗೆ ಮನವಿ ನೀಡಿದರು.
ನಂತರ ಮಾತನಾಡಿದ ಪದಾಧಿಕಾರಿಗಳು, ವಿದ್ಯಾರ್ಥಿ ವೇತನ ವಿತರಣೆಯಲ್ಲಿ ಕೆಲವು ವಿದ್ಯಾಸಂಸ್ಥೆಗಳಲ್ಲಿ ಹಗರಣ ನಡೆಸಿವೆ ಎಂದು ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳ ಬಯೋಮೆಟ್ರಿಕ್ ಪರಿಶೀಲನೆಗೆ ಕೇಂದ್ರ ಸರ್ಕಾರ ಆದೇಶ ನೀಡಿದೆ.
ಪರಿಣಾಮ ಎಲ್ಲ ಶಾಲೆಗಳಲ್ಲಿ ವಿದ್ಯಾರ್ಥಿಗಳು ಪಾಠ, ಪ್ರವಚನ ಕೇಳುವುದನ್ನು ಬಿಟ್ಟು ಬಯೋಮೆಟ್ರಿಕ್ ನಡೆಸುವ ಕೇಂದ್ರಗಳ ಮುಂದೆ ನಿಲ್ಲುವಂತಾಗಿದೆ ಎಂದರು.
ರಾಜ್ಯದಲ್ಲಿ 3.69 ಲಕ್ಷ ವಿದ್ಯಾರ್ಥಿಗಳ ಬಯೋಮೆಟ್ರಿಕ್ ಪರಿಶೀಲನೆ ಮಾಡಬೇಕೆಂದು ಸರ್ಕಾರ ಆದೇಶ ನೀಡಿದೆ. ಈ ಪರಿಶೀಲನೆಗೆ ಆ.25 ಕೊನೆ ದಿನವೆಂದು ಘೋಷಿಸಿದೆ. ಈವರೆಗೆ ರಾಜ್ಯದಲ್ಲಿ ಅಂದಾಜು 50 ಸಾವಿರ ವಿದ್ಯಾರ್ಥಿಗಳ ಪರಿಶೀಲನೆ ಮಾತ್ರ ನಡೆದಿದೆ. ಉಳಿದ 3 ಲಕ್ಷ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನ ಪಡೆಯುವ ಅವಕಾಶದಿಂದ ವಂಚನೆಯಾಗುವ ಅಪಾಯವಿದೆ ಎಂದು ಹೇಳಿದರು.
ಆದ್ದರಿಂದ ಬಯೋಮೆಟ್ರಿಕ್ ಪರಿಶೀಲನೆ ಕೈಗೊಳ್ಳಲು ಅವಧಿ ಮುಂದೂಡಬೇಕು. ವಿದ್ಯಾರ್ಥಿವೇತನ ವಿತರಣೆಯಲ್ಲಿ ತಪ್ಪೆಸಗಿದ ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳಿಗೆ ಮಾತ್ರ ಬಯೋಮೆಟ್ರಿಕ್ ಪರಿಶೀಲನೆ ಕಡ್ಡಾಯ ಮಾಡಬೇಕು. ಮುಂದಿನ ವರ್ಷದಿಂದ ಬಯೋಮೆಟ್ರಿಕ್ ಪರಿಶೀಲನೆ ರದ್ದು ಮಾಡಬೇಕೆಂದು ಆಗ್ರಹಿಸಿದರು.
ಎಸ್‌ಐಒ ಹರಿಹರ ಘಟಕದ ಅಧ್ಯಕ್ಷ ಮೊಹ್ಮದ್ ಶೊಯೇಬ್, ಪದಾಧಿಕಾರಿಗಳಾದ ಖುರ್ಷಿದ್ ಅಕ್ಬರ್, ಅಬ್ದುಲ್ ಖಯೂಮ್ ಎಕ್ಕೆಗೊಂದಿ, ಅಬ್ದುಲ್ ಸಲಾಂ, ಅದ್ನಾನ್ ಸಾಖಿಬ್ ಎಕ್ಕೆಗೊಂದಿ, ಮೊಹಮ್ಮದ್ ಫಾರೂಖ್ ಖಾನ್, ಕಾಂಗ್ರೆಸ್ ಮುಖಂಡ ಹನಗವಾಡಿ ಹನುಮಂತಪ್ಪ ಇತರರಿದ್ದರು.