

ಸೋಮವಾರಪೇಟೆ: ಪಟ್ಟಣ ಪಂಚಾಯಿತಿಗೆ ಸೇರಿದ ಅಂಗಡಿ ಮಳಿಗೆಗಳ ಹರಾಜು ಪ್ರಕ್ರಿಯೆಯನ್ನು ಮುಂದೂಡುವಂತೆ ಆಗ್ರಹಿಸಿ ಪಂಚಾಯಿತಿ ಸದಸ್ಯರು ಮಂಗಳವಾರ ಜಿಲ್ಲಾಧಿಕಾರಿ ಹಾಗೂ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿದರು.
ಪಟ್ಟಣ ಪಂಚಾಯಿತಿಗೆ ಸೇರಿದ 60 ಅಂಗಡಿ ಮಳಿಗೆಗಳ ಹರಾಜನ್ನು ಡಿ.21ಕ್ಕೆ ಅಧಿಕಾರಿಗಳು ನಿಗದಿ ಮಾಡಿದ್ದಾರೆ. ದಿನಾಂಕ ನಿಗದಿ, ಮಳಿಗೆ ಮೀಸಲಾತಿ ಸೇರಿದಂತೆ ಯಾವ ವಿಚಾರಕ್ಕೂ ಪಂಚಾಯಿತಿ ಸದಸ್ಯರ ಅಭಿಪ್ರಾಯ ಪಡೆದಿಲ್ಲ ಹಾಗೂ ಗಮನಕ್ಕೂ ತಂದಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಸೆ.13ರಂದು ನಡೆದ ಸಾಮಾನ್ಯ ಸಭೆಯಲ್ಲಿ ಈ ವಿಚಾರ ಪ್ರಸ್ತಾಪವಾಗಿ ಸುದೀರ್ಘ ಚರ್ಚೆ ನಡೆದು ನಗರ ಅಭಿವೃದ್ಧಿ ಹಾಗೂ ವರ್ತಕರ ಹಿತದೃಷ್ಟಿಯಿಂದ ಸರ್ಕಾರದ ಅಭಿಪ್ರಾಯ ಪಡೆದು ಮುಂದಿನ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಮಾಡೋಣವೆಂದು ಸದಸ್ಯರು ಹೇಳಿದ್ದರು. ನಂತರ ಕರೆದ ಎರಡು ಸಭೆಗಳನ್ನು ಅಧಿಕಾರಿಗಳು ಮುಂದೂಡಿ ಸದಸ್ಯರು ಚರ್ಚೆ ಮಾಡದಂತೆ ತಂತ್ರ ರೂಪಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಕೂಡಲೆ ಸಾಮಾನ್ಯ ಸಭೆ ಕರೆಯಬೇಕೆಂದು ಒತ್ತಾಯಿಸಿ ಹನ್ನೊಂದು ಸದಸ್ಯರು ಸಹಿ ಮಾಡಿರುವ ಪತ್ರವನ್ನು ಮುಖ್ಯಾಧಿಕಾರಿಗೆ ನೀಡಿದರು. ಈ ಬಗ್ಗೆ ಆಡಳಿತಾಧಿಕಾರಿ ಅವರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಮುಖ್ಯಾಧಿಕಾರಿ ನಾಚಪ್ಪ ಸದಸ್ಯರಿಗೆ ತಿಳಿಸಿದರು.
ಪಂಚಾಯಿತಿ ಮಾಜಿ ಅಧ್ಯಕ್ಷ ಪಿ.ಕೆ ಚಂದ್ರು, ಶೀಲಾ ಡಿಸೋಜ, ಜೀವನ್, ಮೃತ್ಯುಂಜಯ, ಶುಭಕರ, ಮೋಹಿನಿ, ಮಹೇಶ್ ಇದ್ದರು.