ಮಠಕ್ಕೆ ಹೋಗಿ ಬರುವುದಾಗಿ ಹೇಳಿದ್ದ ಪೋಸ್ಟ್ ಪಾಂಡು, ರೈಲಿಗೆ ಸಿಲುಕಿ ಆತ್ಮಹತ್ಯೆ

23cmy2
Published on

ಚಿಕ್ಕಬಳ್ಳಾಪುರ: ಮನೆಯಲ್ಲಿ ದೇವರ ಮಠಕ್ಕೆ ಹೋಗಿ ಬರುವುದಾಗಿ ಹೇಳಿದ್ದ ವೃದ್ದರೊಬ್ಬರು, ಚಿಕ್ಕಬಳ್ಳಾಪುರದಿಂದ ಚಿಂತಾಮಣಿ ಮಾರ್ಗವಾಗಿ ಕೋಲಾರಕ್ಕೆ ಹೋಗುತ್ತಿದ್ದ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಚಿಂತಾಮಣಿ ನಗರದ ಅಂಜನಿ ಬಡಾವಣೆಯ ವ್ಯಾಪಾರಿ ಎನ್.ಎಸ್.ಪಾಂಡುರಂಗಯ್ಯಶೆಟ್ಟಿ (80) ಮೃತರು. ಊರಿನಲ್ಲಿ ಪೋಸ್ಟ್ ಪಾಂಡು ಎಂತಲೇ ಹೆಸರುವಾಸಿ. ಇವರು ಚಿಂತಾಮಣಿ ನಗರದ ನೆಕ್ಕುಂದಿ ರೈಲ್ವೆ ನಿಲ್ದಾಣಕ್ಕೆ ರೈಲು ಬರುತ್ತಿರುವುದನ್ನು ನೋಡಿ, ರೈಲಿನ ಟ್ರಾಕ್ ನ ಮೆಲೆ ಮಲಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಚಿಂತಾಮಣಿ ನಗರದ ಗಜಾನನ ವೃತ್ತದ ಅಂಗಡಿಯಲ್ಲಿ ದಿನಸಿ ಅಂಗಡಿ ವ್ಯಾಪಾರ ಮಾಡಿಕೊಂಡಿದ್ದು ಇತ್ತೀಚೆಗೆ ವಯಸ್ಸಾದ ಹಿನ್ನೆಲೆಯಲ್ಲಿ ಮೊಮ್ಮಕ್ಕಳಿಗೆ ಜವಾಬ್ದಾರಿ ಬಿಟ್ಟುಕೊಟ್ಟಿದ್ದರು. ಬಳಿಕ ಚಿನ್ನಾಭರಣ ಅಂಗಡಿ ನಡೆಸುತ್ತಿದ್ದರು. ಇದರ ನಡುವೆ ಇತ್ತೀಚೆಗೆ ಅನಾರೋಗ್ಯಕ್ಕೆ ತುತ್ತಾಗಿದ್ದು ಕೋಲಾರದ ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ವ್ಯವಸ್ಥೆಯಾಗಿತ್ತು. ಇದರ ನಡುವೆ ರಾಘವೇಂದ್ರಸ್ವಾಮಿ ಮಠಕ್ಕೆ ಹೋಗುವುದಾಗಿ ತೆರಳಿದವರು, ಮತ್ತೆ ರಾತ್ರಿ ಮನೆಗೆ ಬಂದಿಲ್ಲ. ರೈಲ್ವೆ ನಿಲ್ದಾಣದಲ್ಲಿ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದು ಬಂದಿದೆ. ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net