

ಲಿಂಗಸುಗೂರು: ಪಟ್ಟಣದ ಸರ್ಕಾರಿ ಪದವಿ ಕಾಲೇಜಿನಲ್ಲಿ ಸ್ನಾತಕೋತ್ತರ ಕೋರ್ಸ್ ಆರಂಭಕ್ಕೆ ಅನುಮತಿ ನೀಡಬೇಕೆಂದು ಎಂಎಲ್ಸಿ ಶರಣಗೌಡ ಪಾಟೀಲ್ ಬಯ್ಯಪುರ ಅವರು ಸೋಮವಾರ ಮೇಲ್ಮನೆಯಲ್ಲಿ ಪ್ರಸ್ತಾಪಿಸಿದರು.
ತಾಲೂಕಿನಲ್ಲಿ 14 ಪದವಿ ಕಾಲೇಜುಗಳಿವೆ, ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸ್ನಾತಕೋತ್ತರ ಕೋರ್ಸ್ ಮಂಜೂರು ಮಾಡಬೇಕು ಎಂದು ಬಯ್ಯಪುರ ಅವರು ಅಧಿವೇಶನದಲ್ಲಿ ಚುಕ್ಕೆ ಗುರುತಿನ ಪ್ರಶೆ ಕೇಳಿದರು.
ಇದಕ್ಕೆ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ ಉತ್ತರಿಸಿ, ಲಿಂಗಸುಗೂರು ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಸಕ್ತ ವರ್ಷ ಹೊಸದಾಗಿ ಎಂ.ಎ. ಕನ್ನಡ, ಇತಿಹಾಸ, ಇಂಗ್ಲಿಷ್, ಎಂ.ಕಾಂ, ಎಂಎಸ್ಸಿ, ಗಣಿತ ಶಾಸ್ತ್ರ ಹಾಗೂ ಎಂಎಸ್ಸಿ ಗಣಕ ವಿಜ್ಞಾನ ಸ್ನಾತಕೋತ್ತರ ಕೋರ್ಸ್ ಆರಂಭಿಸುವ ಪ್ರಸ್ತಾವನೆ ಸ್ವೀಕರಿಸಲಾಗಿತ್ತು. ಆದರೆ, ಅಗತ್ಯ ಸಂಪನ್ಮೂಲಗಳು, ಪ್ರಯೋಗಾಲಯ, ಇತರ ಸೌಲಭ್ಯಗಳ ಕೊರತೆ ಕಾರಣ ಪ್ರಸ್ತುತ ಇರುವ ಪದವಿ ಕೋರ್ಸ್‌ಗಳನ್ನೇ ಬಲಪಡಿಸಿ ಗುಣಮಟ್ಟದ ಶಿಕ್ಷಣ ನೀಡುವ ದೃಷ್ಟಿಯಿಂದ ಪದವಿ ಕೋರ್ಸ್‌ಗಳಿಗೆ ಗಮನ ನೀಡಲಾಗುತ್ತದೆ.
ಕಳೆದ ಐದು ವರ್ಷಗಳಿಂದ ಯಾವುದೇ ಪದವಿ ಕಾಲೇಜುಗಳಲ್ಲಿ ಹೊಸದಾಗಿ ಸ್ನಾತಕೋತ್ತರ ಕೋರ್ಸ್ ತೆರೆಯಲು ಅನುಮತಿ ನೀಡಿಲ್ಲ ಎಂದ ಅವರು, ರಾಯಚೂರು ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ಸ್ನತಕೋತ್ತರ ಕೇಂದ್ರ ಲಿಂಗಸುಗೂರಲ್ಲಿ ಸ್ಥಾಪಿಸಬಹುದು. ಈ ಸಂಬಂಧ ಬಯ್ಯಪುರ ಅವರು ರಾಯಚೂರು ವಿಶ್ವವಿದ್ಯಾಲಯಕ್ಕೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ತಿಳಿಸಿದರು.