ವಿಶ್ವ ಕೌಶಲ ಸ್ಪರ್ಧೆಗೆ ಸುವರ್ಣವಕಾಶ

poster relese
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ

ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಕರ್ನಾಟಕ ಕೌಶಲಾಭಿವೃದ್ಧಿ ನಿಗಮವು ಕೌಶಲ ಹೊಂದಿರುವ ಅಭ್ಯರ್ಥಿಗಳಿಗೆ ಅತಿದೊಡ್ಡ ಜಾಗತಿಕ ವೇದಿಕೆಯಲ್ಲಿ ತಮ್ಮ ಕೌಶಲವನ್ನು ಪ್ರದರ್ಶಿಸಲು ಸುವರ್ಣಾವಕಾಶ ಒದಗಿಸಿದೆ ಎಂದು ಅಪರ ಜಿಲ್ಲಾಧಿಕಾರಿ ಸೈಯಿದಾ ಆಯೆಷಾ ತಿಳಿಸಿದರು.

ದೇವನಹಳ್ಳಿಯ ಜಿಲ್ಲಾಡಳಿತಭವನದಲ್ಲಿ ಸ್ಕಿಲ್ ಇಂಡಿಯಾ 2025 ಪೋಸ್ಟರ್‌ಗಳನ್ನು ಬಿಡುಗಡೆ ಮಾಡಿ ಮಾತನಾಡಿದರು. ವಿಶ್ವ ಕೌಶಲ ಸ್ಪರ್ಧೆಯಲ್ಲಿ ಪದಕಗಳನ್ನು ಗೆಲ್ಲುವುದರ ಮೂಲಕ ಭಾರತವನ್ನು ಪ್ರತಿನಿಧಿಸಲು ಅವಕಾಶ ನೀಡುತ್ತಿದೆ. ಎರಡು ವರ್ಷಗಳಿಗೊಮ್ಮೆ ನಡೆಯುವ ಇಂಡಿಯಾ ಸ್ಕಿಲ್ಸ್ ಕರ್ನಾಟಕ-2025 ಸ್ಪರ್ಧೆಯಲ್ಲಿ ಜಗತ್ತಿನಾದ್ಯಂತ 75 ಕ್ಕಿಂತಲೂ ಹೆಚ್ಚು ದೇಶಗಳು ಭಾಗವಹಿಸುತ್ತಿವೆ. 16 ರಿಂದ 25 ವರ್ಷದೊಳಗಿನ ಯುವಜನತೆ 63 ಕ್ಕೂ ಹೆಚ್ಚು ಕೌಶಲದ ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವ ಅತಿದೊಡ್ಡ ವೃತ್ತಿಪರ ಶಿಕ್ಷಣ ಮತ್ತು ಕೌಶಲ ಶ್ರೇಷ್ಟತೆಯ ಕಾರ್ಯಕ್ರಮವಾಗಿದೆ ಎಂದು ಮಾಹಿತಿ ನೀಡಿದರು.

2026 ನೇ ಸಾಲಿಗೆ ವಿಶ್ವ ಕೌಶಲ ಸ್ಪರ್ಧೆಯು ಚೀನಾದ ಶಾಂಘೈನಲ್ಲಿ ನಡೆಯಲಿದೆ. ರಾಜ್ಯದ ಯುವ ಜನತೆಯ ಜ್ಞಾನಾರ್ಜನೆಗೆ ಸೂಕ್ತ ವೇದಿಕೆ ಕಲ್ಪಿಸಲು ಹಾಗೂ ಮಾದರಿ ಕೌಶಲಭರಿತ ರಾಜ್ಯವನ್ನಾಗಿಸಲು 2025-26ನೇ ಸಾಲಿನಲ್ಲಿ ರಾಜ್ಯ ಕೌಶಲ್ಯ ಒಲಂಪಿಕ್ಸ್ (ಇಂಡಿಯಾ ಸ್ಕಿಲ್ಸ್ ಕರ್ನಾಟಕ-2025) ಸ್ಪರ್ಧಾ ಕಾರ್ಯಕ್ರಮವನ್ನು ಜಿಲ್ಲಾ ವಲಯ ಹಾಗೂ ರಾಜ್ಯ ಮಟ್ಟಗಳಲ್ಲಿ ಕೈಗೊಳ್ಳಲು ಯೋಜಿಸಲಾಗಿದೆ. ಸ್ಪರ್ಧೆಗೆ ನೋಂದಾಯಿಸಿಕೊಳ್ಳಲು ಸೆ. 30 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗೆ ದೇವನಹಳ್ಳಿ ತಾಲೂಕು ಜಿಲ್ಲಾಡಳಿತಭವನದಲ್ಲಿನ ಜಿಲ್ಲಾ ಕೌಶಲಾಭಿವೃದ್ಧಿ ಕಚೇರಿ ಸಂಪರ್ಕಿಸಬಹುದು ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net