ಶ್ರೀವೈಷ್ಣವ ಸಮಾವೇಶದ ಭಿತ್ತಿಪತ್ರ ಬಿಡುಗಡೆ

21
Published on

ಮೈಸೂರು: ಬೆಂಗಳೂರಿನಲ್ಲಿ ನವೆಂಬರ್ 24ರಂದು ಆಯೋಜಿಸಿರುವ ಶ್ರೀರಾಮಾನುಜ ವಿಶ್ವ ವಿಜಯೋತ್ಸವ ‘ ನಮ್ಮ ನಡೆ ರಾಮಾನುಜರೆಡೆಗೆ’ ಘೋಷಣೆಯ ಶ್ರೀವೈಷ್ಣವ ಸಮಾವೇಶದ ಭಿತ್ತಿಪತ್ರವನ್ನು ಬುಧವಾರ ನಗರದಲ್ಲಿ ಬಿಡುಗಡೆಗೊಳಿಸಲಾಯಿತು.

ನಗದ ಕಾಳಿದಾಸರ ರಸ್ತೆಯಲ್ಲಿರುವ ಶ್ರೀಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಶ್ರೀಯತಿರಾಜ ಮಠ ಹಾಗೂ ಶ್ರೀ ವೈಷ್ಣವ ಮಹಾಸಭಾದಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮೇಲುಕೋಟೆ ಯತಿರಾಜ ಮಠದ ಶ್ರೀಯದುಗಿರಿ ಯತಿರಾಜ ನಾರಾಯಣ ರಾಮಾನುಜ ಜೀಯರ್ ಬಿಡುಗಡೆಗೊಳಿಸಿ ಸಮಾವೇಶ ಯಶವಾಗಲೆಂದು ಶುಭ ಕೋರಿದರು.

ಲೋಕಕಲ್ಯಾಣಾರ್ಥವಾಗಿ ಸನಾತನ ಹಿಂದು ಧರ್ಮದ ರಕ್ಷಣೆ, ಪುನರುತ್ಥಾನಕ್ಕಾಗಿ, ವಿಶಿಷ್ಟಾ ದ್ವೈತ ಸಿದ್ಧಾಂತದ ಪ್ರತಿಪಾದಿಸಿದ ಶ್ರೀ ರಾಮಾನುಜರ ದಿವ್ಯ ಸಂದೇಶವನ್ನು ಸಮಾಜದ ಕೊನೆಯ ವ್ಯಕ್ತಿಗೂ ತಲುಪುವಂತೆ ಮಾಡುವುದು ಅತ್ಯಂತ ಅಗತ್ಯ ಎಂದು ಜೀಯರ್ ಹೇಳಿದರು.

‘ನಮ್ಮ ನಡೆ ರಾಮಾನುಜರೆಡೆಗೆ’ ಎಂಬ ಧ್ಯೇಯ ವಾಕ್ಯವನ್ನು ಬೋಧಿಸಿ, ಅಖಿಲ ಕರ್ನಾಟಕ ಶ್ರೀವೈಷ್ಣವ ಮಹಾಸಭಾ ತನ್ನ ಲಾಂಛನ, ಭಿತ್ತಿಪತ್ರ ಬಿಡುಗಡೆ ಮಾಡಿದೆ.

ರಾಜ್ಯ ಮಟ್ಟದ ‘ಶ್ರೀರಾಮಾನುಜ ವಿಶ್ವ ವಿಜಯೋತ್ಸವ’ ಎಂಬ ಬೃಹತ್ ಸಮಾವೇಶದಲ್ಲಿ ಮಹತ್ವದ ವಿಷಯಗಳು ಚರ್ಚೆಯಾಗಿ ಸಮಾಜಕ್ಕೆ ಕೊಡುಗೆಯಾಗಲಿದೆ ಎಂದು ಆಶಿಸಿದರು.

ಶ್ರೀವೈಷ್ಣವ ಸಮಾಜದ ಮುಖಂಡ ಯೋಗಾನರಸಿಂಹನ್(ಮುರಳಿ) ಮಾತನಾಡಿ, ಸಮಾವೇಶಕ್ಕೆ ಮೈಸೂರಿನಿಂದ 5,000ಕ್ಕೂ ಹೆಚ್ಚು ವೈಷ್ಣವರು ಭಾಗಿಯಾಗಲಿದ್ದಾರೆ. ಸಮಾವೇಶದ ಯಶಸ್ಸಿಗೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದು ಹೇಳಿದರು.

ನಗರಪಾಲಿಕೆ ಮಾಜಿ ಸದ್ಯಸ ಎಂ.ಡಿ.ಪಾರ್ಥಸಾರಥಿ (ಪಾತಿ), ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆಯ ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್, ಅರ್ಚಕ ಸಂಘದ ಅಧ್ಯಕ್ಷ ವಿದ್ವಾನ್ ಕೃಷ್ಣಮೂರ್ತಿ, ಮುಖಂಡರಾದ ಎಸ್.ವಿ.ಎಲ್.ಎನ್. ಆಚಾರ್, ವೀರ ರಾಘವಾಚಾರ್, ಟಿ.ಎಸ್.ಅರುಣ್, ಚಕ್ರಪಾಣಿ, ಪುಟ್ಟಸ್ವಾಮಿ, ಸಿ.ವಿ. ಪಾರ್ಥಸಾರಥಿ, ಶ್ರೀನಿವಾಸಪ್ರಸಾದ್, ಶಾಂತಾರಾಮ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net