

ಕಮಲನಗರ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ೬ರಂದು ಹಮ್ಮಿಕೊಂಡಿರುವ ಪ್ರಥಮ ಶೈಕ್ಷಣಿಕ ಸಾಹಿತ್ಯ ಸಮ್ಮೇಳನದಲ್ಲಿ ಶಿಕ್ಷಕರು, ಸಾಹಿತ್ಯಾಭಿಮಾನಿಗಳು, ಕನ್ನಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಕರೆ ನೀಡಿದರು.
ಪಟ್ಟಣದ ಡಾ.ಚನ್ನಬಸವ ಪಟ್ಟದ್ದೇವರು ಸ್ಮಾರಕ ಭವನದಲ್ಲಿ ಮಂಗಳವಾರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಶೈಕ್ಷಣಿಕ ಸಮ್ಮೇಳನದ ಭಿತ್ತಿ ಪತ್ರ ಬಿಡುಗಡೆ ಮಾಡಿ ಮಾತನಾಡಿದ ಅವರು, ಇದೊಂದು ಅಪರೂಪದ ಸಮ್ಮೇಳನವಾಗಲಿದ್ದು, ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಪೂರಕವಾದ ಸಮ್ಮೇಳನ ಇದಾಗಲಿದೆ ಎಂದು ಆಶಯ ವ್ಯಕ್ತಪಡಿಸಿದರು.
ಭಾಲ್ಕಿ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ಮಾತನಾಡಿ, ಜ್ಞಾನಸುಧಾ ಸಂಸ್ಥೆ ಅಧ್ಯಕ್ಷೆ ಡಾ.ಪೂರ್ಣಿಮಾ ಜಾರ್ಜ್ ಅವರನ್ನು ಶೈಕ್ಷಣಿಕ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಮಾಡಿದ್ದು ಔಚಿತ್ಯವಾಗಿದೆ. ಶಿಕ್ಷಕಿಯಾಗಿ, ಪ್ರಾಂಶುಪಾಲೆಯಾಗಿ, ಶಿಕ್ಷಣ ಸಂಸ್ಥೆ ಸ್ಥಾಪಿಸಿ ಜಿಲ್ಲೆಯ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದರು.
ಕಸಾಪ ತಾಲೂಕು ಅಧ್ಯಕ್ಷ ಪ್ರಶಾಂತ ಮಠಪತಿ ಮಾತನಾಡಿ, ಶಿಕ್ಷಕರ ಜ್ಞಾನ ವೃದ್ಧಿಗೆ ಐತಿಹಾಸಿಕವಾದ ಈ ಶೈಕ್ಷಣಿಕ ಸಮ್ಮೇಳನವು ಟಾನಿಕ್ ಆಗಲಿದೆ. ಸಮ್ಮೇಳನದಲ್ಲಿ ಭಾಗವಹಿಸುವ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರಿಗೆ ಒಒಡಿ ಮಂಜೂರು ಮಾಡಲಾಗಿದೆ ಎಂದರು.
ಮುಖಂಡ ಪ್ರಕಾಶ ಟೊಣ್ಣೆ, ಕೋಶಾಧ್ಯಕ್ಷ ಯಶವಂತ ಬಿರಾದಾರ, ಉಪಾಧ್ಯಕ್ಷ ಧನರಾಜ ಭವರಾ, ಡಾ.ಸಂಜೀವಕುಮಾರ ಜುಮ್ಮಾ, ಧನರಾಜ ಸೊಲ್ಲಾಪುರೆ, ರಾಜಕುಮಾರ ಬಿರಾದಾರ, ಸಾಹಿತಿ ರಾಜು ಜುಬರೆ, ಶಿವರಾಜ ಜಲಸಿಂಗೆ, ಪ್ರಭುರಾವ ಕಳಸೆ, ಜಾಗತಿಕ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ಶಿವಶರಣಪ್ಪ ಚಿಕಮುರ್ಗೆ, ಅವಿನಾಶ ಶಿವಣಕರ ಇತರರಿದ್ದರು.