‘ಅರಿಂದಮ್’ ಚಲನಚಿತ್ರದ ಪೋಸ್ಟರ್ ಬಿಡುಗಡೆ

Arindam
Published on

ದಾಂಡೇಲಿ: ಕಾಳಿಯ ಹಾಡು ಪಾಡು ಒಂದು ವಿಶಿಷ್ಟ ಕಥೆ, ಅಪರೂಪದ ವ್ಯಕ್ತಿತ್ವದ ನಾಯಕ, ಪ್ರೇಮಕಥೆ, ಅಚ್ಚರಿಯ ಹೋರಾಟ ಇಷ್ಟೆಲ್ಲ ಅಂಶಗಳನ್ನಿಟ್ಟುಕೊಂಡು ಹೊಸಬರ ತಂಡವೊಂದು ಸಿನಿಮಾ ನಿರ್ಮಿಸುತ್ತಿದೆ. ಅದುವೇ ‘ಅರಿಂದಮ್’ ಸಿನಿಮಾ. ನಗರದ ಖಾಸಗಿ ಹೋಟೆಲ್‌ನಲ್ಲಿ ಗುರುವಾರ ಪೋಸ್ಟರ್ ಬಿಡುಗಡೆ ಮಾಡಲಾಯಿತು.

ಚಿತ್ರದ ನಾಯಕ ಹಾಗೂ ನಿರ್ದೇಶಕ ಕಲ್ಕಿ ಅಗಸ್ತ್ಯ ಮಾತನಾಡಿ, ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡರು. ಉತ್ಸಾಹಿ ಯುವಕರೆಲ್ಲ ಸೇರಿ ಸದಭಿರುಚಿಯ ಸಿನಿಮಾ ಮಾಡಿದ್ದೇವೆ. ಕಾಳಿ ಎಂಬ ಯುವಕನ ಜೀವನದ ಏಳು ಬೀಳುಗಳು, ಪ್ರೀತಿ ಪ್ರೇಮದ ಕಥೆಯನ್ನು ಈ ಚಿತ್ರದ ಮೂಲಕ ಹೇಳಲು ಪ್ರಯತ್ನಿಸಿದ್ದೇವೆ. ಇದು 2008ರಲ್ಲಿ ನಡೆದ ಕಥೆ ಎಂದರು.

ಈಗಾಗಲೇ ಚಿತ್ರೀಕರಣ ಹಾಗೂ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಮುಗಿದಿದ್ದು ಏಪ್ರಿಲ್ ಕೊನೆಯ ವಾರದಲ್ಲಿ ಬಿಡುಗಡೆ ಮಾಡುತ್ತಿದ್ದೇವೆ ಎಂದರು.

ಚಿತ್ರದಲ್ಲಿ ನಾಯಕಿಯಾಗಿ ಕಾರವಾರದ ಶ್ವೇತಾ ಭಟ್ ಅಭಿನಯಿಸಿದ್ದಾರೆ. ದಾಂಡೇಲಿಯಲ್ಲಿ ಎರಡು ತಿಂಗಳ ಕಾಲ ಚಿತ್ರೀಕರಿಸಲಾಗಿದೆ. ಚಿತ್ರದಲ್ಲಿ ರಮಣ, ಪ್ರವೀಣ, ವಿನೋದ ಹಾಗೂ ದಾಂಡೇಲಿಯ ನಟರಾಜ ನಾಟ್ಯ ಸಂಘದ ಸುಮಾರು 15 ಕಲಾವಿದರು ನಟಿಸಿದ್ದಾರೆ. ಸಂತೋಷ ಜೋಶ್ವಾ ಅವರ ಸಂಗೀತ ನಿರ್ದೇಶನ, ಸುಬ್ಬು ಸಾಹಸ ಚಿತ್ರಕ್ಕಿದೆ ಎಂದರು.

ದಾಂಡೇಲಿ ನಟರಾಜ ನಾಟ್ಯ ಸಂಘದ ಹಿರಿಯ ಕಲಾವಿದರಾದ ದುಂಡಪ್ಪ ಗೋಳೂರು, ಶ್ರೀಮಂತ ಮಾದರಿ, ಸಾಯಿನಾಥ ನವಲೆ, ಹನುಮಂತ ಕಾರ್ಗಿ, ಶಂಕ್ರಯ್ಯ ಹಿರೇಮಠ, ಪ್ರವೀಣಕುಮಾರ ಸುಲಾಖೆ, ಸರ್ಫರಾಜ್ ಶೇಖ, ಭೀಮಾಶಂಕರ ಅಜನಾಳ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net