ರೈತ, ಕೂಲಿಕಾರ ಸಂಘದಿಂದ ಭಿತ್ತಿಪತ್ರ ಪ್ರದರ್ಶನ

POSTER
Published on

ಅಂಕೋಲಾ: ಕೇಂದ್ರ ಸರ್ಕಾರದ ಕಾರ್ಮಿಕ, ಕೃಷಿ ಕೂಲಿಕಾರರ ಹಾಗೂ ಜನಸಾಮಾನ್ಯರ ವಿರೋಧಿ ನೀತಿಗಳ ವಿರುದ್ಧ ರೈತ ಮತ್ತು ಕೂಲಿಕಾರ ಸಂಘದವರು ಕ್ವಿಟ್ ಇಂಡಿಯಾ ದಿನದ ನೆನಪಿಗಾಗಿ ಬುಧವಾರ ಇಲ್ಲಿಯ ತಹಸೀಲ್ದಾರ್ ಕಚೇರಿಯ ದ್ವಾರದಲ್ಲಿ ಭಿತ್ತಿ ಪತ್ರ ಪ್ರದರ್ಶನ ನಡೆಸಿದರು.

ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಶಾಂತಾರಾಮ ನಾಯಕ ಅಗಸೂರು ಮಾತನಾಡಿ, ಕೇಂದ್ರ ಸರ್ಕಾರದ ನೀತಿಗಳಿಂದ ಕೃಷಿ ಸರ್ವನಾಶ ಆಗಿ ಅನ್ನದಾತರು ಕಂಗಾಲಾಗಿದ್ದಾರೆ. ದೇಶದ ಸಂಪತ್ತನ್ನು ಸೃಷ್ಟಿಸುವ ರೈತರು ಬೆಳೆಯುವ ಬೆಳೆಗಳಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ಕೃಷಿ ಬಿಕ್ಕಟ್ಟಿಗೆ ಸಿಲುಕಿದ್ದು, ರೈತರ ಆತ್ಮಹತ್ಯೆ ಹೆಚ್ಚುತ್ತಿವೆ. ಅರಣ್ಯ ಭೂಮಿ ಹಕ್ಕು ಪತ್ರ ನೀಡಿಲ್ಲ. ನಿತ್ಯೋಪಯೋಗಿ ವಸ್ತುಗಳ ಬೆಲೆ ಏರುತ್ತಿದೆ. ರೈತರು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ ಎಂದರು.

ಸಿಐಟಿಯು ತಾಲೂಕು ಸಂಚಾಲಕ ಎಚ್.ಬಿ. ನಾಯಕ ಮಾತನಾಡಿ, ಯುವಕರಿಗೆ ಕಾಯಂ ಕೆಲಸವೂ ಇಲ್ಲ. ಶ್ರಮಕ್ಕೆ ಬೆಲೆಯೂ ಇಲ್ಲ. ದೇಶದ ಮುನ್ನಡೆಗೆ ಸಂಪತ್ತುನ್ನು ಸೃಷ್ಟಿಸುವ ಶ್ರಮಿಕರು ಇಂದು ಗುತ್ತಿಗೆ, ಹೊರಗುತ್ತಿಗೆ, ದಿನಗೂಲಿ, ಗೌರವಧನ, ಅತಿಥಿ ಮುಂತಾದವುಗಳ ಹೆಸರಿನಲ್ಲಿ ದುಡಿಸಿಕೊಳ್ಳಲಾಗುತ್ತಿದೆ. ದುಡಿಯುವ ವರ್ಗವನ್ನು ಕಾನೂನು ಬದ್ಧ ಗುಲಾಮರನ್ನಾಗಿಸಲು ಕೇಂದ್ರ ಸರ್ಕಾರ ಹೊರಟಿದೆ ಎಂದು ಟೀಕಿಸಿದರು.

ಪ್ರಾಂತ ರೈತ ಸಂಘದ ತಾಲೂಕು ಸಮಿತಿಯ ಅಧ್ಯಕ್ಷ ಗೌರೀಶ ನಾಯಕ ಮಾತನಾಡಿ, ವಿದ್ಯುತ್ ಖಾಸಗೀಕರಣದ ವಿರುದ್ಧ ದೊಡ್ಡ ಹೋರಾಟ ಸಂಘಟಿಸಬೇಕಾಗಿದೆ ಎಂದರು. ಗಣೇಶ ಪಟಗಾರ ಬ್ರಹ್ಮೂರು, ಉದಯ ನಾಯ್ಕ, ರತ್ನಾಕರ ಗಾಂವಕರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net