42,123 ಜನ ಅಂಚೆ ಮತದಾನಕ್ಕೆ ಅರ್ಹರು

14kar24
Published on

ವಿಜಯವಾಣಿ ಸುದ್ದಿಜಾಲ ಕಾರವಾರ
ಜಿಲ್ಲೆಯಲ್ಲಿ 80 ವರ್ಷ ಮೇಲ್ಪಟ್ಟ 27,399 ಜನ ಮತ್ತು 14,724 ಅಂಗವಿಕಲರನ್ನು ಅಂಚೆ ಮತದಾನಕ್ಕೆ ಅರ್ಹರು ಎಂದು ಗುರುತಿಸಲಾಗಿದೆ. ಅಗತ್ಯವಿದ್ದಲ್ಲಿ ಮಾತ್ರ ಅವರಿಗೆ ಅಂಚೆ ಮತದಾನಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ತಿಳಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೇವಾ ಮತದಾರರಲ್ಲದೆ, ಮತಗಟ್ಟೆಗೆ ಬರಲು ಅಸಾಧ್ಯವಾದ ಮತದಾರರಿಗೆ ಅಂಚೆ ಮತದಾನಕ್ಕೆ ಅವಕಾಶ ನೀಡಲು ಈ ಬಾರಿ ಚುನಾವಣಾ ಆಯೋಗ ನಿರ್ಧರಿಸಿದೆ. ಅವರೆಲ್ಲರಿಗೂ ಒಂದು ನಮೂನೆ ನೀಡಿ ಮತಗಟ್ಟೆಗೆ ಬರುತ್ತೀರೋ ಇಲ್ಲವೋ ಎಂಬ ಮಾಹಿತಿ ಪಡೆಯಲಾಗುವುದು. ಅವರು ಇಚ್ಛೆಪಟ್ಟಲ್ಲಿ ಅಂಚೆ ಮತದಾನಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದರು.
ಮುಂಬರುವ ವಿಧಾನಸಭಾ ಚುನಾವಣೆಗೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಮಾರ್ಚ್ 3 ರ ದಾಖಲೆಯಂತೆ ಜಿಲ್ಲೆಯಲ್ಲಿ 11,83,461 ಮತದಾರರಿದ್ದಾರೆ. 1435 ಮತಗಟ್ಟೆಗಳನ್ನು ಸಿದ್ಧಪಡಿಸಲಾಗಿದೆ. ಮತಗಟ್ಟೆಗಳಲ್ಲಿ ಎಲ್ಲ ಮೂಲ ಸೌಕರ್ಯ ಒದಗಿಸಲು ಕ್ರಮ ವಹಿಸಲಾಗಿದೆ. ಪ್ರತಿ ಕ್ಷೇತ್ರದಲ್ಲಿ ತಲಾ 5 ಮತಗಟ್ಟೆಗಳಂತೆ 30 ಮಹಿಳಾ ಮತಗಟ್ಟೆಗಳು ಪ್ರತಿ ಕ್ಷೇತ್ರದಲ್ಲಿ 2 ರಂತೆ 12 ಅಂಗವಿಕಲ ಮತಗಟ್ಟೆಗಳು, 12 ಯುವ ನೌಕರರ ಮತಗಟ್ಟೆಗಳು ಹಾಗೂ ಬುಡಕಟ್ಟು 12 ಮಾದರಿ ಮತಗಟ್ಟೆಗಳನ್ನು ತೆರೆಯಲಾಗುತ್ತಿದೆ ಎಂದರು. ಒಟ್ಟಾರೆ ಮತಗಟ್ಟೆಯಲ್ಲಿ ಒಟ್ಟಾರೆ 199 ಸೂಕ್ಷ್ಮ ಎಂದು ಗುರುತಿಸಲಾಗಿದೆ. 132 ಜನರನ್ನು ಮತದಾನಕ್ಕೆ ತೊಂದರೆ ನೀಡುವ ಜನರು ಎಂದು ಪರಿಗಣಿಸಲಾಗಿದೆ. 55 ಮತಗಟ್ಟೆಗಳು ವ್ಯಾಪ್ತಿಯ 1548 ಜನರಿಗೆ ಮತದಾನಕ್ಕೆ ತೊಂದರೆ ಉಂಟಾಗಬಹುದು ಎಂದು ಅಂದಾಜಿಸಲಾಗಿದೆ ಎಂದರು.
ಮತದಾರರ ಪಟ್ಟಿಯಲ್ಲಿ ಗೊಂದಲ ಮತಗಟ್ಟೆಗಳ ಸ್ಪಷ್ಟತೆಯ ಬಗ್ಗೆ ಖಚಿತಪಡಿಸಿಕೊಳ್ಳಲು ಪ್ರತಿ ಮತಗಟ್ಟೆಗೆ ಒಬ್ಬ ಬೂತ್ ಏಜೆಂಟ್‌ನನ್ನು ನೇಮಿಸಲು ರಾಜಕೀಯ ಪಕ್ಷಗಳಿಗೆ ಸೂಚನೆ ನೀಡಲಾಗಿದೆ. ಆದರೆ, ಇದುವರೆಗೆ 2344 ಬೂತ್ ಏಜೆಂಟರು ಮಾತ್ರ ನೇಮಿಸಲಾಗಿದೆ ಎಂದರು. ಜಿಪಂ ಸಿಇಒ ಈಶ್ವರ ಕಾಂದೂ, ಎಸ್‌ಪಿ ಎನ್.ವಿಷ್ಣುವರ್ಧನ, ಎಡಿಸಿ ರಾಜು ಮೊಗವೀರ ಸುದ್ದಿಗೋಷ್ಠಿಯಲ್ಲಿದ್ದರು.
.............
25 ಚೆಕ್ ಪೋಸ್ಟ್
ಚುನಾವಣಾ ಅಕ್ರಮ ನಿಯಂತ್ರಣಕ್ಕಾಗಿ 3 ಅಂತಾರಾಜ್ಯ, 14 ಅಂತರ ಜಿಲ್ಲಾ, 8 ಜಿಲ್ಲೆಯೊಳಗಿನ ಚೆಕ್ ಪೋಸ್ಟ್ಗಳನ್ನು ತೆರೆಯಲಾಗಿದೆ. ಹಳಿಯಾಳದಲ್ಲಿ 7, ಕಾರವಾರ, ಕುಮಟಾ, ಭಟ್ಕಳ, ಶಿರಸಿಯಲ್ಲಿ ತಲಾ 3, ಯಲ್ಲಾಪು ಕ್ಷೇತ್ರದಲ್ಲಿ 6 ಚೆಕ್ ಪೋಸ್ಟ್ಗಳು ಕಾರ್ಯನಿರ್ವಹಿಸಲಿವೆ ಎಂದರು. ಈಗಾಗಲೇ 3 ಜನರನ್ನು ಜಿಲ್ಲೆಯಿಂದ ಗಡಿಪಾರು ಮಾಡಲಾಗಿದೆ. ಇನ್ನೂ ನಾಲ್ವರ ಗಡಿಪಾರು ಮಾಡುವ ಪ್ರಸ್ತಾವನೆ ವಿಚಾರಣೆ ಹಂತದಲ್ಲಿದೆ. 1015 ಜನ ರೌಡಿಶೀಟರ್‌ ಗಳಿದ್ದಾರೆ ಎಂದರು.
ಮತದಾನ ಬಹಿಷ್ಕಾರ
ಜಿಲ್ಲೆಯ ಎಂಟು ಕಡೆಗಳಲ್ಲಿ ಮತದಾನ ಬಹಿಷ್ಕಾರ ಮಾಡುವುದಾಗಿ ಅಲ್ಲಿನ ಜನ ತಿಳಿಸಿದ್ದಾರೆ, ಎಲ್ಲರೂ ಮೂಲ ಸೌಕರ್ಯಕ್ಕೆ ಆಗ್ರಹಿಸಿ ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿದ್ದರು. ಸಂಬಂಧಪಟ್ಟಲ್ಲಿ ತಹಸೀಲ್ದಾರರು ಹೋಗಿ ಸಭೆ ನಡೆಸಿದ್ದಾರೆ. ಜನರ ಬೇಡಿಕೆಯನ್ನು ಸಂಬಂಧಪಟ್ಟ ಇಲಾಖೆಗೆ ಕಳಿಸಿ ಗ್ರಾಮಸ್ಥರ ಮನವೊಲಿಸುವ ಕೆಲಸ ನಡೆದಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net