ಮೈಸೂರಿನಲ್ಲಿ ಅಂಚೆ ನೌಕರರ ಸಂಘದ ಅಧಿವೇಶನ

32
Published on

ಮೈಸೂರು: ಅಖಿಲ ಭಾರತ ಅಂಚೆ ನೌಕರರ ಸಂಘದಿಂದ ನಗರದಲ್ಲಿ 40ನೇ ದ್ವೈವಾರ್ಷಿಕ ಅಧಿವೇಶನ ಆಯೋಜಿಸಲಾಗಿತ್ತು.
ಮೈಸೂರು ವಲಯ ಪ್ರತಿನಿಧಿ ಬೇಬಿ ಜೋಸೆಫ್ ಅಧಿವೇಶನಕ್ಕೆ ಚಾಲನೆ ನೀಡಿ ಮಾತನಾಡಿ, ದೇಶದಲ್ಲಿ ನಮ್ಮ ಸಂಘಟನೆ ಶಕ್ತಿಯುತವಾಗಿದ್ದು, ನಮಗೆ ಯಾವುದೇ ಸಂಘಟನೆಗಳ ಬೆಂಬಲದ ಅಗತ್ಯವಿಲ್ಲ. ಆದರೆ ಕೆಲವು ಸಂಘಟನೆಗಳು ಬೇಡಿಕೆ ಈಡೇರಿಸಲು ನಮ್ಮ ಹೋರಾಟ ಕಾರಣ ಎಂದು ಹೇಳಿಕೊಂಡು ಓಡಾಡುತ್ತಿದ್ದು, ಅಂತಹ ಸಂಘಟನೆಗಳಿಗೆ ಮನ್ನಣೆ ನೀಡಬೇಡಿ ಎಂದು ಕೋರಿದರು.
ನಮ್ಮ ಹೋರಾಟದ ಶ್ರಮದಿಂದ ಎಲ್ಲ ಸೌಲಭ್ಯಗಳು ದೊರೆಯುತ್ತಿವೆಯೇ ಹೊರತು ಬೇರೆ ಯಾರಿಂದಲೂ ಅಲ್ಲ. ಇದೇ ರೀತಿ ನಮ್ಮೊಳಗೆ ಬೇರೆ ಬೇರೆ ಸಂಘಟನೆಗಳನ್ನು ತರಬೇಡಿ. ಇದರಿಂದ ಕೆಲವರು ಬ್ಲಾೃಕ್‌ಮೇಲ್ ಮಾಡುತ್ತಾರೆ. ನಮ್ಮನ್ನು ತುಳಿಯುವವರನ್ನು ಬೆಂಬಲಿಸಿಕೊಂಡು ಬಂದರೆ ಮುಂದಿನ ದಿನಗಳಲ್ಲಿ ಕಷ್ಟವಾಗಲಿದೆ ಎಂದು ಹೇಳಿದರು.
ಅಧಿವೇಶನದಲ್ಲಿ 3ನೇ ವರ್ಗದ ಸಂಘಟನೆ ಅಮಾನ್ಯ ಮಾಡಿರುವುದನ್ನು ರದ್ದು ಮಾಡಲು ಹಾಗೂ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ನಡೆಯುವ ಸಮಾವೇಶಗಳ ಬಗ್ಗೆ ಚರ್ಚಿಸಲಾಯಿತು.
ಸಂಘದ ಅಭಿವೃದ್ಧಿಗೆ ಶ್ರಮಿಸಿದ ಉಪಾಧ್ಯಕ್ಷ ಸೈಯದ್ ಜಮೀಲ್, ಮಾಜಿ ಅಧ್ಯಕ್ಷ ಎಚ್.ಜಿ.ರಾಜು, ಮಾಜಿ ಕಾರ್ಯದರ್ಶಿಗಳಾದ ಎಚ್.ಎಸ್.ನಾಗರಾಜ್, ಜಿ.ಗುರುಸ್ವಾಮಿ ಅವರನ್ನು ಅಭಿನಂದಿಸಲಾಯಿತು. ವಿಭಾಗೀಯ ಕಾರ್ಯದರ್ಶಿ ಮತ್ತು ವಲಯ ಕಾರ್ಯಾಧ್ಯಕ್ಷ ಎಚ್.ಸುಂದರಯ್ಯ, ಖಜಾಂಚಿ ಎಂ.ಎನ್.ಗಿರಿಧರ್, ಕಾರ್ಯಕಾರಿಣಿ ಮಂಡಳಿ ಸದಸ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net