

ಬೆಂಗಳೂರು: ಲೋಕಸಭಾ ಚುನಾವಣೆಗೆ ಮನೆಯಿಂದಲೇ ಅಂಚೆ ಮತದಾನ ಮಾಡಲು ಹೆಸರು ನೋಂದಾಯಿಸಿದ್ದ ಹಿರಿಯ ನಾಗರಿಕರು ಹಾಗೂ ಅಂಗವಿಕಲರು ಭಾನುವಾರದವರೆಗೆ ಶೇ.86.75 ಮತದಾನ ಮಾಡಿ ಹುರುಪು ವ್ಯಕ್ತಪಡಿಸಿದ್ದಾರೆ.
ಬೆಂಗಳೂರು ನಗರದಲ್ಲಿ ಅಂಚೆ ಮತದಾನಕ್ಕಾಗಿ ಒಟ್ಟು 7,858 ಮಂದಿ ಹೆಸರು ನೋಂದಾಯಿಸಿದ್ದರು. ಮತದಾನದ ಮೊದಲ ದಿನವಾದ ಶನಿವಾರ 4,459 ಮಂದಿ ತಮ್ಮ ಹಕ್ಕು ಚಲಾಯಿಸಿದ್ದರು. ಭಾನುವಾರ 2,358 ಮಂದಿ ಮತದಾನ ಮಾಡಿದ್ದಾರೆ. ಇನ್ನುಳಿದ 1,041 ಮಂದಿ ಏ.18ರೊಳಗೆ ಮತ ಹಾಕಬೇಕಿದೆ. ಅಂಚೆ ಮತದಾನಕ್ಕಾಗಿಯೇ ನಿಯೋಜನೆಗೊಂಡಿರುವ ಚುನಾವಣಾ ಸಿಬ್ಬಂದಿ ಆಯಾ ಲೋಕಸಭಾ ಕ್ಷೇತ್ರದ ಬ್ಯಾಲೆಟ್ ಹಾಗೂ ಮತಪೆಟ್ಟಿಗೆ ಹೊತ್ತು ಹಿರಿಯರ ಮನೆ ಬಾಗಿಲಿಗೆ ತೆರಳಿ ಮತ ಹಾಕಿಸಿಕೊಂಡು ವಾಪಸಾಗಿದ್ದಾರೆ.
ಮತ ಚಲಾಯಿಸದೆ ಇಹಲೋಕ ತ್ಯಜಿಸಿದರು:
ಚುನಾವಣೆ ಘೋಷಣೆಗೆ ಮುನ್ನ 85 ವರ್ಷ ಮೇಲ್ಪಟ್ಟ ಹಿರಿಯರು ಮನೆಯಿಂದಲೇ ಮತ ಹಾಕಲು ಹೆಸರು ನೋಂದಾಯಿಸಿದ್ದರು. ಶನಿವಾರ ಮತ ಹಾಕಿಸಿಕೊಳ್ಳಲು ಚುನಾವಣಾ ಸಿಬ್ಬಂದಿ ಹಿರಿಯ ಮನೆಗೆ ಹೋದಾಗ 18 ಮಂದಿ ಈ ಮೊದಲೇ ಮೃತಪಟ್ಟಿರುವ ಮಾಹಿತಿ ಕಂಡು ಅಚ್ಚರಿಗೆ ಒಳಗಾದರು. ಭಾನುವಾರ ಕೂಡ ಮತ್ತೆ ನಗರದ ವಿವಿಧ ಭಾಗಗಳಲ್ಲಿ 17 ಮಂದಿ ಮೃತಪಟ್ಟಿರುವುದು ಕಂಡುಬಂದಿದೆ. ಹೆಸರು ನೋಂದಾಯಿಸಿದ್ದವರ ಪೈಕಿ ಈವರೆಗೆ ಮೃತರಾದವರ ಸಂಖ್ಯೆ 35ಕ್ಕೆ ಏರಿದಂತಾಗಿದೆ.
ರಾಜಧಾನಿಯಲ್ಲಿರುವ 28 ವಿಧಾನಸಭಾ ಕ್ಷೇತ್ರಗಳು ಐದು ಲೋಕಸಭಾ ಕ್ಷೇತ್ರಗಳಲ್ಲಿ ಹರಡಿಕೊಂಡಿವೆ. ಈ ಪೈಕಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಅಂಚೆ ಮತದಾನ ಶೇ.93 ಪ್ರಮಾಣದಷ್ಟು ಪೂರ್ಣಗೊಂಡಿದೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.