

ಕೊಳ್ಳೇಗಾಲ: ಉಳಿತಾಯ ಖಾತೆಯ 2,92,449 ರೂ.ಗಳನ್ನು ಸ್ವಂತಕ್ಕೆ ಬಳಕೆ ಮಾಡಿದ್ದ ದೂರಿನ ಮೇರೆಗೆ ಕಾಮಗೆರೆ ಉಪ ಅಂಚೆ ಕಚೇರಿಯಲ್ಲಿ ಪ್ರಭಾರವಾಗಿ ಕಾರ್ಯ ನಿರ್ವಹಿಸುತ್ತಿದ್ದ ಅಂಚೆ ಸಹಾಯಕನನ್ನು ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಕೊಳ್ಳೇಗಾಲ ಅಂಚೆ ಉಪ ವಿಭಾಗದಲ್ಲಿ ಅಂಚೆ ನಿರೀಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದ ಪುಟ್ಟಸ್ವಾಮಿ ಬಂಧಿತ ಆರೋಪಿ. ತಾಲೂಕಿನ ಕಾಮಗೆರೆ ಗ್ರಾಮದ ಉಪ ಅಂಚೆ ಪಾಲಕರಾಗಿ ಮಹದೇವಸ್ವಾಮಿ ಕಾರ್ಯನಿರ್ವಹಿಸುತ್ತಿದ್ದರು. ಈತ ಆ. 21 ರಿಂದ 23 ರವರೆಗೆ ರಜೆ ಇದ್ದ ಕಾರಣ ಕೊಳ್ಳೇಗಾಲ ಅಂಚೆ ಉಪ ವಿಭಾಗದಲ್ಲಿ ಅಂಚೆ ನಿರೀಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಪುಟ್ಟಸ್ವಾಮಿಯನ್ನು ಕಾಮಗೆರೆ ಉಪ ಅಂಚೆ ಕಚೇರಿಗೆ ಪ್ರಭಾರ ಜವಾಬ್ದಾರಿ ಹೊರಿಸಿ ಹಿರಿಯ ಅಧಿಕಾರಿಗಳ ಸೂಚನೆಯಂತೆ ನೇಮಕ ಮಾಡಲಾಗಿತ್ತು.
ಪುಟ್ಟಸ್ವಾಮಿ ಪ್ರಭಾರ ವಹಿಸಿಕೊಂಡು ಕಾರ್ಯನಿರ್ವಹಿಸುವಾಗ ಕಾಮಗೆರೆಯ ಉಪ ಅಂಚೆ ಕಚೇರಿಯ ಉಳಿತಾಯ ಖಾತೆಯಲ್ಲಿದ್ದ 2,92,449 ರೂ.ಗಳನ್ನು ಸ್ವಂತಕ್ಕೆ ಉಪಯೋಗಿಸಿಕೊಂಡು ಸರ್ಕಾರ-ಕ್ಕೆ ವಂಚನೆ ಮೋಸ ಮಾಡಿದ್ದರು. ಈ ಬಗ್ಗೆ ಕೊಳ್ಳೇಗಾಲ ಅಂಚೆ ಉಪ ವಿಭಾಗದ ನಿರೀಕ್ಷಕ ಮೂರ್ತಿ ನಾಯಕ್ ಗ್ರಾಮಾಂತರ ಪೊಲೀಸ್ ಠಾಣೆಗೆ ಪುಟ್ಟಸ್ವಾಮಿ ವಿರುದ್ಧ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪಿಎಸ್‌ಐ ಸುಪ್ರೀತ್ ಪ್ರಕರಣ ಆರೋಪಿ ಪುಟ್ಟಸ್ವಾಮಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
----------------