

ಬೆಂಗಳೂರು: ಅಂಚೆ ಗ್ರಾಹಕರ ಕುಂದು-ಕೊರತೆ ಆಲಿಸಿ ಪರಿಹಾರ ನೀಡುವ ಸಲುವಾಗಿ ಬೆಂಗಳೂರು ಪಶ್ಚಿಮ ವಿಭಾಗದ ಅಂಚೆ ಕಚೇರಿಗಳ ಹಿರಿಯ ಅಧೀಕ್ಷಕರ ಕಚೇರಿಯಲ್ಲಿ ಮಾ.11 ರಂದು ಬೆಳಗ್ಗೆ 11 ಗಂಟೆಗೆ ವಿಭಾಗೀಯ ಮಟ್ಟದ ಅಂಚೆ ಅದಾಲತ್ ಹಮ್ಮಿಕೊಳ್ಳಲಾಗಿದೆ.
ಗ್ರಾಹಕರು ತಮ್ಮ ದೂರುಗಳನ್ನು ಅಂಚೆ ಕಚೇರಿಗಳ ಹಿರಿಯ ಅಧೀಕ್ಷಕರು, ಬೆಂಗಳೂರು ಪಶ್ಚಿಮ ವಿಭಾಗ, ವಿದ್ಯಾ ಭಾರತಿ ಶಾಲೆಯ ಎದುರು, ಕಾರ್ಡ್ ರಸ್ತೆ, 2ನೇ ಹಂತದ ಪಿಒ ಕಟ್ಟಡ, ಬೆಂಗಳೂರು-560086, ಇವರಿಗೆ ಮಾ.6 ಅಥವಾ ಅದಕ್ಕೂ ಮೊದಲು ಕಳುಹಿಸಬಹುದಾಗಿದೆ.
ಉಳಿತಾಯ ಯೋಜನೆ ಮತ್ತು ಅಂಚೆ ಜೀವ ವಿಮೆಯ ಮೇಲಿನ ದೂರುಗಳು ಖಾತೆ ಸಂಖ್ಯೆ, ಪೋಸ್ಟಲ್ ಲೈಪ್ ಇನ್ಶೂರೆನ್ಸ್ ಪಾಲಿಸಿ ಸಂಖ್ಯೆ ಮತ್ತು ಠೇವಣಿದಾರರ/ವಿಮೆದಾರರ ಪೂರ್ಣ ವಿಳಾಸ, ಅಂಚೆ ಕಚೇರಿಯ ಹೆಸರು, ವಸೂಲಾತಿಯ ವಿವರಗಳು ಮತ್ತು ಅಂಚೆ ಇಲಾಖೆಯಿಂದ ಯಾವುದೇ ಉಲ್ಲೇಖ ಹೊಂದಿರಬೇಕು. ದೂರುಗಳನ್ನು ಸಾಮಾನ್ಯ ಅಥವಾ ನೋಂದಾಯಿತ ಅಂಚೆ ಮೂಲಕ ಕಳುಹಿಸಬೇಕು. ಕವರ್ ಮೇಲೆ ಡಾಕ್ ಅದಾಲತ್ ಎಂದು ಬರೆಯುವಂತೆ ಅಂಚೆ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.