

ಕೋಟ: ಭಾರತೀಯ ಅಂಚೆ ಇಲಾಖೆಯ ಉಡುಪಿ ಅಂಚೆ ವಿಭಾಗದ ಕೋಟ ಉಪ ಅಂಚೆ ಕಚೇರಿಯಲ್ಲಿ ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತ ಕೋಟ ಶಿವರಾಮ ಕಾರಂತರ ಶಾಶ್ವತ ಚಿತ್ರ ಸಹಿತ ಅಂಚೆ ಮೊಹರನ್ನು ಶುಕ್ರವಾರ ಬಿಡುಗಡೆ ಮಾಡಲಾಯಿತು.
ಉಡುಪಿ ಅಂಚೆ ವಿಭಾಗದ ಅಂಚೆ ಅಧೀಕ್ಷಕ ರಮೇಶ್ ಪ್ರಭು ಬಿಡುಗಡೆಗೊಳಿಸಿ ಮಾತನಾಡಿ, ನಾಡು ಕಂಡ ಶ್ರೇಷ್ಠ ಸಾಹಿತಿ ಕೋಟ ಶಿವರಾಮ ಕಾರಂತರ ವಿಶೇಷತೆ ಜನ ಮಾನಸದಲ್ಲಿ ಹಸಿರಾಗಿರಲು ಹಾಗೂ ಅವರ ವ್ಯಕ್ತಿತ್ವ ಸದಾ ನೆನಪಿನಲ್ಲಿರಲು ಭಾರತೀಯ ಅಂಚೆ ಇಲಾಖೆ ಪರ್ಮನೆಂಟ್ ಪಿಕ್ಟೋರಿಯಲ್ ಕ್ಯಾನ್ಸಲೇಷನ್ (ಶಾಶ್ವತ ಚಿತ್ರ ಸಹಿತ ಅಂಚೆ ಮೊಹರು )ನ ಮೂಲಕ ಗೌರವ ಸಲ್ಲಿಸುತ್ತಿದೆ ಎಂದರು.
ಯಾವುದೇ ಅಂಚೆ ಪರಿಕರಗಳ ಮೇಲೆ ಉಚಿತವಾಗಿ ಈ ಮೊಹರನ್ನು ಬಳಸಬಹುದಾಗಿದ್ದು ಜನ ಸಾಮಾನ್ಯರು, ಕಾರಂತರ ಅಭಿಮಾನಿಗಳು ಹಾಗೂ ಅಂಚೆ ಸಂಗ್ರಹಣಾಕಾರರು ಹೆಚ್ಚಿನ ಸಂಖ್ಯೆಯಲ್ಲಿ ಇದನ್ನು ಕವರ್, ಕಾರ್ಡ್, ಇನ್‌ಲ್ಯಾಂಡ್ ಲೆಟರ್ ಹೀಗೆ ಎಲ್ಲ ಅಂಚೆ ಪರಿಕರಗಳ ಮೇಲೆ ಮುದ್ರಿಸಿಕೊಂಡು ಅವರ ಹೆಸರು ಹಾಗೂ ಕೋಟ ಊರಿನ ಹೆಸರನ್ನು ಇನ್ನಷ್ಟು ಪ್ರಚುರ ಪಡಿಸಬಹುದು ಎಂದರು.
ಹಿರಿಯ ಅಂಚೆ ಚೀಟಿ ಸಂಗ್ರಾಹಕ ಎಂ.ಕೃಷ್ಣಯ್ಯ ಹಾಗೂ ಕೋಟ ಅಂಚೆ ಕಚೇರಿಯ ಉಪ ಅಂಚೆ ಪಾಲಕ ಜಯಪ್ರಕಾಶ್ ಶುಭ ಹಾರೈಸಿದರು. ಮಹೇಶ್ ಪ್ರಾರ್ಥಿಸಿದರು. ಉಡುಪಿ ಅಂಚೆ ವಿಭಾಗದ ಸಹಾಯಕ ಅಂಚೆ ಅಧೀಕ್ಷಕ ದಯಾನಂದ ದೇವಾಡಿಗ ಸ್ವಾಗತಿಸಿದರು. ಉಪ ಅಂಚೆ ನಿರೀಕ್ಷಕ ಶಂಕರ್ ಲಮಣಿ ವಂದಿಸಿದರು. ಉಡುಪಿ ಪ್ರಧಾನ ಅಂಚೆ ಕಚೇರಿಯ ಪೂರ್ಣಿಮಾ ಜನಾರ್ದನ್ ನಿರೂಪಿಪಿಸಿದರು. ಉಡುಪಿ ಅಂಚೆ ವಿಭಾಗೀಯ ಕಚೇರಿಯ ಪ್ರಜ್ವಲ್ ಸಹಕರಿಸಿದರು.