ನ.18ಕ್ಕೆ ಎಂಜಿಎಂ ಕಾಲೇಜಿನಲ್ಲಿ ಅಂಚೆ ಚೀಟಿ ಪ್ರದರ್ಶನ

udp-10-post
Published on

ಉಡುಪಿ: ಅಂಚೆ ವಿಭಾಗ ವತಿಯಿಂದ ನ.18 ಮತ್ತು 19 ರಂದು ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪ ಆವರಣದಲ್ಲಿ ಜಿಲ್ಲಾ ಮಟ್ಟದ ಅಂಚೆ ಚೀಟಿ ಪ್ರದರ್ಶನ ಕೃಷ್ಣಾಪೆಕ್ಸ್​ 2023 ಆಯೋಜಿಸಲಾಗಿದೆ ಎಂದು ಅಂಚೆ ಅಧೀಕ್ಷಕ ರಮೇಶ್​ ಪ್ರಭು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

18ರಂದು ಬೆಳಗ್ಗೆ 10 ಗಂಟೆಗೆ ಕರ್ನಾಟಕ ಪೋಸ್ಟ್​ ಮಾಸ್ಟರ್​ ಜನರಲ್​ ಕೆ. ಪ್ರಕಾಶ್​ ಉದ್ಘಾಟಿಸಲಿದ್ದಾರೆ. ಪೋಸ್ಟ್​ ಮಾಸ್ಟರ್​ ಜನರಲ್​ ಎಲ್​.ಕೆ. ದಾಸ್​ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾಹೆ ಸಹಕುಲಾಧಿಪತಿ ಡಾ. ಎಚ್​.ಎಸ್​. ಬಲ್ಲಾಳ್​, ಅಂಚೆ ಇಲಾಖೆ ಡೈರೆಕ್ಟರ್​ ಟಿ.ಎಸ್​ ಅಶ್ವತ ನಾರಾಯಣ ಮೊದಲಾದವರು ಭಾಗವಹಿಸಲಿದ್ದಾರೆ ಎಂದರು.

ಜಿಲ್ಲೆಯ ಪ್ರತಿಷ್ಠಿತ ಅಂಚೆ ಚೀಟಿ ಸಂಗ್ರಹಕಾರರು ಭಾಗವಹಿಸಲಿದ್ದು, ತಮ್ಮ ಸಂಗ್ರಹವನ್ನು ಪ್ರದರ್ಶಿಸಲಿದ್ದಾರೆ.ಈ ಪ್ರದರ್ಶನದಲ್ಲಿ ಸುಮಾರು 150ಕ್ಕೂ ಅಧಿಕ ಫಲಕಗಳಲ್ಲಿ ವಿವಿಧ ಅಂಚೆ ಚೀಟಿಗಳು ಹಾಗೂ ಅಂಚೆ ಪರಿಕರಗಳನ್ನು ಪ್ರದರ್ಶಿಸಲಾಗುವುದು. ಪ್ರಥಮ ವಿಭಾಗದಲ್ಲಿ ಇನ್ವಿಟೇಶನ್​ ಕ್ಲಾಸ್​( ಆಹ್ವಾನಿತರು)ನಲ್ಲಿ ಈ ಹಿಂದೆ ವಿವಿಧ ಪ್ರದರ್ಶನದಲ್ಲಿ ಪ್ರಶಸ್ತಿ ವಿಜೇತರಾದ ಜಿಲ್ಲೆಯ ಸಂಗ್ರಹಕಾರರು ಸಂಗ್ರಹವನ್ನು ಪ್ರದರ್ಶಿಸಲಿದ್ದಾರೆ. ಎರಡನೇ ವಿಭಾಗದಲ್ಲಿ ಜಿಲ್ಲೆಯ ಸಂಗ್ರಹಣಕಾರರು ತಮ್ಮ ಅಂಚೆಚೀಟಿಗಳ ಸಂಗ್ರಹವನು, ಮೂರನೇ ವಿಭಾಗದಲ್ಲಿ ಜಿಲ್ಲೆಯ ಯುವ ಜನ ಹಾಗು ಮಕ್ಕಳು ತಮ್ಮ ಸಂಗ್ರಹವನ್ನು ಪ್ರದರ್ಶಿಸಲಿದ್ದು ಉತ್ತಮ ಪ್ರದರ್ಶನಗಳಿಗೆ ಪ್ರಶಸ್ತಿಗಳನ್ನು ನೀಡಲಾಗುವುದು. ಮಕ್ಕಳಿಗಾಗಿ ಅಂಚೆ ಚೀಟಿ ಸಂಗ್ರಹಣೆಯ ಬಗ್ಗೆ ಕಾರ್ಯಾಗಾರವನ್ನು ಏರ್ಪಡಿಸಲಾಗುವುದು. ಈ ಸಂದರ್ಭದಲ್ಲಿ ನಾಲ್ಕು ವಿಶೇಷ ಅಂಚೆ ಲಕೋಟೆಗಳು ಮತ್ತು ಹನ್ನೊಂದು ಪಿಕ್ಚರ್​ ಪೋಸ್ಟ್​ ಕಾರ್ಡ್​ ( ಸಚಿತ್ರ ಅಂಚೆ ಕಾರ್ಡ್​ ) ಅನಾವರಣಗೊಳ್ಳಲಿವೆ ಎಂದು ಮಾಹಿತಿ ನೀಡಿದರು. ಅಧಿಕಾರಿಗಳಾದ ಕೃಷ್ಣರಾಜ ಭಟ್​, ವಸಂತ್​, ಪೂರ್ಣಿಮಾ ಜನಾರ್ದನ್​, ಸುರೇಶ್​ ಕೆ. ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net