

ಮದ್ದೂರು: ಅಂಚೆ ಇಲಾಖೆಯ ಸೇವೆಗಳು ಸಾರ್ವಕಾಲಿಕವಾಗಿದ್ದು ಪ್ರತಿಯೊಬ್ಬರಿಗೂ ಅನುಕೂಲ ಕಲ್ಪಿಸುತ್ತಿದೆ ಎಂದು ಕೃಷಿಕ್ ಲಯನ್ ಸಂಸ್ಥೆಯ ಆಡಳಿತಾಧಿಕಾರಿ ಕೆ.ಟಿ.ಹನುಮಂತು ಹೇಳಿದರು.
ಪಟ್ಟಣದ ಉಪ ಅಂಚೆ ಕಚೇರಿಯಲ್ಲಿ ಸೋಮವಾರ ಕೃಷಿಕ್ ಲಯನ್ಸ್ ಸಂಸ್ಥೆ ಮತ್ತು ನಂಜಮ್ಮ ಮೋಟೇಗೌಡ ಚಾರಿಟಬಲ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ವಿಶ್ವ ಅಂಚೆ ದಿನ ಹಾಗೂ ರಾಷ್ಟ್ರೀಯ ಅಂಚೆ ಸಪ್ತಾಹ-2023, ಅಂಚೆ ಸಿಬ್ಬಂದಿಗೆ ಅಭಿನಂದನೆ ಹಾಗೂ ಅಂಚೆ ಇಲಾಖೆಯ ಒಂದು ಅವಲೋಕನ ಕಾರ್ಯಕ್ರಮವನ್ನು ಅಂಚೆ ಚೀಟಿಗಳನ್ನು ವಿತರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಅಂಚೆ ಇಲಾಖೆ ಗ್ರಾಮೀಣ ಭಾಗದಲ್ಲಿ ಉತ್ತಮ ಕಾರ್ಯ ನಿರ್ವಹಿಸುತ್ತಿದ್ದು, ಸರ್ಕಾರದ ಸೇವೆಗಳನ್ನು ಮನೆ ಬಾಗಿಲಿಗೆ ತಲುಪಿಸುವ ಕೆಲಸ ಮಾಡುತ್ತಿದೆ. ಹೊಸ ಯೋಜನೆಗಳನ್ನು ಅನುಷ್ಠಾನ ಮಾಡುವ ಮೂಲಕ ಅಂಚೆ ಇಲಾಖೆ ತನ್ನ ಜೀವಂತಿಕೆಯನ್ನು ಉಳಿಸಿಕೊಂಡಿದೆ ಎಂದರು.
ಭ್ರಷ್ಟಾಚಾರ ರಹಿತವಾದ ಸೇವಾ ಮನೋಭಾವ ಹೊಂದಿರುವ ಅಂಚೆ ಇಲಾಖೆಯ ಸಿಬ್ಬಂದಿ ನಿರಂತರವಾಗಿ ಸೇವೆಗಳನ್ನು ನೀಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ಅಂಚೆ ಇಲಾಖೆಗೆ ವಿಸ್ತೃತವಾದ ಐತಿಹಾಸಿಕ ಇತಿಹಾಸವಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಸೇವೆಗಳನ್ನು ಅಂಚೆ ಇಲಾಖೆ ವತಿಯಿಂದ ಪಡೆಯುವ ಮೂಲಕ ಇಲಾಖೆಯನ್ನು ಇನ್ನಷ್ಟು ಬಲಿಷ್ಠಗೊಳಿಸಬೇಕಿದೆ. ಅಂಚೆ ಕಚೇರಿಯಲ್ಲಿ ಬಗೆಬಗೆಯ ಪತ್ರಗಳು, ಸ್ಟ್ಯಾಂಪ್, ಅಪಘಾತ ವಿಮೆ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ನೀಡಲಾಗುತ್ತಿದೆ ಅವುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಅಂಚೆ ಇಲಾಖೆಯ ಅಧಿಕ್ಷಕ ಎಂ.ಲೋಕನಾಥ್ ಅವರು ಮಾತನಾಡಿದರು. ಮಂಡ್ಯ ಅಂಚೆ ಅಧೀಕ್ಷಕರಾದ ಎಂ.ಲೋಕನಾಥ್, ಸಂಸ್ಕೃತಿ ಲಯನ್ಸ್ ಸಂಸ್ಥೆಯ ವಕೀಲ ಮಾದೇಗೌಡ ಹಾಗೂ ಕೆ.ಆರ್.ಶಶಿಧರ ಈಚಗೆರೆ, ಎಸ್.ರಮೇಶ್, ಅಪ್ಪಾಜಿ, ಅಮೃತ ಲಯನ್ಸ್ ಲೋಕೇಶ್, ಪೋಸ್ಟ್ ಮಾಸ್ತರರಾದ ಶ್ರೀಕಾಂತ್, ರಾಜು ಇದ್ದರು.
ಮದ್ದೂರು ಪಟ್ಟಣದ ಉಪ ಅಂಚೆ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಂಚೆ ಇಲಾಖೆಯ ಸಿಬ್ಬಂದಿ ಅಭಿನಂದಿಸಲಾಯಿತು. ಕೆ.ಟಿ.ಹನುಮಂತು, ಎಂ.ಲೋಕನಾಥ್, ಮಾದೇಗೌಡ, ಕೆ.ಆರ್.ಶಶಿಧರ್, ಎಸ್.ರಮೇಶ್, ಅಪ್ಪಾಜಿ, ಲೋಕೇಶ್ ಇದ್ದರು.