ಹಂದೇನಹಳ್ಳಿ ಪೋಸ್ಟ್ ಮಾಸ್ಟರ್ ಗೋಲ್‌ಮಾಲ್!, ಠೇವಣಿದಾರರಿಗೆ ಕೋಟ್ಯಂತರ ರೂ.ವಂಚನೆ, ತಲೆಮರೆಸಿಕೊಂಡ ಆರೋಪಿಗೆ ಖಾಕಿ ಹುಡುಕಾಟ

25 Sarjapura News And Photos 02(01)
Published on

ವಿಜಯವಾಣಿ ಸುದ್ದಿಜಾಲ ಸರ್ಜಾಪುರ
ಹಣ ಕಟ್ಟುವುದಾಗಿ ನಕಲಿ ಖಾತೆಗಳನ್ನು ಸೃಷ್ಟಿಸಿದ ಪೋಸ್ಟ್ ಮಾಸ್ಟರ್ ಒಬ್ಬ ಸಾರ್ವಜನಿಕರಿಗೆ ಕೋಟ್ಯಂತರ ರೂಪಾಯಿ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದ್ದು, ವಂಚನೆಗೊಳಗಾದ ಠೇವಣಿದಾರರು ಪೊಲೀಸ್ ಠಾಣೆ ಮೆಟ್ಟಿಲೇರಿರುವುದು ಹಂದೇನಹಳ್ಳಿಯಲ್ಲಿ ನಡೆದಿದೆ.
12 ವರ್ಷದಿಂದ ಹಂದೇನಹಳ್ಳಿ ಪೋಸ್ಟ್ ಮಾಸ್ಟರ್ ಆಗಿರುವ ಆನೇಕಲ್ ತಾಲೂಕು ಮಾಯಸಂದ್ರ ನಿವಾಸಿಯಾಗಿರುವ ಆರೋಪಿ ಮಂಜುನಾಥ್ ತಲೆಮರೆಸಿಕೊಂಡಿದ್ದು, ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಸತ್ತವರ ಪಾಸ್‌ಬುಕ್ ಬಳಕೆ:
ಹಿರಿಯ ನಾಗರಿಕರು, ಅನಕ್ಷರಸ್ಥರನ್ನು ಗುರಿಯಾಗಿಟ್ಟುಕೊಂಡು ಹಣ ಪಡೆದು ವಂಚಿಸಿದ್ದಾನೆ ಎನ್ನಲಾಗಿದೆ. ಸತ್ತವರ ಹೆಸರಿನಲ್ಲಿನ ಪಾಸ್‌ಪುಸ್ತಕಗಳನ್ನು ಪೋರ್ಜರಿ ಮಾಡಿ ಠೇವಣಿದಾರರಿಗೆ ನೀಡಿದ್ದಾನೆ. ಪಾಸ್‌ಬುಕ್‌ಗಳಲ್ಲಿ ಠೇವಣಿ ಮೊತ್ತವನ್ನು ಕೈಬರಹದಲ್ಲಿ ಬರೆದು ಹಣ ಜಮೆ ಮಾಡಿರುವುದಾಗಿ ನಂಬಿಸಿದ್ದಾನೆ. ಹಂದೇನಹಳ್ಳಿ ಶಾಖೆಯಲ್ಲಿ ಸಾವಿರಾರು ಖಾತೆಗಳು ಚಾಲ್ತಿಯಲ್ಲಿದ್ದು ಕೆಲವೊಬ್ಬರ ಖಾತೆಗೆ ಅರ್ಧದಷ್ಟು ಮೊತ್ತ ಜಮೆ ಮಾಡಿದ್ದರೆ ಹಲವರ ಖಾತೆಯಲ್ಲಿ ಶೂನ್ಯ ಮೊತ್ತವಿದೆ ಎನ್ನಲಾಗಿದೆ.

ಠೇವಣಿ ಹಣ ಪಡೆಯಲು ಬಂದಾಗ ವಂಚನೆ ಬಯಲು:
ಶಿಕ್ಷಣ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಮುನಿರತ್ನಮ್ಮ ಎಂಬುವರು ಜಮೆ ಮಾಡುವಂತೆ ಮಂಜುನಾಥ್‌ಗೆ ಹಣ ನೀಡಿದ್ದರು. ಇವರ ಪತಿಯ ಅನಾರೋಗ್ಯದ ಕಾರಣಕ್ಕೆ ಹಣ ತೆಗೆದುಕೊಡುವಂತೆ ಆರೋಪಿಗೆ ಮನವಿ ಮಾಡಿದ್ದರು. ಆದರೆ ಆರೋಪಿ ಮಂಜುನಾಥ್ 2 ವರ್ಷ ಠೇವಣಿ ಇಟ್ಟಿರುವುದರಿಂದ ಈಗ ಹಣ ಬರುವುದಿಲ್ಲ ಎಂದು ಪ್ರತಿಕ್ರಿಯಿಸಿದ್ದ. ಬೇಸತ್ತ ಮುನಿರತ್ನಮ್ಮ ಹಿರಿಯ ಅಧಿಕಾರಿಗಳಿಗೆ ಪಾಸ್‌ಪುಸ್ತಕ ತೋರಿಸಿ ಹಣ ನೀಡುವಂತೆ ಗೋಗರೆದಿದ್ದರು. ಅಧಿಕಾರಿಗಳು ಪರಿಶೀಲಿಸಿದಾಗ ಈ ಖಾತೆ ಹಂದೇನಹಳ್ಳಿ ಶಾಖೆಗೆ ಸೇರಿದ್ದಲ್ಲ ಎಂಬುದು ಗೊತ್ತಾಗಿದೆ ಜತೆಗೆ ಈ ಖಾತೆ ಮೃತ ವೆಂಕಟಮ್ಮ ಎಂಬುವರದ್ದಾಗಿದೆ ಎಂಬುದು ಖಚಿತವಾಗುತ್ತಿದ್ದಂತೆ ಪೋಸ್ಟ್‌ಮಾಸ್ಟರ್ ವಂಚನೆ ಪುರಾಣ ಬಿಚ್ಚಿಕೊಂಡಿದೆ.

ಅತ್ತಿಬೆಲೆ ಠಾಣೆಯಲ್ಲಿ ಇಲಾಖೆ ದೂರು:

ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಂದೇನಹಳ್ಳಿ ಗ್ರಾಮಕ್ಕೆ ಅಧಿಕಾರಿಗಳನ್ನು ಕಳುಹಿಸಿದ್ದು ಹಣ ಕಳೆದುಕೊಂಡವರ ಮಾಹಿತಿ ಕಲೆಹಾಕಲಾಗುತ್ತಿದೆ, ಸತ್ತವರ ಹೆಸರಿನಲ್ಲಿದ್ದ ಪಾಸ್‌ಬುಕ್‌ಗಳನ್ನು ದುರ್ಬಳಕೆ ಮಾಡಿಕೊಂಡು ವಂಚನೆ ಎಸಗಿರುವುದು ಮೇಲ್ನೋಟಕ್ಕೆ ಕಂಡುಬಂದಿದ್ದು ಆರೋಪಿ ವಿರುದ್ಧ ಅತ್ತಿಬೆಲೆ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ ಎಂದು ಕನಕಪುರ ಅಂಚೆಕಚೇರಿ ಉಪವಿಭಾಗದ ಅಧಿಕಾರಿ ಆನಂದ್ ತಿಳಿಸಿದ್ದಾರೆ.

ಯಾರೋ ಒಬ್ಬನಿಂದ ವಂಚನೆ ಪ್ರಕರಣ ನಡೆದಿದೆ, ಹಣ ಕಳೆದುಕೊಂಡವರಿಗೆ ಹಣ ವಾಪಸ್ ಕೊಡಿಸಲು ಪ್ರಯತ್ನ ನಡೆಸಲಾಗುವುದು, ಆರೋಪಿ ಕುಟುಂಬಸ್ಥರೂ ಇದಕ್ಕೆ ಸ್ಪಂದಿಸಿದ್ದಾರೆ, ಅಂಚೆಕಚೇರಿ ಮೇಲೆ ಯಾರೂ ವಿಶ್ವಾಸ ಕಳೆದುಕೊಳ್ಳಬಾರದು.

ಆನಂದ್, ಕನಕಪುರ ಅಂಚೆಕಚೇರಿ ಉಪವಿಭಾಗದ ಅಧಿಕಾರಿ

ನೂರಾರು ಜನ ಮಂಜುನಾಥ್ ಹೆಣೆದ ವಂಚನೆ ಬಲೆಗೆ ಸಿಕ್ಕಿಬಿದ್ದು ಹಣ ಕಳೆದುಕೊಂಡಿದ್ದಾರೆ. ಅಂಚೆ ಕಚೇರಿಯಾಗಲಿ ಅಥವಾ ಆರೋಪಿ ಕಡೆಯಿಂದಾಗಲಿ ನಮಗೆ ಹಣ ವಾಪಸ್ ಕೊಡಿಸಬೇಕು, ಚಿಲ್ಲರೆ ಹಣ ಕೂಡಿಟ್ಟು ಬೀದಿಗೆ ಬರುವಂತಾಗಿದೆ.
ಶೋಭಾ, ವಂಚನೆಗೊಳಗಾದ ಠೇವಣಿದಾರೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net