ಆನೆ ದಿನ ಅಂಚೆ ಲಕೋಟೆ ಬಿಡುಗಡೆ

post
Published on

ಮಡಿಕೇರಿ:

ಭಾರತೀಯ ಅಂಚೆ ಇಲಾಖೆ ವತಿಯಿಂದ ವಿಶ್ವ ಆನೆ ದಿನ-೨೦೨೫ ಪ್ರಯುಕ್ತ ವಿಶೇಷ ಅಂಚೆ ಲಕೋಟೆಯನ್ನು ಕೊಡಗು ವಿಭಾಗದ ಅರಣ್ಯ ಇಲಾಖೆಯ ಸಹಭಾಗಿತ್ವದಲ್ಲಿ ದುಬಾರೆ ಸಾಕಾನೆ ಶಿಬಿರದಲ್ಲಿ ಮಂಗಳವಾರ ಬಿಡುಗಡೆಗೊಳಿಸಲಾಯಿತು.

ಈ ವಿಶೇಷ ಅಂಚೆ ಲಕೋಟೆಯನ್ನು ಹರ್ಷ ಎಂಬ ಆನೆ ಹೊತ್ತಿದ್ದು ವಿಶೇಷವಾಗಿತ್ತು. ಈ ಕಾರ್ಯಕ್ರಮದಲ್ಲಿ ಕೊಡಗು ವೃತ್ತ ಸಿಸಿಎಫ್ ಮನೋಜ್ ಕುಮಾರ್ ತ್ರಿಪಾಟಿ, ಮಡಿಕೇರಿ ವಿಭಾಗ ಡಿಸಿಎಫ್ ಅಭಿಷೇಕ್, ಮಡಿಕೇರಿ ಎಸಿಎಫ್ ನೆಹರೂ, ಕುಶಾಲನಗರ ಆರ್‌ಎಫ್‌ಒ ರತನ್ ಕುಮಾರ್, ಅಂಚೆ ಇಲಾಖೆಯ ಕೊಡಗು ವಿಭಾಗದ ಅಧೀಕ್ಷ ಸೋಮಯ್ಯ ಹಾಗೂ Äಕ ಎರಡು ಇಲಾಖೆಗಳ ಅಧಿಕಾರಿಗಳು ಇದ್ದರು.

ದುಬಾರೆ ಸಾಕಾನೆ ಶಿಬಿರದಲ್ಲಿ ೩೪ ಆನೆಗಳಿವೆ. ಸಂಘರ್ಷದಲ್ಲಿರುವ ಕಾಡಾನೆಗಳನ್ನು ರಕ್ಷಿಸುವುದು, ಸೆರೆಹಿಡಿಯುವುದು, ಸ್ಥಳಾಂತರ ಮಾಡುವುದು ಮತ್ತು ಪಳಗಿಸುವುದು ಈ ದುಬಾರೆ ಸಾಕಾನೆ ಶಿಬಿರದ ಉದ್ದೇಶವಾಗಿದೆ.

ಇದರ ಜತೆಗೆ ಗಾಯಗೊಂಡ ಕಾಡಾನೆಗಳು ಹಾಗೂ ತಾಯಿ ಕಳೆದುಕೊಂಡ ಆನೆ ಮರಿಗಳನ್ನು ಸಹ ಈ ಶಿಬಿರಕ್ಕೆ ತರಲಾಗುತ್ತದೆ. ಅವುಗಳನ್ನು ಪೋಷಿಸಲು ಮತ್ತು ಬೆಳೆಸಲು ಬಳಸಲಾಗುತ್ತದೆ. ಇದು ವನ್ಯಜೀವಿ ಉತ್ಸಾಹಿಗಳು ಮತ್ತು ಆನೆಗಳ ಗುಣ ಲಕ್ಷಣಗಳು ಮತ್ತು ನಡವಳಿಕೆಯನ್ನು ಅರ್ಥಮಾಡಿಕೊಳ್ಳಲು ಆಸಕ್ತಿ ಹೊಂದಿರುವವರಿಗೆ ಶಿಕ್ಷಣದ ಕೇಂದ್ರವಾಗಿದೆ. ಇದು ಪರಿಸರ ಪ್ರವಾಸೋದ್ಯಮದ ಕೇಂದ್ರವೂ ಆಗಿದೆ. ವಿಶ್ವ ಪ್ರಸಿದ್ಧ ಮೈಸೂರು ದಸರಾ ಅಂಬಾರಿಗಾಗಿ ಆನೆಗಳನ್ನು ಸಹ ಈ ಶಿಬಿರದಿಂದಲೇ ಕಳುಹಿಸಲಾಗುತ್ತದೆ ಎಂದು ಕೊಡಗು ವಿಭಾಗದ ಅಂಚೆ ಅಧೀಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net