ಕರೊನಾ ಸೋಂಕಿತನ ಪಾಸಿಟಿವ್ ಹೆಜ್ಜೆ!

corona
Published on

ಕೋಟ: ಉಡುಪಿಯ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹೋಟೆಲ್ ಮಾಲೀಕರೊಬ್ಬರು ತಮ್ಮ ಆರೋಗ್ಯ ಸ್ಥಿತಿ ಬಗ್ಗೆ ಹಬ್ಬಿಸಲಾದ ಅಪಪ್ರಚಾರ ವಿರುದ್ಧ ನೆಚ್ಚಿನ ನಟ ಡಾ.ರಾಜ್‌ಕುಮಾರ್ ಹಾಡಿಗೆ ಹೆಜ್ಜೆ ಹಾಕುವ ಮೂಲಕ ಪ್ರತ್ಯುತ್ತರ ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕರೊನಾ ಬಗ್ಗೆ ಭಯಬೇಡ, ವರದಿ ಪಾಸಿಟಿವ್ ಬಂದರೆ ಮುಖ್ಯವಾಗಿ ಬೇಕಾದುದು ಧೈರ್ಯ ಎಂದು ಸಾರ್ವಜನಿಕರಿಗೆ ಕಿವಿಮಾತನ್ನೂ ಹೇಳಿದ್ದಾರೆ.

ಕೋಟದ ಹೋಟೆಲ್ ಮಾಲೀಕರೊಬ್ಬರು ಕರೊನಾ ಪಾಸಿಟಿವ್ ಹಿನ್ನೆಲೆಯಲ್ಲಿ ಉಡುಪಿಯ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆ ಬಳಿಕ ಈ ಪರಿಸರದಲ್ಲಿ ಮತ್ತಷ್ಟು ಪಾಸಿಟಿವ್ ಪ್ರಕರಣ ಪತ್ತೆಯಾಗಿತ್ತು. ಇದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡಿದ್ದಲ್ಲದೆ, ಅವರ ಆರೋಗ್ಯ ಸ್ಥಿತಿ ಬಗ್ಗೆ ಅಪಪ್ರಚಾರವೂ ನಡೆದಿತ್ತು.

ಇದನ್ನು ತಿಳಿದ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹೋಟೆಲ್ ಮಾಲೀಕ, ನಾನು ಇಲ್ಲಿ ಸೇಫ್ ಆಗಿ ಇದ್ದೇನೆ ಎಂಬ ಹಲವು ವಿಡಿಯೋ ತುಣುಕುಗಳನ್ನು ಪತ್ನಿ ಹಾಗೂ ಪರಿಚಯದವರಿಗೆ ಕಳುಹಿಸಿದ್ದಾರೆ. ಈ ವಿಡಿಯೋ ವಾಟ್ಸಾೃಪ್, ಫೇಸ್‌ಬುಕ್‌ಗಳಲ್ಲಿಯೂ ಹರಿದಾಡತೊಡಗಿತು.

ಕೋಟದಲ್ಲಿ ಹಲವು ವರ್ಷಗಳಿಂದ ಹೋಟೆಲ್ ಉದ್ಯಮ ಮಾಡಿಕೊಂಡಿದ್ದೇನೆ. ಕರೊನಾ ಬಂದಾಗ ಯಾರ ಬಗ್ಗೆಯೂ ಸಮಾಜದಲ್ಲಿ ಅಪಪ್ರಚಾರ ಮಾಡಬಾರದು. ಮೊದಲು ಕರೊನಾವನ್ನು ನಾಶ ಮಾಡಬೇಕಿದೆ. ಎಲ್ಲರೂ ಸುರಕ್ಷಿತರಾಗಿರಬೇಕು, ಜಾಗೃತಿ ಮೂಡಿಸಬೇಕು ಎಂಬ ಕಾರಣಕ್ಕೆ ವಿಡಿಯೋ ಮಾಡಿದ್ದೆ. ಹೋಟೆಲ್ ಮಾಲೀಕ ಕೋಟ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net