ಕುಡಿಯುವ ನೀರಿಗಾಗಿ ಯುದ್ಧ ಸಂಭವಿಸುವ ಸಾಧ್ಯತೆ

03-FEB-GPT-3
ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವಿಶ್ವ ಜೌಗು ಪ್ರದೇಶದ ದಿನಾಚರಣೆ ಅಂಗವಾಗಿ ಜೌಗು ಪ್ರದೇಶದ ಫೋಟೋಗಳನ್ನು ಪ್ರದರ್ಶಿಸಲಾಯಿತು. ಆರ್.ಕೆ.ಮಧು, ಮಹದೇವಪ್ರಸಾದ್, ನಂಜುಂಡಸ್ವಾಮಿ ಇದ್ದರು.
Published on

ಗುಂಡ್ಲುಪೇಟೆ: ಜೌಗು ಪ್ರದೇಶದ ರಕ್ಷಣೆ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಿ ಯುದ್ಧ ಸಂಭವಿಸುವ ಸಾಧ್ಯತೆ ಇದೆ ಎಂದು ಅಂತಾರಾಷ್ಟ್ರೀಯ ಪ್ರಶಸ್ತಿ ವಿಜೇತ ಛಾಯಾಗ್ರಾಹಕ ಆರ್.ಕೆ.ಮಧು ಹೇಳಿದರು.

ತಾಲೂಕಿನ ತೆರಕಣಾಂಬಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ವಿಶ್ವ ಜೌಗು ಪ್ರದೇಶದ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. 1971 ರಲ್ಲಿ ಇರಾನ್ ದೇಶದ ರಾಮಸಾರ್ ಎಂಬಲ್ಲಿ ವಿನಾಶದ ಹಾದಿ ಹಿಡಿದಿರುವ ಜೌಗು ಪ್ರದೇಶದ ಸಂರಕ್ಷಣೆಗೆ ವಿಶ್ವಮಟ್ಟದ ಸಭೆಯಲ್ಲಿ ತೀರ್ಮಾನಕೈಗೊಂಡ ನಂತರ ವಿಶ್ವಜೌಗು ಪ್ರದೇಶದ ದಿನವನ್ನು ಆಚರಿಸಲಾಗುತ್ತಿದೆ. ಭಾರತದಲ್ಲಿ ಪ್ರಸ್ತುತ 75 ರಾಮಸಾರ್ ಜೌಗು ಪ್ರದೇಶವಿದೆ. ಕರ್ನಾಟಕದ ರಂಗನತಿಟ್ಟು, ಅಂಕಸಮುದ್ರ, ಅಘನಾಶಿನಿ ಹಾಗೂ ಮಾಗಡಿ ಕೆರೆಗಳು ರಾಮಸಾರ್ ಪಟ್ಟ ಹೊಂದಿದ್ದು ಪರಿಸರಕ್ಕೆ ತಮ್ಮದೆ ಆದ ಕೊಡುಗೆ ಹಾಗೂ ಕಾಣಿಕೆ ನೀಡುತ್ತಾ ಬಂದಿವೆ. ಭಾರತದ ರೇಣುಕಾಧಾಮವು ವಿಶ್ವದ ಅತಿ ಚಿಕ್ಕ ರಾಮಸಾರ್ ಪ್ರದೇಶವಾಗಿದ್ದು ಕೇವಲ 49 ಎಕರೆ ವಿಸ್ತಾರವಿದ್ದರೆ, ದಕ್ಷಿಣ ಅಮೆರಿಕದ ಪ್ಯಾನ್ ಟೆಲ್ ಲೇಕ್ ವಿಶ್ವದ ಅತಿವಿಸ್ತಾರವಾದ ರಾಮಸಾರ್ ಆಗಿದ್ದು 42 ಸಾವಿರ ಎಕರೆ ಪ್ರದೇಶದಲ್ಲಿದೆ.

ಭಾರತದಲ್ಲಿ 3 ರೀತಿಯ ಜೌಗುಗಳಿದ್ದು ಅಲ್ಲಿ ಹುಲ್ಲುಗಳು, ಮರಗಳು ಹಾಗೂ ಕಾಂಡ್ಲವನವಿದೆ ಗಣಿಗಾರಿಕೆ, ನದಿತಿರುವು, ಡ್ಯಾಂಗಳು, ವಿದ್ಯುತ್ ಉತ್ಪಾದನೆಯಿಂದ ಇವುಗಳೂ ವಿನಾಶದಂಚಿನಲ್ಲಿದ್ದು ಇವುಗಳನ್ನು ಸಂರಕ್ಷಣೆ ಮಾಡಲೇಬೇಕಾಗಿದೆ. ಹಲವು ಹಕ್ಕಿ, ಜೀವವೈವಿಧ್ಯಕ್ಕೆ ಹೆಸರಾಗಿವರು ಜೌಗುಪ್ರದೇಶದ ರಕ್ಷಣೆ ಮಾಡದಿದ್ದರೆ ಮುಂದೆ ಕುಡಿವ ನೀರಿಗೂ ಹಾಹಾಕಾರ ಉಂಟಾಗುವ ಸಾಧ್ಯತೆ ಇದೆ ಎಂದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಮಹದೇವ ಪ್ರಸಾದ್, ಶಿಕ್ಷಕರಾದ ನಂಜುಂಡ ಸ್ವಾಮಿ, ಮಂಜು ಹಾಗೂ ವಿದ್ಯಾರ್ಥಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net