

ಹುಬ್ಬಳ್ಳಿ: ಲೋಂಡಾದಲ್ಲಿ ಸೀಮಿತ ಎತ್ತರದ ‘ಸಬ್ವೇ’ಯನ್ನು ಕೇವಲ 90 ದಿನಗಳಲ್ಲಿ ನಿರ್ವಿುಸಿರುವುದು ಲಿಮ್ಕಾ ದಾಖಲೆ ಪುಸ್ತಕದಲ್ಲಿ ಸೇರ್ಪಡೆಯಾಗುವ ಸಾಧ್ಯತೆ ಇದೆ. ಸಾಮಾನ್ಯವಾಗಿ ಇಂತಹ ಸಬ್ವೇಗಳ ನಿರ್ವಣಕ್ಕೆ ಕನಿಷ್ಠ 18ರಿಂದ 24 ತಿಂಗಳುಗಳು ಬೇಕಾಗುತ್ತವೆ ಎಂದು ನೈಋತ್ಯ ರೈಲ್ವೆ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ನೈಋತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕ ಅಜಯಕುಮಾರ ಸಿಂಗ್ ಅವರು ಭಾನುವಾರ ಹುಬ್ಬಳ್ಳಿ-ಲೋಂಡಾ ಭಾಗದಲ್ಲಿ ವಿಂಡೋ ಟ್ರೇಲಿಂಗ್ ನಿರೀಕ್ಷಣೆ ನಡೆಸಿದರು. ಇದೇ ಸಮಯದಲ್ಲಿ ಅವರು ಈ ಸಬ್ವೇ ಪರಿಶೀಲಿಸಿದರು.
ಈ ಕಾಮಗಾರಿಯ ವೆಚ್ಚ 6.12 ಕೋಟಿ ರೂ. 90 ದಿನಗಳ ಅವಧಿಯಲ್ಲಿ ಅನುಮೋದನೆ, ಅಂದಾಜು ವೆಚ್ಚ ಸಿದ್ಧಪಡಿಸುವುದು, ಮಂಜೂರಾತಿ, 25 ಆರ್ಸಿಸಿ ಬಾಕ್ಸ್ಗಳನ್ನು ಅಚ್ಚು ಹಾಕುವುದು, ಅವುಗಳನ್ನು ಜೋಡಿಸುವುದು, ಕಾಮಗಾರಿಗಾಗಿ 36 ಗಂಟೆಗಳ ಟ್ರಾಫಿಕ್ ಬ್ಲಾಕ್ಗೆ ಅನುಮತಿ ಪಡೆಯುವುದು, ವಿಂಗ್ ವಾಲ್ಗಳ ನಿರ್ಮಾಣ ಹಾಗೂ ಇತರ ಕಾರ್ಯಗಳನ್ನು ಪೂರ್ಣಗೊಳಿಸಲಾಯಿತು.
ನಿರೀಕ್ಷಣೆಯ ವೇಳೆ ಈ ಸಬ್ ವೇ ಬದಿಯಲ್ಲಿ ಸಸಿಗಳನ್ನು ನೆಡಲಾಯಿತು. ವಲಯದ ಪ್ರಧಾನ ಮುಖ್ಯ ಇಂಜಿನಿಯರ್ ವಿಪುಲ್ ಕುಮಾರ್, ಪ್ರಧಾನ ಮುಖ್ಯ ಪರಿಚಾಲನಾ ವ್ಯವಸ್ಥಾಪಕ ಎಚ್.ಎಸ್. ವರ್ವ, ಹುಬ್ಬಳ್ಳಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅರವಿಂದ ಮಾಲಖೇಡೆ, ಪ್ರಧಾನ ಮುಖ್ಯ ಸುರಕ್ಷತಾ ಅಧಿಕಾರಿ ಎಂ.ಎ.ವಿ. ರಾಮಾನುಜಮ್ ಪ್ರಧಾನ ಮುಖ್ಯ ಯಾಂತ್ರಿಕ ಇಂಜಿನಿಯರ್ ಪಿ. ರವಿಕುಮಾರ್, ಪ್ರಧಾನ ಮುಖ್ಯ ಸಿಗ್ನಲ್ ಮತ್ತು ಟೆಲಿಕಮ್ಯುನಿಕೇಷನ್ ಇಂಜಿನಿಯರ್ ಪಿ.ವಿ. ರಾಜಶೇಖರ್ ಹಾಗೂ ಇತರ ಅಧಿಕಾರಿಗಳು ಇದ್ದರು ಎಂದು ಪ್ರಕಟಣೆ ತಿಳಿಸಿದೆ.