

ಸಿದ್ದಾಪುರ: ತಾಲೂಕಿನ ಕಾನಸೂರು ಹಾಗೂ ಹೇರೂರು ಹೆಗ್ಗರಣೆ ಸಂಪರ್ಕಿಸುವ ಸೊಂಗೆಮನೆ ಉಂಚಳ್ಳಿ ಫಾಲ್ಸ್ ಮುಖ್ಯರಸ್ತೆ ಹೊಸ್ಕೊಪ್ಪ ಸಮೀಪ ಕುಸಿಯುತ್ತಿದ್ದು ಯಾವುದೇ ಕ್ಷಣದಲ್ಲಿ ಸಂಚಾರ ಸ್ಥಗಿತಗೊಳ್ಳುವ ಸಾಧ್ಯತೆ ಇದೆ. ಲೋಕೋಪಯೋಗಿ ಇಲಾಖೆ ಈ ಕುರಿತು ಸೂಕ್ತ ಕ್ರಮಕೈಗೊಳ್ಳಬೇಕಾಗಿದೆ.
ಈಗಾಗಲೇ ದರೆ ಕುಸಿತಗೊಂಡು ಕಂದಕ ಬಿದ್ದು, ಡಾಂಬರ ರಸ್ತೆಯನ್ನು ಆಕ್ರಮಿಸಿದೆ. ರಸ್ತೆ ಕುಸಿತಗೊಳ್ಳುತ್ತಿದ್ದರೂ, ಈ ಸ್ಥಳದಲ್ಲಿ ಯಾವುದೇ ಸೂಚನಾ ಫಲಕವನ್ನು ಲೋಕೋಯೋಗಿ ಇಲಾಖೆ ಅಳವಡಿಸಿಲ್ಲ. ರಸ್ತೆ ಮತ್ತಷ್ಟು ಕುಸಿತಗೊಂಡರೆ ಈಭಾಗದ ಜನತೆಗೆ ಪರ್ಯಾಯ ಮಾರ್ಗ ಇಲ್ಲ. ಇದು ಗೊತ್ತಿದ್ದರೂ ಲೋಕೋಪಯೋಗಿ ಇಲಾಖೆ ಮೌನವಾಗಿರುವುದು ಯಾಕೆ ಎಂಬ ಪ್ರಶ್ನೆ ಮೂಡಿದೆ.
ರಸ್ತೆ ಸಂಚಾರ ಸ್ಥಗಿತಗೊಂಡರೆ ವಿದ್ಯಾರ್ಥಿಗಳು ಕಾನಸೂರು, ಕೋಡ್ಸರ, ಶಿರಸಿ, ಯಡಳ್ಳಿ ಶಾಲೆ-ಕಾಲೇಜ್‌ಗಳಿಗೆ ತೆರಳಲು ತೊಂದರೆಯಾಗಲಿದೆ. ಮುಖ್ಯವಾಗಿ ಸಾರಿಗೆ ಸಂಪರ್ಕ ಕಡಿತಗೊಂಡರೆ ಎಲ್ಲ ವಾಹನ ಸವಾರರು, ಪ್ರವಾಸಿಗರು ಸಂಕಟಪಡಬೇಕಾಗುತ್ತದೆ. ಯಾರಾದರೂ ಅನಾರೋಗ್ಯದಿಂದ ಬಳಲಿದರೆ ಅವರನ್ನು ಪಟ್ಟಣದ ಆಸ್ಪತ್ರೆಗೂ ಕರೆದುಕೊಂಡು ಹೋಗುವುದು ದುಸ್ಥರವಾಗಲಿದೆ. ಕೂಲಿಕಾರರ, ಜನಸಾಮಾನ್ಯರ ಸ್ಥಿತಿ ಅಯೋಮಯವಾಗುತ್ತದೆ.
ರಸ್ತೆ ನಿರ್ವಹಣೆ ಮಾಡುತ್ತಿರುವ ಲೋಕೋಪಯೋಗಿ ಇಲಾಖೆ ರಸ್ತೆ ಕುಸಿತವಾದ ಸ್ಥಳದಲ್ಲಿ ಸೂಚನಾ ಫಲಕ ಹಾಕಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಹೊಸ್ಕೊಪ್ಪ ಸಮೀಪ ರಸ್ತೆ ಕುಸಿತಗೊಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ನಾಮಫಲಕ ಅಳವಡಿಸಲಾಗುವುದು. ವಾಹನ ಸಂಚಾರ ಸ್ಥಗಿತಗೊಳ್ಳದಂತೆ ವ್ಯವಸ್ಥೆ ಮಾಡಲಾಗುವುದು. ಶಶಿಕಾಂತ ಗೌಡ, ಲೋಕೋಪಯೋಗಿ ಇಲಾಖೆ ಎಇಇ ಸಿದ್ದಾಪುರ.