

ಕೋಲಾರ: ಶ್ರೀನಿವಾಸಪುರ ತಾಲೂಕಿನ ಹೊಗಳಗೆರೆ ಮತ್ತು ಚಿಂತಕುಂಟೆ ಅರಣ್ಯ ಪ್ರದೇಶದಲ್ಲಿ ಒತ್ತುವರಿಯಾಗಿದ್ದ ಸುಮಾರು 150 ಎಕರೆ ಪ್ರದೇಶವನ್ನು ಕೋಲಾರ ಅರಣ್ಯ ಇಲಾಖೆ ವತಿಯಿಂದ ಬುಧವಾರ ತೆರವು ಮಾಡಲಾಯಿತು.
ಅರಣ್ಯ, ಜೀವಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಸೂಚನೆ ಮೇರೆಗೆ ಕೋಲಾರ ಅರಣ್ಯ ಸಂರಕ್ಷಣಾಧಿಕಾರಿ ಏಡುಕೊಂಡಲವಾಡ ನೇತೃತ್ವದಲ್ಲಿ ಸುಮಾರು 20 ಜೆಸಿಬಿ ಮತ್ತು ಬುಲ್ಡೋಜರ್ಗಳ ಮೂಲಕ ತೆರವು ಕಾರ್ಯಾಚರಣೆ ನಡೆಸಲಾಯಿತು. ನೂರು ವರ್ಷಗಳ ಹಿಂದೆಯೇ ಅಂದಿನ ಮಹಾರಾಜರು ಅರಣ್ಯ ಎಂದು ಅಧಿಸೂಚನೆ ಹೊರಡಿಸಿದ್ದರೂ, 1990ರ ದಶಕದಲ್ಲಿ ಇಲ್ಲಿ ಒತ್ತುವರಿ ಆಗಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಕಾನೂನಿನ ಚೌಕಟ್ಟಿನಲ್ಲಿ ಮರು ವಶಕ್ಕೆ ಸಚಿವರು ಸೂಚನೆ ನೀಡಿದ್ದರು.
ಸಚಿವ ಈಶ್ವರ ಖಂಡ್ರೆ ಆದೇಶದಂತೆ ಬುಧವಾರ ಅರಣ್ಯ ಇಲಾಖೆ ಸಿಬ್ಬಂದಿ, ಜೆಸಿಬಿಗಳೊಂದಿಗೆ ಶ್ರೀನಿವಾಸಪುರದ ಸರ್ವೇ ನಂ.90ರಲ್ಲಿ 97 ಎಕರೆ, ಸರ್ವೇ ನಂ. 84 ಮತ್ತು 85ರಲ್ಲಿ 38 ಎಕರೆ, ಸರ್ವೇ ನಂ.51ರಲ್ಲಿ 12 ಎಕರೆ ಹಾಗೂ ಆವಲಕುಪ್ಪ ಗ್ರಾಮದ ಸರ್ವೇ ನಂ.135ರಲ್ಲಿ 4 ಎಕರೆ ಜಮೀನಿನಲ್ಲಿ ಕಾರ್ಯಾಚರಣೆ ಕೈಗೊಂಡು ಶೆಡ್, ಮಾವಿನ ಮರಗಳು ಮತ್ತು ಕೋಳಿಫಾರಂ ತೆರವು ಮಾಡಿ ಒಟ್ಟು 150 ಎಕರೆ ಅರಣ್ಯ ಭೂಮಿ ವಶಪಡಿಸಿಕೊಂಡಿದ್ದಾರೆ.
ಮೊದಲ ಹಂತದ ಕಾರ್ಯಾಚರಣೆ: 3,044 ಎಕರೆ ಭೂಮಿ ಶ್ರೀನಿವಾಸಪುರ ತಾಲೂಕಿನಲ್ಲಿ ಒತ್ತುವರಿಯಾಗಿದ್ದು, ಮೊದಲನೇ ಹಂತದಲ್ಲಿ 150 ಎಕರೆ ಒತ್ತುವರಿ ತೆರವು ಮಾಡಲಾಗಿದೆ. ಹಂತ ಹಂತವಾಗಿ ತಾಲೂಕಿನಲ್ಲಿ ಒತ್ತುವರಿ ಯಾಗಿರುವ ಎಲ್ಲ ಅರಣ್ಯ ಭೂಮಿ ವಶಪಡಿಸಿಕೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಜಯವಾಣಿ ವರದಿ ಪ್ರಕಟ: ಜಿಲ್ಲಾದ್ಯಂತ 3,200 ಎಕರೆ ಅರಣ್ಯ ಭೂಮಿಯನ್ನು ಪ್ರಭಾವಿಗಳೂ ಸೇರಿದಂತೆ ಇತರರು ಒತ್ತುವರಿ ಮಾಡಿಕೊಂಡಿದ್ದು ಅರಣ್ಯ ಇಲಾಖೆ ಹಂತ ಹಂತವಾಗಿ ತೆರವು ಮಾಡಲಿದೆ ಎಂದು ವಿಜಯವಾಣಿ ಯಲ್ಲಿ ಆ.3ರಂದು ವರದಿ ಪ್ರಕಟಿಸಲಾಗಿತ್ತು. ಶ್ರೀನಿವಾಸಪುರ ತಾಲೂಕಿನಲ್ಲಿಯೇ 3044 ಎಕರೆ ಅರಣ್ಯ ಭೂಮಿಯನ್ನು 150ಕ್ಕೂ ಅಧಿಕ ಮಂದಿ ಒತ್ತುವರಿ ಮಾಡಿಕೊಂಡಿದ್ದು ಮೊದಲನೇ ಹಂತದಲ್ಲಿ 15 ಜನರಿಗೆ ನೋಟಿಸ್ ನೀಡಲಾಗಿತ್ತು. ಅವರಿಂದ ಉತ್ತರ ಬಾರದಿರುವ ಹಿನ್ನೆಲೆಯಲ್ಲಿ ಇಲಾಖೆ ಒತ್ತುವರಿ ಕ್ರಮಕ್ಕೆ ಮುಂದಾಗಿದೆ.
ಹಲ್ಲೆಗೆ ಮುಂದಾದವರ ಮೇಲೆ ಕೇಸು ದಾಖಲು: ಬೆಳಗ್ಗೆ ಕಾರ್ಯಾಚರಣೆಯ ವೇಳೆ ಒತ್ತುವರಿದಾರರು ಭೂಮಿಗೆ ಸಂಬಂಧಿಸಿದಂತೆ ಸುಳ್ಳು ದಾಖಲೆಗಳನ್ನು ಸೃಷ್ಟಿ ಮಾಡಿ ನಮ್ಮ ಮೇಲೆ ಹಾಗೂ ಜೆಸಿಬಿ ವಾಹನದ ಮೇಲೆ ಹಲ್ಲೆ ನಡೆಸಿದ ಪರಿಣಾಮ ಜೆಸಿಬಿ ವಾಹನವು ಸ್ವಲ್ಪ ಜಖಂಗೊಂಡಿದ್ದು, ಹಲ್ಲೆ ಮಾಡಿರುವವರ ಮೇಲೆ ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ದೌರ್ಜನ್ಯ ಮಾಡಿದವರ ಮೇಲೆ ಕ್ರಮಕೈಗೊಳ್ಳಲು ಪೊಲೀಸ್ ಇಲಾಖೆಗೆ ಒತ್ತಾಯಿಸುವುದಾಗಿ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಏಡುಕೊಂಡಲವಾಡ ತಿಳಿಸಿದರು. ಕಾರ್ಯಾಚರಣೆಯಲ್ಲಿ 150 ಅರಣ್ಯ ಇಲಾಖೆ ಸಿಬ್ಬಂದಿ, ಡಿವೈಎಸ್ಪಿ, ಸರ್ಕಲ್ ಇನ್ಸ್ಪೆಕ್ಟರ್ ಸೇರಿದಂತೆ 50ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಹಾಗೂ ಕೋಲಾರದ ಎ.ಸಿ.ಎಫ್. ಸುಮಂತ್, ಶ್ರೀನಿವಾಸಪುರ ಆರ್.ಎಫ್.ಒ ಮಹೇಶ್ ಕುಮಾರ್, ಮುಳಬಾಗಿಲು ಆರ್ಎಫ್ಒ ಜ್ಯೋತಿ ಭಾಗವಹಿಸಿದ್ದರು.
ಈಗಾಗಲೇ ಸುಮಾರು 10 ವರ್ಷಗಳಿಂದ ಮಾವಿನ ಮರಗಳನ್ನು ಒತ್ತುವರಿದಾರರ ಪೋಷಣೆ ಮಾಡಿಕೊಂಡು ಬಂದಿದ್ದಾರೆ. ಲಾಂತರ ರೂಪಾಯಿ ಬಂಡವಾಳ ಹಾಕಿ ಕೊಳವೆ ಬಾವಿ, ಕೋಳಿಫಾರಂ ಶೆಡ್ಗಳನ್ನು ನಿರ್ಮಿಸಿಕೊಂಡಿದ್ದಾರೆ. ಇಲ್ಲಿಯ ತನಕ ಅರಣ್ಯ ಇಲಾಖೆಯವರು ಅವರಿಗೆ ಕುಮ್ಮಕ್ಕು ನೀಡಿ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿಕೊಳ್ಳಲು ಸಹಾಯ ಮಾಡಿದ್ದಾರೆ. ಆದರೆ ಹತ್ತಾರು ವರ್ಷಗಳಿಂದ ಬೆಳೆದು ನಿಂತಿರುವ ಹಾಗೂ ಫಸಲು ನೀಡುತ್ತಿರುವ ಮಾವಿನ ಮರಗಳನ್ನು ನೆಲಸಮ ಮಾಡಬಾರದಾಗಿತ್ತು. ತಮ್ಮ ಜಮೀನಿಗೆ ಗಡಿಭದ್ರ ಮಾಡಿಕೊಂಡು ಅದೇ ಮರಗಳನ್ನು ಸರ್ಕಾರ ವಶಪಡಿಸಿಕೊಳ್ಳಬಹುದಾಗಿತ್ತು. | ಪಿ.ಆರ್.ಸೂರ್ಯನಾರಾಯಣ, ಕೆಪಿಆರ್ಎಸ್ ಮುಖಂಡರು
ಮಧ್ಯಾಹ್ನ 3 ಗಂಟೆಯ ವೇಳೆಗೆ 120 ಎಕರೆ ಜಮೀನನ್ನು ವಶಪಡಿಸಿಕೊಳ್ಳಲಾಗಿದೆ. ಇನ್ನೂ 30 ಎಕರೆ ಜಮೀನು ವಶಪಡಿಸಿಕೊಳ್ಳಲು ಕಾರ್ಯಾಚರಣೆ ಮುಂದುವರಿದಿದೆ. ರಾತ್ರಿಯೂ ಕಾರ್ಯಾಚರಣೆ ಮುಂದುವರಿಯಲಿದೆ. ಮಾವಿನ ಮರಗಳು ಮತ್ತು 3ಕ್ಕೂ ಹೆಚ್ಚು ಕೋಳಿಫಾರಂ ಶೆಡ್ಡುಗಳನ್ನು ಹಾಗೂ 10ಕ್ಕೂ ಹೆಚ್ಚು ಕೊಳವೆ ಬಾವಿ ಮತ್ತು ಶೆಡ್ಗಳನ್ನು ತೆರವು ಮಾಡಲಾಗಿದೆ. |ಅರಣ್ಯ ಸಂರಕ್ಷಣಾಧಿಕಾರಿ, ಏಡುಕೊಂಡಲವಾಡ