ಒಂದೇ ಕುಟುಂಬದ ಇಬ್ಬರಿಗೆ ಪಾಸಿಟಿವ್, ಜಿಲ್ಲೆಯಲ್ಲಿ ನಾಲ್ಕಕ್ಕೇರಿದ ಸೋಂಕಿತರು, ಬೋರಿಂಗ್ ಅಸ್ಪತ್ರೆಯಲ್ಲಿ ಚಿಕಿತ್ಸೆ

10-nandagudi-01
Published on

ಬೆಂಗಳೂರು: ಬೆಂ.ಗ್ರಾಮಾಂತರ ಜಿಲ್ಲೆಯಲ್ಲಿ ಶುಕ್ರವಾರ ಮತ್ತೆರಡು ಕರೊನಾ ಪ್ರಕರಣ ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ನಾಲ್ಕಕ್ಕೇರಿದೆ.

ಹೊಸಕೋಟೆ ತಾಲೂಕು ನಂದಗುಡಿ ಹೋಬಳಿ ಬೈಲನರಸಾಪುರದ ಒಂದೇ ಕುಟುಂಬದ 36 ವರ್ಷದ ವ್ಯಕ್ತಿ ಹಾಗೂ 11 ವರ್ಷದ ಬಾಲಕಿಗೆ ಕರೊನಾ ಸೋಂಕು ದೃಢಪಟ್ಟಿದೆ. ಇದೇ ಗ್ರಾಮದಿಂದ ದೆಹಲಿಯ ತಬ್ಲಿಗೆ ಹೋಗಿ ಬಂದಿದ್ದ 8 ಮಂದಿ ಪೈಕಿ ಈಗಾಗಲೇ ನಾಲ್ವರಲ್ಲಿ ಪಾಸಿಟಿವ್ ಬಂದಿದೆ.

ಮೊದಲಿಗೆ ಒಬ್ಬ ವ್ಯಕ್ತಿಯಲ್ಲಿ ಸೋಂಕು ದೃಢಪಟ್ಟಿತ್ತು. ಎರಡು ದಿನದ ಅವಧಿಯಲ್ಲಿ ಆತನ ಸಂಬಂಧಿಕರೇ ಆದ ಮತ್ತೆ ಮೂವರು ಸೇರಿ ಒಟ್ಟು ನಾಲ್ವರಲ್ಲಿ ಸೋಂಕು ಕಾಣಿಸಿಕೊಂಡಿದ್ದು, ತಾಲೂಕಿನ ಜನ ಆತಂಕಗೊಂಡಿದ್ದಾರೆ.

ಗ್ರಾಮದಲ್ಲಿ ಸ್ಕ್ರೀನಿಂಗ್: ಬೈಲನರಸಾಪುರದ ಪ್ರತಿ ಮನೆಮನೆಗೆ ಭೇಟಿ ನೀಡಿರುವ ಜಿಲ್ಲಾ ಆರೋಗ್ಯ ಇಲಾಖೆ ಪ್ರತಿಯೊಬ್ಬರ ಸ್ಕ್ರೀನಿಂಗ್ ನಡೆಸಿದೆ. ಸೋಂಕಿತರನ್ನು ಬೆಂಗಳೂರಿನ ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದವರನ್ನು ಜಡಿಗೇನಹಳ್ಳಿ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕ್ವಾರಂಟೈನ್‌ನಲ್ಲಿಡಲಾಗಿದೆ.

ಸಂಪೂರ್ಣ ಲಾಕ್‌ಡೌನ್: ಬೈಲನರಸಾಪುರ ಗ್ರಾಮವನ್ನು ಸಂಪೂರ್ಣ ಲಾಕ್‌ಡೌನ್ ಮಾಡಲಾಗಿದ್ದು, ಗ್ರಾಮದಿಂದ ಯಾರೂ ಹೊರಗೆ ಹೋಗದಂತೆ ನಿರ್ಬಂಧ ಹೇರಲಾಗಿದೆ. ಶಂಕಿತರನ್ನು ಹೋಂ ಕ್ವಾರಂಟೈನ್‌ನಲ್ಲಿಡಲಾಗಿದ್ದು, ಮನೆಮನೆಗೆ ದಿನಸಿ ಮತ್ತಿತರ ಅಗತ್ಯ ವಸ್ತುಗಳ ಪೂರೈಕೆಗೆ ಜಿಲ್ಲಾಡಳಿತ ಕ್ರಮಕೈಗೊಂಡಿದೆ.

ಜಿಲ್ಲಾಡಳಿತ ಅಲರ್ಟ್: ಆರಂಭದಲ್ಲಿ ದೇವನಹಳ್ಳಿಯ ಏರ್‌ಪೋರ್ಟ್ ವ್ಯಾಪ್ತಿಯಲ್ಲಿ ಹೆಚ್ಚು ನಿಗಾವಹಿಸಿದ್ದ ಜಿಲ್ಲಾಡಳಿತ ಪ್ರತಿ ಪ್ರಯಾಣಿಕರನ್ನು ಸ್ಕ್ರೀನಿಂಗ್ ಮಾಡಿ, ಕ್ವಾರಂಟೈನ್‌ನಲ್ಲಿ ನಿಗಾವಹಿಸಿತ್ತು. ಇದರಲ್ಲಿ ಯಾವುದೇ ಪಾಸಿಟಿವ್ ಪ್ರಕರಣವಿಲ್ಲ ಎಂದು ನಿಟ್ಟುಸಿರು ಬಿಟ್ಟಿತ್ತು. ಆದರೆ ಹೊಸಕೋಟೆ ಭಾಗದಲ್ಲಿ ಕರೊನಾ ರಣಕೇಕೆ ಹಾಕುತ್ತಿರುವುದು ಜಿಲ್ಲಾಡಳಿತದ ನಿದ್ದೆಗೆಡಿಸಿದೆ. ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ಜಿಪಂ ಸಿಇಒ ಎನ್.ಎಂ.ನಾಗರಾಜ್, ಜಿಲ್ಲಾ ಆರೋಗ್ಯಾಧಿಕಾರಿ ಮಂಜುಳಾದೇವಿ, ಎಸ್‌ಪಿ ರವಿ ಡಿ.ಚನ್ನಣ್ಣನವರ್ ಮತ್ತಿತರ ಅಧಿಕಾರಿಗಳು ಹೊಸಕೋಟೆ ಸುತ್ತಮುತ್ತ ಓಡಾಡುತ್ತಿದ್ದಾರೆ. ಕೇಂದ್ರ ವಲಯ ಐಜಿಪಿ ಶರತ್ ಚಂದ್ರ ಗ್ರಾಮಕ್ಕೆ ಭೇಟಿ ನೀಡಿ ಲಾಕ್‌ಡೌನ್ ಪರಿಸ್ಥಿತಿ ಪರಿಶೀಲಿಸಿದ್ದಾರೆ.

ನಂದಗುಡಿಯಲ್ಲಿ ಬಂದೊಬಸ್ತ್: ಬೈಲಾನರಸಾಪುರದಲ್ಲಿ ಕರೊನಾ ಸೋಂಕು ಉಲ್ಬಣವಾದ ಹಿನ್ನೆಲೆಯಲ್ಲಿ ಗ್ರಾಮದ ಸುತ್ತಮುತ್ತ 5 ಕಡೆ ಚೆಕ್‌ಪೋಸ್ಟ್ ಹಾಕಲಾಗಿದೆ. ನಂದಗುಡಿಯಲ್ಲಿ ಸಿಪಿಐ ಎನ್.ರವೀಂದ್ರ, ಪಿಎಸ್‌ಐ ಲಕ್ಷ್ಮೀನಾರಾಯಣ್, ಸಿಬ್ಬಂದಿ ರಾಜ್ಯದ ಹೆದ್ದಾರಿನಿಂದ ಬರುವವರ ತಪಾಸಣೆ ನಡೆಸುತ್ತಿದ್ದಾರೆ. ಅನಗತ್ಯವಾಗಿ ಓಡಾಡುತ್ತಿರುವವರಿಗೆ ಈಗಾಗಲೆ ಪೊಲೀಸರು ಲಾಠಿ ರುಚಿ ತೋರಿಸಿ ವಾಹನಗಳನ್ನು ಜಪ್ತಿ ಮಾಡುತ್ತಿದ್ದಾರೆ.

ಬೈಲನರಸಾಪುರದಲ್ಲಿ ಶುಕ್ರವಾರ ಮತ್ತೆರಡು ಸೋಂಕಿತರು ಪತ್ತೆಯಾಗಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ನಾಲ್ಕಕ್ಕೇರಿದೆ. ಹೊಸಕೋಟೆ ವ್ಯಾಪ್ತಿಯಲ್ಲಿ ಜಿಲ್ಲಾಡಳಿತ ಕಟ್ಟೆಚ್ಚರ ವಹಿಸಿದೆ. ಸೋಂಕು ನಿಯಂತ್ರಣಕ್ಕೆ ಅಗತ್ಯ ಕ್ರಮಕೈಗೊಳ್ಳಲಾಗಿದೆ. ಡಾ.ಮಂಜುಳಾದೇವಿ, ಜಿಲ್ಲಾ ಆರೋಗ್ಯಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net