ಜಿಲ್ಲೆಯಲ್ಲಿ ನಾಲ್ವರಿಗೆ ಸೋಂಕು

hassan-parliamentary-constituency-map
Published on


ವಿಜಯವಾಣಿ ಸುದ್ದಿಜಾಲ ಹಾಸನ
ಚನ್ನರಾಯಪಟ್ಟಣ ತಾಲೂಕಿನ ಒಂದೇ ಕುಟುಂಬದ ಮೂವರು ಹಾಗೂ ಹೊಳೆನರಸೀಪುರದ ಯುವಕನಿಗೆ ಸೋಮವಾರ ಕರೊನಾ ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 30ಕ್ಕೆ ಏರಿದೆ.
ಎಲ್ಲ ಸೋಂಕಿತರು ಮುಂಬೈನಿಂದ ಬಂದವರಾಗಿದ್ದು, ಇನ್ನು 450 ಜನರ ಪರೀಕ್ಷಾ ವರದಿ ಬರಬೇಕಿದೆ. ಚನ್ನರಾಯಪಟ್ಟಣ ತಾಲೂಕಿನ ಪಿ1149 ಮಹಿಳೆ (40), ಪಿ1150 ಪುರುಷ (34), ಪಿ1151 ಮಹಿಳೆ (29), ಹೊಳೆನರಸೀಪುರ ತಾಲೂಕಿನ ಪಿ1148 ಯುವಕ (17)ನಿಗೆ ಸೋಂಕು ತಗುಲಿದೆ ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಐದು ಜನರಲ್ಲಿ ಮೂವರಿಗೆ ಕರೊನಾ: ಮುಂಬೈನ ಹೋಟೆಲ್‌ವೊಂದರಲ್ಲಿ ಅಡುಗೆ ಭಟ್ಟನಾಗಿದ್ದ 34 ವರ್ಷದ ವ್ಯಕ್ತಿ, ಮನೆ ಕೆಲಸ ಮಾಡಿಕೊಂಡಿದ್ದ 40 ವರ್ಷದ ಮಹಿಳೆ ಹಾಗೂ ಸರ್ಕಾರಿ ನೌಕರಿಯಲ್ಲಿದ್ದ 29 ವರ್ಷದ ಮಹಿಳೆ ಜತೆಗೆ ಇಬ್ಬರು ಮಕ್ಕಳು ಒಂದೇ ಕಾರಿನಲ್ಲಿ ಮೇ 11ರಂದು ಮುಂಬೈನಿಂದ ಹೊರಟಿದ್ದರು. ಮೇ 12ರ ಸಂಜೆ ಜಿಲ್ಲಾ ಗಡಿ ತಲುಪಿದ್ದ ಅವರನ್ನು ಚನ್ನರಾಯಪಟ್ಟಣ ತಾಲೂಕಿನ ಬೂಕನಬೆಟ್ಟ ಕ್ವಾರಂಟೈನ್ ಕೇಂದ್ರಕ್ಕೆ ಕಳುಹಿಸಲಾಗಿತ್ತು. ಇವರ‌್ಯಾರು ಬೇರೆಯವರೊಂದಿಗೆ ಸಂಪರ್ಕ ಹೊಂದಿಲ್ಲ. ಜತೆಗಿದ್ದ ಇಬ್ಬರು ಮಕ್ಕಳಿಗೆ ಸೋಂಕು ತಗುಲಿಲ್ಲ ಎಂದು ಸ್ಪಷ್ಟಪಡಿಸಿದರು.
ಮಾವನ ಮನೆಗೆ ಹೋಗಿದ್ದ ಯುವಕ: ಹೊಳೆನರಸೀಪುರದಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿರುವ 17 ವರ್ಷದ ಯುವಕ(ಪಿ1148) 3 ತಿಂಗಳ ಹಿಂದೆ ಮುಂಬೈನ ಮಾವನ ಮನೆಗೆ ತೆರಳಿದ್ದ. ಆತನಿಗೆ ಕರೊನಾ ದೃಢಪಟ್ಟಿದೆ. ಯುವಕ ಮೇ 12 ರಂದು ಕೆ.ಆರ್.ಪೇಟೆಯ ನಾಲ್ವರು ಸಂಬಂಧಿಕರ ಜತೆ ಸ್ವಂತ ಕಾರಿನಲ್ಲಿ ಬಂದಿದ್ದ. ಆರೋಗ್ಯ ತಪಾಸಣೆ ಬಳಿಕ ನಾಲ್ಕು ಜನರನ್ನು ಅವರ ತಾಲೂಕಿಗೆ ಕಳುಹಿಸಿಕೊಡಲಾಗಿದೆ. ಯುವಕನನ್ನು ದೊಡ್ಡಕಾಡನೂರು ಕ್ವಾರಂಟೈನ್‌ನಲ್ಲಿ ಇರಿಸಲಾಗಿತ್ತು ಎಂದರು.
ಜಿಲ್ಲೆಯ 40 ವಸತಿ ನಿಲಯಗಳನ್ನು ಕ್ವಾರಂಟೈನ್ ಕೇಂದ್ರಗಳಾಗಿ ಪರಿವರ್ತನೆಯಾಗಿದ್ದು ಹೊರ ರಾಜ್ಯದಿಂದ ಬಂದಿರುವ 1304 ಜನರ ಆರೋಗ್ಯ ತಪಾಸಣೆ ನಡೆಸಿ ಹಾಸ್ಟೆಲ್‌ಗಳಲ್ಲಿ ಇರಿಸಲಾಗಿದೆ. ಕೋವಿಡ್-19 ಆಸ್ಪತ್ರೆಯಲ್ಲಿ 294 ಜನರಿದ್ದಾರೆ. 450 ಜನರ ಕಫ ಹಾಗೂ ರಕ್ತದ ಮಾದರಿ ಪರೀಕ್ಷೆ ನಡೆದಿದ್ದು, ಎರಡು ದಿನಗಳಲ್ಲಿ ವರದಿ ಬರಲಿದೆ ಎಂದರು.
ಹೊರ ರಾಜ್ಯದಿಂದ ಬರುವವರನ್ನು ನೇರವಾಗಿ ಕ್ವಾರಂಟೈನ್ ಕೇಂದ್ರಕ್ಕೆ ಕಳುಹಿಸಿದರೆ ಅಲ್ಲಿ ವಾಸ್ತವ್ಯ ಹೂಡಿರುವ ವಲಸಿಗರಿಗೆ ತೊಂದರೆಯಾಗುತ್ತದೆ. ಆದ್ದರಿಂದ ಅರಸೀಕೆರೆ ಮತ್ತು ಚನ್ನರಾಯಪಟ್ಟಣದಲ್ಲಿ ತಲಾ ಎರಡು ರೀಸಿವಿಂಗ್ ಸೆಂಟರ್ ತೆರೆಯಲು ಕ್ರಮ ವಹಿಸಲಾಗಿದೆ. ಆರೋಗ್ಯ ತಪಾಸಣೆ ಬಳಿಕ ಎರಡು ದಿನ ಕೇಂದ್ರದಲ್ಲಿಯೇ ಇರುವ ಜನರಲ್ಲಿ ಕರೊನಾ ನೆಗೆಟಿವ್ ಇದ್ದರೆ ಅಂತವರನ್ನು ಸಂಬಂಧಿಸಿದ ಕ್ವಾರಂಟೈನ್ ಕೇಂದ್ರಕ್ಕೆ ಕಳುಹಿಸಿಕೊಡಲಾಗುವುದು. ಇಲ್ಲವಾದರೆ ಕೋವಿಡ್-19 ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗುತ್ತದೆ ಎಂದರು.
ಬೆಂಗಳೂರು ಮಾರ್ಗವಾಗಿ ಸಂಚಾರ
ಹೊರ ರಾಜ್ಯದ ಕಾರ್ಮಿಕರನ್ನು ಅವರ ಊರುಗಳಿಗೆ ಕಳುಹಿಸುವ ಎಲ್ಲ ವ್ಯವಸ್ಥೆ ಮಾಡಿದ್ದು, ಮಧ್ಯ ಪ್ರದೇಶದ 237 ಹಾಗೂ ಜಾರ್ಖಂಡ್‌ನ 126 ವಲಸಿಗರನ್ನು ಮಂಗಳವಾರ ಕಳುಹಿಸಿಕೊಡಲಾಗುವುದು. ಬೆಂಗಳೂರುವರೆಗೆ ಬಸ್‌ನಲ್ಲಿ ಪ್ರಯಾಣಿಸುವ ಇವರೆಲ್ಲರೂ ಅಲ್ಲಿಂದ ರೈಲು ಮೂಲಕ ಊರು ತಲುಪಲಿದ್ದಾರೆ. ಬಿಹಾರ, ಅಸ್ಸಾಂನ ಕಾರ್ಮಿಕರು ಊರಿಗೆ ತೆರಳಲು ಬಯಸಿದ್ದು ಹಂತ ಹಂತವಾಗಿ ಪ್ರಯಾಣದ ವ್ಯವಸ್ಥೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಜಿಪಂ ಸಿಇಒ ಬಿ.ಎ.ಪರಮೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಶ್ರೀನಿವಾಸ್ ಗೌಡ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ.ಎಂ. ಸತೀಶ್‌ಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net