ಒಂದೇ ದಿನ 15 ಮಂದಿಗೆ ಪಾಸಿಟಿವ್ ; ತುಮಕೂರು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 73ಕ್ಕೆ ಏರಿಕೆ

26Tmk_Corona_Emergency
Published on

ತುಮಕೂರು: ಜಿಲ್ಲೆಯಲ್ಲಿ ಕರೊನಾ ಸ್ಫೋಟಗೊಂಡಿದ್ದು, ಶುಕ್ರವಾರ ಒಂದೇ ದಿನ 15 ಮಂದಿಗೆ ಸೋಂಕು ತಗುಲಿದೆ. ತುಮಕೂರು ನಗರದಲ್ಲಿ 4, ಪಾವಗಡ-4, ಶಿರಾ-3 ಹಾಗೂ ತಿಪಟೂರು, ಚಿಕ್ಕನಾಯಕನಹಳ್ಳಿ, ಮಧುಗಿರಿ, ಗುಬ್ಬಿಯಲ್ಲಿ ತಲಾ ಒಂದು ಪ್ರಕರಣ ಪತ್ತೆಯಾಗಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 73ಕ್ಕೇರಿದೆ.

ಅಪ್ಪ-ಮಗನಿಗೆ ಸೋಂಕು: ಬೆಂಗಳೂರಿನ ಕಲಾಸಿಪಾಳ್ಯದಲ್ಲಿ ಗೋಬಿಮಂಚೂರಿ ವ್ಯಾಪಾರ ಮಾಡುತ್ತಿದ್ದ ಅಪ್ಪ, ಮಗ ಇಬ್ಬರಿಗೂ ಕರೊನಾ ಸೋಂಕು ತಗುಲಿದೆ. ಇಬ್ಬರಿಗೂ ನೆಗಡಿ, ಕೆಮ್ಮು ಬಂದಿದ್ದು, ಸಂಬಂಧಿಕರ ಮನೆಗೆ ಬಂದಿದ್ದರು. ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ತೆರಳಿದಾಗ ಗಂಟಲುದ್ರವ ಸಂಗ್ರಹಿಸಿ ಕೋವಿಡ್ ಪರೀಕ್ಷೆಗೆ ಕಳುಹಿಸಲಾಗಿತ್ತು. ಶುಕ್ರವಾರ ಸೋಂಕು ದೃಢಪಟ್ಟಿದ್ದು ಅವರಿಬ್ಬರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರು ಗುಬ್ಬಿ ಮೂಲದವರು ಎಂದು ತಿಳಿದುಬಂದಿದೆ.

ಲ್ಯಾಬ್ ಟೆಕ್ನಿಷಿಯನ್ ಆಗಿರುವ 31 ವರ್ಷದ ವ್ಯಕ್ತಿಗೆ ಸೋಂಕು ತಗುಲಿದ್ದು, ಸಾಕಷ್ಟು ಆತಂಕ ಸೃಷ್ಟಿಸಿದೆ. ಶಿರಾಗೇಟ್ ನಿವಾಸಿಯಾದ ಈತ ಅಶೋಕನಗರ ನಿವಾಸಿ ವೈದ್ಯರೊಬ್ಬರ ಮನೆಗೂ ಭೇಟಿ ಕೊಟ್ಟಿದ್ದು, ಪ್ರಾಥಮಿಕ ಹಾಗೂ ದ್ವಿತೀಯ ಹಂತದ ಸಂಪರ್ಕಿತರ ಪತ್ತೆ ಕಾರ್ಯ ನಡೆದಿದೆ. ಹಾಗಾಗಿ, ಶಿರಾಗೇಟ್, ಅಶೋಕನಗರ 5ನೇ ಕ್ರಾಸ್ ಈಗ ಕಂಟೇನ್ಮೆನ್ಮೆಂಟ್ ವಲಯವಾಗಿದ್ದು, ರಸ್ತೆ, ಸೋಂಕಿತನ ಮನೆ, ಸಂಪರ್ಕಿತರ ಮನೆಗೆ ಸೋಂಕು ನಿವಾರಕ ದ್ರವ ಸಿಂಪಡಣೆ ಮಾಡಲಾಗಿದೆ. ಇನ್ನೂ ಆಂಧ್ರಪ್ರದೇಶಕ್ಕೆ ಅಜ್ಜಿ ಮನೆಗೆ ತೆರಳಿದ್ದ 11 ವರ್ಷದ ಬಾಲಕ ನಗರಕ್ಕೆ ವಾರದ ಹಿಂದೆ ಹಿಂದಿರುಗಿದ್ದ. 3-4 ದಿನಗಳ ಹಿಂದೆ ಜ್ವರ ಕಾಣಿಸಿಕೊಂಡಿದ್ದು, ನಗರದ ವಿವಿಧ ವೈದ್ಯರ ಬಳಿ ತೋರಿಸಿದ್ದು, ಕೊನೆಗೆ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದ. ಆತನ ಗಂಟಲುದ್ರವ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿದ್ದು ಸೋಂಕು ದೃಢವಾಗಿದೆ. ಸೋಂಕಿತನ ಮನೆ ಇರುವ ಅಮರಜ್ಯೋತಿನಗರವನ್ನು ಕಂಟೇನ್ಮೆಂಟ್ ವಲಯವೆಂದು ಘೋಷಿಸಲಾಗಿದೆ.

ರಾಜಸ್ಥಾನದಿಂದ ಶಿರಾಕ್ಕೆ ಜೂ.21ಕ್ಕೆ ವಾಪಸಾಗಿದ್ದ 38 ವರ್ಷದ ಮಹಿಳೆಯನ್ನು ಸಾಂಸ್ಥಿಕ ಕ್ವಾರಂಟೈನ್‌ನಲ್ಲಿರಿಸಲಾಗಿತ್ತು. 22 ರಂದು ಆಕೆಯ ಗಂಟಲುದ್ರವ ಮಾದರಿ ಸಂಗ್ರಹಿಸಿ ತುಮಕೂರಿನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಈಗ ಸೋಂಕು ತಗುಲಿರುವುದು ದೃಢವಾದ ಹಿನ್ನೆಲೆಯಲ್ಲಿ ಅವರ ಸಂಪರ್ಕಿತರ ಪತ್ತೆ ಕಾರ್ಯಸಾಗಿದೆ. ಸಿಂಗ್ ಲೇಔಟ್ ಅನ್ನು ಕಂಟೇನ್ಮೆಂಟ್‌ವಲಯವಾಗಿ ಗುರುತಿಸಿ ಮುಂಜಾಗ್ರತಾ ಕ್ರಮವಹಿಸಲಾಗಿದೆ. ಶಿರಾದ 55 ವರ್ಷದ ವ್ಯಕ್ತಿ ತೀವ್ರ ಉಸಿರಾಟ ತೊಂದರೆಯಿಂದ ಬಳಲುತ್ತಿದ್ದು ಕೋವಿಡ್ ಪರೀಕ್ಷೆಗೆ ಒಳಪಡಿಸಿದ್ದುಮ ಸೋಂಕು ದೃಢವಾಗಿದೆ.

ಗುಬ್ಬಿ ಅಮ್ಮನಘಟ್ಟದ 48 ವರ್ಷದ ವ್ಯಕ್ತಿ ಬೆಂಗಳೂರಿಗೆ ಕೆಲಸಕ್ಕೆ ಪ್ರತಿದಿನ ಓಡಾಡುತ್ತಿದ್ದು ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದು, ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆ ಪಡೆಯಲು ತೆರಳಿದ್ದಾಗ ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿತ್ತು. ಸೋಂಕು ದೃಢಪಟ್ಟಿದ್ದು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪಿಕೆಎಸ್‌ಗೆ ಕರೊನಾ: ತಿಪಟೂರಿನ 40 ವರ್ಷದ ಪೌರಕಾರ್ಮಿಕನಿಗೂ ಸೋಂಕು ತಗುಲಿರುವುದು ನಗರದಲ್ಲಿ ಆತಂಕ ಸೃಷ್ಟಿಸಿದೆ. ಈ ವ್ಯಕ್ತಿಗೆ ಜೂ.22 ರಂದು ಕೋವಿಡ್ ಪರೀಕ್ಷೆಗೆ ಒಳಪಟ್ಟಿದ್ದರು. ಅವರ ಪ್ರಾಥಮಿಕ, ದ್ವಿತೀಯ ಹಂತದ ಸಂಪರ್ಕಿತರನ್ನು ಪತ್ತೆಹಚ್ಚಲಾಗುತ್ತಿದೆ.

ಪರೀಕ್ಷಾ ಅಧಿಕಾರಿಗೆ ಸೋಂಕು: ಪಾವಗಡ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ತಾಲೂಕು ಅಧಿಕಾರಿಗೆ ಕರೊನಾ ಸೋಂಕು ದೃಢವಾಗಿದ್ದು ತಾಲೂಕಿನಾದ್ಯಂತ ತಲ್ಲಣ ಸೃಷ್ಟಿಸಿದೆ. ಗುರುವಾರ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅರಸೀಕೆರೆ ಪರೀಕ್ಷಾ ಕೇಂದ್ರದಲ್ಲಿ ಕರ್ತವ್ಯ ಕೂಡ ನಿರ್ವಹಿಸಿದ್ದ ಇವರು ತಾಲೂಕಿನಾದ್ಯಂತ ಬಿಸಿಎಂ ಇಲಾಖೆ ವಸತಿ ಶಾಲೆಯ ಮಕ್ಕಳಿಗೆ ಮಾಸ್ಕ್ ಕೂಡ ವಿತರಿಸಿದ್ದರು ಎನ್ನಲಾಗಿದ್ದು ಆತಂಕ ಹೆಚ್ಚಿಸಿದೆ. ಪರೀಕ್ಷಾ ಕೇಂದ್ರದಲ್ಲಿ 120 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಪರೀಕ್ಷಾ ಸಮಯದಲ್ಲಿ ಪೊಲೀಸ್, ಶಿಕ್ಷಕರು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳ ಜತೆ ಊಟ ಕೂಡ ಮಾಡಿದ್ದಾರೆ. ಶನಿವಾರ ತಾಲೂಕಿನ ವೆಂಕಟಾಪುರ ಪರೀಕ್ಷಾ ಕೇಂದ್ರದಲ್ಲಿ ಮೈಕ್ರೋ ಅಬ್‌ಸರ್ವರ್ ಆಗಿ ಕರ್ತವ್ಯ ನಿರ್ವಹಿಸಬೇಕಾಗಿತ್ತು. ಕಣಿವೇನಹಳ್ಳಿ ತಾಂಡ ನಿವಾಸಿಯಾಗಿರುವ ಬಿಸಿಎಂ ಅಧಿಕಾರಿ ತುಮಕೂರು ನಗರದಲ್ಲಿಯೂ ಅಧಿಕಾರಿಗಳ ಜತೆ ಸಾಕಷ್ಟು ಸಭೆಗಳಲ್ಲಿ ಭಾಗವಹಿಸಿದ್ದು ಅಧಿಕಾರಿ ವಲಯದಲ್ಲಿ ತಲ್ಲಣ ಸೃಷ್ಟಿಸಿದೆ. ಪಾವಗಡ ತಾಲೂಕಿನ ಮದ್ದಿಬಂಡೆಯಲ್ಲಿ ಯಾವ ಪ್ರಯಾಣದ ಹಿನ್ನೆಲೆಯೂ ಇಲ್ಲದ ಕುರಿಗಾಹಿಗೂ ಕರೊನಾ ಸೋಂಕು ತಲುಗಿದ್ದು ಗ್ರಾಮೀಣ ಭಾಗದಲ್ಲಿ ಸಾಕಷ್ಟು ಸಂಕಷ್ಟ ತಂದೊಡ್ಡಿದೆ. ಈ ಕುರಿಗಾಹಿ ಸ್ಥಳೀಯ ಆರ್‌ಎಂಪಿ ವೈದ್ಯನ ಬಳಿ ಚಿಕಿತ್ಸೆ ಪಡೆದಿದ್ದು ಆ ವೈದ್ಯ ಸುತ್ತಮುತ್ತಲ ನೂರಾರು ಜನರಿಗೆ ಚಿಕಿತ್ಸೆ ನೀಡಿದ್ದಾರೆ. ಶುಕ್ರವಾರ ಪತ್ತೆಯಾಗಿರುವ 4 ಪ್ರಕರಣಗಳು ಸಾಕಷ್ಟು ಜನರೊಂದಿಗೆ ಬೆರೆತಿರುವ ವ್ಯಕ್ತಿಗಳಾಗಿದ್ದು ಪಾವಗಡ ತಾಲೂಕಿನಾದ್ಯಂತ ಭಯದ ವಾತಾವರಣ ಮೂಡಿಸಿದೆ.

ಸೋಂಕಿತ ನಾಪತ್ತೆ ?: ಪಾವಗಡದ 42 ವರ್ಷದ ವ್ಯಕ್ತಿ ತೀವ್ರ ಉಸಿರಾಟ ತೊಂದರೆಯಿಂದ ಬಳಲುತ್ತಿದ್ದು ಆತನ ಗಂಟಲುದ್ರವ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು. ಈ ವೇಳೆ ಆತನಿಗೆ ಹೋಂಕ್ವಾರಂಟೈನ್‌ನಲ್ಲಿರುವಂತೆ ಸೂಚಿಸಲಾಗಿತ್ತು. ಈಗ ಆತನಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಆತನ ಮೊಬೈಲ್ ನಂಬರ್ ತಪ್ಪಾಗಿ ನಮೂದಿಸಿಕೊಂಡಿದ್ದರಿಂದ ಈವರೆಗೆ ಆತನ ಪತ್ತೆಯಾಗಿಲ್ಲ.

ಇಂಜಿನಿಯರ್ ವಿದ್ಯಾರ್ಥಿಗೆ ಕರೊನಾ: ಚಿಕ್ಕನಾಯಕನಹಳ್ಳಿ ತಾಲೂಕಿನ 22 ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಗೂ ಕರೊನಾ ತಗುಲಿದೆ. ತಾಲೂಕಿನ ಕಾಡೇನಹಳ್ಳಿಯ ಇಂಜಿನಿಯರ್ ವಿದ್ಯಾರ್ಥಿ ಲಾಕ್‌ಡೌನ್ ವೇಳೆ ಗ್ರಾಮಕ್ಕೆ ವಾಪಸ್ ಆಗಿದ್ದ. ನಂತರ ಲಾಕ್‌ಡೌನ್ ತೆರವಾದ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಹೋಗಿಬಂದಿದ್ದು ಆನಾರೋಗ್ಯದಿಂದ ತಿಪಟೂರಿನ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗೆ ತೆರಳಿದಾಗ ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿತ್ತು. ಗ್ರಾಮವನ್ನು ಕಂಟೈನ್ಮೆಂಟ್ ವಲಯವೆಂದು ಘೋಷಿಸಲಾಗಿದೆ.

ಸೋಂಕಿತನ ತಂದೆಗೂ ಕರೊನಾ : ಶಿರಾದ ಕಾಮಗೊಂಡನಹಳ್ಳಿಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗೆ ಕರೊನಾ ಸೋಂಕು ಪತ್ತೆಯಾಗಿದ್ದು, ಆತನ ಜತೆ ಆಂಧ್ರದ ರಾಯದುರ್ಗದಿಂದ ಬಂದಿದ್ದ 43 ವರ್ಷದ ತಂದೆಗೂ ಸೋಂಕು ತಗುಲಿರುವುದು ದೃಢಪಟ್ಟಿದೆ. ಕಾಮಗೊಂಡನಹಳ್ಳಿ ಸೇರಿ ಸುತ್ತ ಮುತ್ತಲ ಜನರಲ್ಲಿ ಆತಂಕ ಮೂಡಿಸಿದೆ.

ಸಂಪರ್ಕವೇ ಇಲ್ಲದ ವ್ಯಕ್ತಿಗೂ ಪಾಸಿಟಿವ್: ಕರೊನಾ ಸೋಂಕಿಗೆ ಬಲಿಯಾದ ಮಧುಗಿರಿ ಟೈಲರ್ ಬಳಿ ಬಟ್ಟೆ ಹಾಕಿದ್ದ ಗಿರಾಕಿಗಳು ಅನುಮಾನದ ಮೇರೆಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿಸಿದ್ದು, ಅವರ ಜತೆಯಲ್ಲಿ ತೆರಳಿದ್ದ 37 ವರ್ಷದ ಕಾರ್ ಡ್ರೈವರ್‌ಗೆ ಸೋಂಕು ದೃಢಪಟ್ಟಿದೆ. ಜೂ.24 ರಂದು ಬೆಂಗಳೂರಿನ ಮೆಡಿಕುಲಸ್ ಡಯೋಗ್ನಿಸ್ಟಿಕ್ ಸೆಂಟರ್‌ನಲ್ಲಿ ಕೋವಿಡ್ ಪರೀಕ್ಷೆ ಮಾಡಿಸಿಕೊಂಡಿದ್ದರು. ಭೋವಿಕಾಲನಿ ನಿವಾಸಿಗೆ ಸೋಂಕು ದೃಢವಾಗಿದ್ದು ಆತನ ಪ್ರಾಥಮಿಕ, ದ್ವಿತೀಯ ಹಂತದ ಸಂಪರ್ಕಿತರನ್ನು ಪತ್ತೆ ಹಚ್ಚಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net