ಪಾಸಿಟಿವಿಟಿ ಶೇ.10ಕ್ಕಿಂತ ಇಳಿಕೆ, ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಮಾಹಿತಿ

Corona
Published on

ಉಡುಪಿ: ಜಿಲ್ಲೆಯಲ್ಲಿ 50ಕ್ಕಿಂತ ಹೆಚ್ಚಿನ ಕೋವಿಡ್ ಪ್ರಕರಣ ಕಂಡುಬಂದ 40 ಗ್ರಾಮ ಪಂಚಾಯಿತಿಗಳನ್ನು ಸಂಪೂರ್ಣ ಲಾಕ್‌ಡೌನ್ ಮಾಡಿದ ಪರಿಣಾಮ ಕೋವಿಡ್ ಪಾಸಿಟಿವಿಟಿ ಪ್ರಮಾಣ ಶೇ.10ಕ್ಕಿಂತ ಕಡಿಮೆಯಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರೊನಾ ಪಾಸಿಟಿವ್ ಬಂದ್ ಮನೆಗಳನ್ನು ಸೀಲ್‌ಡೌನ್ ಮಾಡಲಾಗುತ್ತಿದೆ. ಇದರಿಂದ ಜನರು ಪಾಸಿಟಿವ್ ಬಂದವರಿಂದ ದೂರ ಉಳಿಯಲು ಸಾಧ್ಯವಾಗಿದೆ. ನಿತ್ಯ 3ರಿಂದ 4 ಸಾವಿರ ಜನರ ಗಂಟಲ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ವಾರದಿಂದ ಜಿಲ್ಲೆಯಲ್ಲಿ ಆಸ್ಪತ್ರೆಯ ಬೆಡ್‌ಗಾಗಿ ಕರೆ ಮಾಡುವವರ ಸಂಖ್ಯೆ ಕಡಿಮೆಯಾಗಿದೆ. 1,200 ಆಮ್ಲಜನಕ ಬೆಡ್‌ನಲ್ಲಿ ಕೇವಲ 300 ಬೆಡ್ ಬಳಕೆ ಮಾಡಲಾಗಿದೆ. ಜಿಲ್ಲೆಯಲ್ಲಿ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಉತ್ಪಾದನೆಯತ್ತ ಗಮನ ಹರಿಸಲಾಗುತ್ತಿದೆ ಎಂದರು.

ಜಿಲ್ಲೆಯಲ್ಲಿ ಮಂಗಳವಾರ 204 ಮಂದಿಗೆ ಕರೊನಾ ದೃಢಪಟ್ಟಿದೆ. ಇಬ್ಬರು ಮೃತಪಟ್ಟಿದ್ದಾರೆ. ಕುಂದಾಪುರದಲ್ಲಿ 23 ವರ್ಷದ ಮಹಿಳೆ ಹಾಗೂ ಉಡುಪಿಯಲ್ಲಿ 75 ವರ್ಷದ ಮಹಿಳೆ ಸಾವನ್ನಪ್ಪಿದ್ದಾರೆ. ಸೋಂಕಿತರಲ್ಲಿ 95 ಮಂದಿ ಉಡುಪಿ, 49 ಮಂದಿ ಕುಂದಾಪುರ, 51 ಮಂದಿ ಕಾರ್ಕಳ ತಾಲೂಕಿನವರಿದ್ದಾರೆ. 9 ಮಂದಿ ಹೊರ ಜಿಲ್ಲೆಯವರು. ಇವರಲ್ಲಿ 82 ಮಂದಿ ರೋಗ ಲಕ್ಷಣ ಹೊಂದಿದ್ದಾರೆ. 22 ಮಂದಿ ಕೋವಿಡ್ ಆಸ್ಪತ್ರೆಯಲ್ಲಿ ಹಾಗೂ 182 ಮಂದಿ ಹೋಂ ಐಸೋಲೇಷನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 504 ಮಂದಿ ಗುಣಮುಖರಾಗಿದ್ದಾರೆ. 3783 ಸಕ್ರಿಯ ಪ್ರಕರಣಗಳಿವೆ.

ಮಕ್ಕಳ ತಜ್ಞರೊಂದಿಗೆ ಸಭೆ: 2ನೇ ಅಲೆಯಲ್ಲಿ ಜಿಲ್ಲೆಯಲ್ಲಿ 3,500 ಮಕ್ಕಳು ಕರೊನಾಗೆ ತುತ್ತಾಗಿದ್ದು, ಯಾರಿಗೂ ಹೆಚ್ಚಿನ ತೊಂದರೆಯಾಗಿಲ್ಲ. ಆದರೆ ಮೂರನೇ ಅಲೆಗೆ ಮಕ್ಕಳು ತುತ್ತಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಈಗಾಗಲೇ ಜಿಲ್ಲೆಯ ಮಕ್ಕಳ ತಜ್ಞರೊಂದಿಗೆ ಸಭೆ ನಡೆಸಲಾಗಿದೆ. ದಾನಿಗಳು, ಸಿಎಸ್‌ಆರ್ ಫಂಡ್ ಹಾಗೂ ಸರ್ಕಾರದ ನೆರವಿನಿಂದ ಮಕ್ಕಳ ಚಿಕಿತ್ಸೆಗೆ ಅಗತ್ಯವಿರುವ ಸಿದ್ಧತೆ ಮಾಡಿಕೊಳ್ಳಲಾಗಿದೆ. ವಿಶೇಷ ಕೋವಿಡ್ ಕೇರ್ ಸೆಂಟರ್ ತೆರೆಯಲಾಗುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ನಾಳೆಯಿಂದ 16 ಗ್ರಾಪಂ ಪೂರ್ಣ ಬಂದ್: ಪ್ರಸ್ತುತ 50ಕ್ಕಿಂತ ಹೆಚ್ಚು ಕರೊನಾ ಪ್ರಕರಣಗಳಿರುವ 16 ಗ್ರಾ.ಪಂ.ಗಳಲ್ಲಿ ಜೂನ್ 10ರಿಂದ ಜೂನ್ 13ರವರೆಗೆ (14ರ ಬೆಳಗ್ಗೆ 6ರ ವರೆಗೆ) ಸಂಪೂರ್ಣ ಲಾಕ್‌ಡೌನ್ ವಿಧಿಸಲಾಗುತ್ತದೆ. ಜೂನ್ 9ರಂದು ಬೆಳಗ್ಗೆ 6ರಿಂದ 10ರ ತನಕ ಮಾತ್ರ ಅಗತ್ಯ ವಸ್ತುಗಳ ಖರೀದಿಗೆ ಜನರಿಗೆ ಅವಕಾಶ ಮಾಡಿಕೊಡಲಾಗಿದೆ. ಬೈಂದೂರು ತಾಲೂಕಿನ ಜಡ್ಕಲ್, ಶಿರೂರು, ನಾಡ ಗ್ರಾಮ ಪಂಚಾಯಿತಿ, ಕಾರ್ಕಳದ ಬೆಳ್ಮಣ್, ಮಿಯಾರು, ಪಳ್ಳಿ, ಕುಕ್ಕುಂದೂರು, ನಲ್ಲೂರು, ಮರ್ಣೆ, ಹೆಬ್ರಿ ತಾಲೂಕಿನ ವರಂಗ, ಕುಂದಾಪುರದ ಗಂಗೊಳ್ಳಿ, ಆಲೂರು, ಕಾಪುವಿನ ಶಿರ್ವ, ಬೆಳ್ಳೆ, ಬ್ರಹ್ಮಾವರದ ಆವರ್ಸೆ, ಕೊಕ್ಕರ್ಣೆ ಗ್ರಾಪಂ ವ್ಯಾಪ್ತಿಯಲ್ಲಿ ಜೂನ್ 14ರ ಬೆಳಗ್ಗೆ 6 ಗಂಟೆಯವರೆಗೆ ಪೂರ್ಣ ಪ್ರಮಾಣದ ಲಾಕ್‌ಡೌನ್ ಮಾಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net