

ಔರಾದ್: ಅಪೌಷ್ಟಿಕತೆ ಸಮಸ್ಯೆಯಿಂದ ಬಳಲುತ್ತಿರುವ ಮಹಿಳೆಯರು, ಬಾಣಂತಿಯರು, ಮಕ್ಕಳಿಗೆ ಪೌಷ್ಟಿಕಾಂಶ ಆಹಾರ ಕ್ರಮ ಬಗ್ಗೆ ಅರಿವು ಮೂಡಿಸುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಜಿ ಹುಸೇನಸಾಬ್ ಯಾದವಾಡ ಹೇಳಿದರು.
ತಾಲೂಕಿನ ಮಾನಸಿಂಗ್ ತಾಂಡಾದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ ಸಂತಪುರ ಇವರ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡ ಪೋಷಣ್ ಅಭಿಯಾನ ಮಾಸಾಚರಣೆ-೨೦೨೪ರ ಪೌಷ್ಟಿಕ ಆಹಾರ ಸೇವನೆ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪರ ರಾಷ್ಟ್ರಗಳಂತೆ ಜನತೆ ಹಸಿವಿನಿಂದ ಬಳಲಬಾರದು. ಆಫ್ರಿಕಾದಲ್ಲಿ ಇಂದಿಗೂ ಜನತೆಗೆ ತಿನ್ನಲು ಆಹಾರ ಸಿಗುತ್ತಿಲ್ಲ ಎನ್ನುವುದು ನೋವಿನ ಸಂಗತಿ. ಜನರು ಹಸಿವಿನಿಂದ ಬಳಲಬಾರದು ಎನ್ನುವ ಉದ್ದೇಶದಿಂದ ಸರ್ಕಾರ ಅನೇಕ ಯೋಜನೆಗಳನ್ನು ಜಾರಿ ಮಾಡಿದೆ. ಜನರಲ್ಲಿ ಪೌಷ್ಟಿಕ ಆಹಾರದ ಬಗ್ಗೆ ತರಬೇತಿ, ಕಾರ್ಯಾಗಾರ, ಸ್ಪರ್ಧೆ ಹಾಗೂ ಜಾಗೃತಿ ಜಾಥಾಗಳು ಇನ್ನೂ ಹೆಚ್ಚು ಹೆಚ್ಚು ನಡೆದರೆ ಅಪೌಷ್ಟಿಕತೆಯಿಂದ ಬಳಲುತ್ತಿರುವವರ ಸಂಖ್ಯೆ ಕಡಿಮೆಯಾಗುತ್ತದೆ ಎಂದು ಹೇಳಿದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಇಮಾಲಪ್ಪ ಡಿ.ಕೆ.ಮಾತನಾಡಿ, ಸದೃಢ ದೇಹದಲ್ಲಿ ಸದೃಢ ಮನಸ್ಸು ಇರಬೇಕಾದರೆ ಪೌಷ್ಟಿಕ ಆಹಾರದಿಂದ ಮಾತ್ರ ಸಾಧ್ಯ. ನಮ್ಮಲ್ಲಿ ಆಹಾರ ಉತ್ಪಾದನೆಯ ಕೊರತೆ ಇಲ್ಲ, ಆದರೆ ಎಲ್ಲರಿಗೂ ಸಮರ್ಪಕವಾಗಿ ಮುಟ್ಟುವಂತಾಗಬೇಕು. ಇಲಾಖೆಯಿಂದ ಅನೇಕ ಯೋಜನೆಗಳು ಜಾರಿಯಲ್ಲಿದ್ದು, ಸಾರ್ವಜನಿಕರು ಸದುಪಯೋಗ ಪಡೆದು ಸ್ವಾಸ್ತ್ಯ ಜೀವನ ಸಾಗಿಸಬೇಕೆಂದು ಹೇಳಿದರು.
ನ್ಯಾಯಾಧೀಶ ಜ್ಞಾನೇಶ್ವರ ವಿ. ಮಾಳಗಿ, ಸಹಾಯಕ ಸರ್ಕಾರಿ ಅಭಿಯೋಜಕ ಶಿವಾನಂದ ಹುಲೆನ್ನವರ್, ವಕೀಲರ ಸಂಘದ ತಾಲೂಕು ಅಧ್ಯಕ್ಷ ಸಂದೀಪ ಮೇತ್ರೆ, ಮಿನಾಕ್ಷಿ ಪಾಂಚಾಳ ಇತರರಿದ್ದರು.