

ಶನಿವಾರಸಂತೆ: ದೊಡ್ಡಮಳ್ತೆ ಅಂಗನವಾಡಿ ಕೇಂದ್ರದಲ್ಲಿ ಗುರುವಾರ ಪೋಷಣ್ ಅಭಿಯಾನ ಕಾರ್ಯಕ್ರಮ ಆಯೋಜಿಸಲಾಗಿತ್ತು.
ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಡಿ.ಎಂ.ಗೋಪಾಲಕೃಷ್ಣ ಹಾಗೂ ಸದಸ್ಯೆ ಎಚ್.ಪಿ.ಪ್ರಮೀಳಾ ಕಾರ್ಯಕ್ರಮ ಉದ್ಘಾಟಿಸಿದರು.
ಅಧ್ಯಕ್ಷ ಡಿ.ಎಂ.ಗೋಪಾಲಕೃಷ್ಣ ಮಾತನಾಡಿ, ಪ್ರತಿ ವರ್ಷ ಇಲ್ಲಿನ ಅಂಗನವಾಡಿ ಕೇಂದ್ರದಲ್ಲಿ ಪೋಷಣ್ ಅಭಿಯಾನ ಸೇರಿದಂತೆ ಇತರ ಎಲ್ಲ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ನಡೆಸಿಕೊಂಡು ಬಂದಿರುವುದು ಅಂಗನವಾಡಿ ಕಾರ್ಯಕರ್ತೆಯ ಕಾರ್ಯ ವೈಖರಿಯನ್ನು ಬಿಂಬಿಸುತ್ತದೆ ಎಂದರು.
ಸದಸ್ಯೆ ಪ್ರಮೀಳಾ ಮಾತನಾಡಿ, ಗರ್ಭಿಣಿಯರು ಹೆಚ್ಚಾಗಿ ಪೌಷ್ಟಿಕ ಆಹಾರ ಸೇವಿಸಬೇಕು. ಸ್ಥಳೀಯವಾಗಿ ಸಿಗುವ ಹಣ್ಣು ಹಂಪಲು, ತರಕಾರಿ, ಸೊಪ್ಪು, ಮೊಳಕೆ ಕಾಳು ಮುಂತಾದವುಗಳಲ್ಲಿ ಪೌಷ್ಟಿಕಾಂಶ ಹೆಚ್ಚಿರುವುದ್ದರಿಂದ ಇವುಗಳನ್ನು ಸೇವಿಸಬೇಕು. ಇದರಿಂದ ಗರ್ಭಿಣಿಯರಲ್ಲಿ ಪೌಷ್ಟಿಕಾಂಶ ವೃದ್ಧಿಯಾಗಲಿದೆ ಎಂದರು.
ಗರ್ಭಿಣಿಯರು ಪೌಷ್ಟಿಕಾಂಶ ಆಹಾರದೊಂದಿಗೆ ಮೊಟ್ಟೆ, ಮೀನು, ಮಾಂಸವನ್ನೂ ಸೇವಿಸಬೇಕು. ಇದರಿಂದ ಮಗುವಿನ ಬೆಳವಣಿಗೆ ಉತ್ತಮಗೊಳ್ಳುತ್ತದೆ ಎಂದು ಹೇಳಿದರು.
ವಳಗುಂದ ಆಶಾ ಕಾರ್ಯಕರ್ತೆ ಈಶ್ವರಿ ಮಾತನಾಡಿ, ಗರ್ಭಿಣಿಯರು ಮತ್ತು ಬಾಣಂತಿಯರು ಸರಿಯಾದ ಸಮಯಕ್ಕೆ ಚುಚ್ಚುಮದ್ದು ಮತ್ತು ಲಸಿಕೆಯನ್ನು ತೆಗೆದುಕೊಳ್ಳಬೇಕು ಎಂದರು.
ಆರೋಗ್ಯ ಸುರಕ್ಷಾಧಿಕಾರಿ ದಿವ್ಯಾ ಮಾತಾನಾಡಿ, ಮಹಿಳೆಯರಲ್ಲಿ ಅಪೌಷ್ಟಿಕತೆಯನ್ನು ಹೋಗಲಾಡಿಸುವ ಸಲುವಾಗಿ ಪೋಷಣ್ ಅಭಿಯಾನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.
ದೊಡ್ಡಮಳ್ತೆ ಅಂಗನವಾಡಿ ಕಾರ್ಯಕರ್ತೆ ಪೂರ್ಣಿಮಾ, ಕಾಗಡಿಕಟ್ಟೆ ಅಂಗನವಾಡಿ ಕಾರ್ಯಕರ್ತೆ ಸವಿತಾ, ದೊಡ್ಡಮಳ್ತೆ ಆಶಾ ಕಾರ್ಯಕರ್ತೆ ಈಶ್ವರಿ, ಕಾಗಡಿಕಟ್ಟೆ ಆಶಾ ಕಾರ್ಯಕರ್ತೆ ಶೈಲಾ, ಅಂಗನವಾಡಿ ಸಹಾಯಕಿ ಕುಸುಮಾ, ಪಂಚಾಯಿತಿ ಕರ ವಸೂಲಿಗಾರ ವಿಶ್ವರೂಪಾಚಾರ್ಯ ಇತರರಿದ್ದರು.