

ಕುಶಾಲನಗರ:
ತಾಯಂದಿರು ತಮ್ಮ ಮಕ್ಕಳಿಗೆ ಪೌಷ್ಟಿಕ ಆಹಾರಗಳನ್ನು ನೀಡುವ ಮೂಲಕ ಮಕ್ಕಳ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಕೂಡುಮಂಗಳೂರು ಗ್ರಾಮ ಪಂಚಾಯಿತಿ ಸದಸ್ಯ ಕೆ.ಬಿ. ಶಂಶುದ್ಧೀನ್ ಹೇಳಿದರು. ಕೂಡುಮಂಗಳೂರು ಗ್ರಾ.ಪಂ. ಸುಂದರನಗರ ಅಂಗನವಾಡಿಯಲ್ಲಿ ಬುಧವಾರ ಏರ್ಪಡಿಸಲಾಗಿದ್ದ ರಾಷ್ಟ್ರೀಯ ಪೋಷಣ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ತಮ್ಮ ಮಕ್ಕಳ ಆರೋಗ್ಯ ದೃಷ್ಟಿಯಿಂದ ಗರ್ಭಿಣಿಯರು, ಬಾಣಂತಿಯರು ಪೌಷ್ಟಿಕಾಂಶಭರಿತ ಆಹಾರ ಸೇರಿದಂತೆ ಸೊಪ್ಪು ತರಕಾರಿಗಳನ್ನು ಸೇವಿಸಬೇಕು. ಇದರಿಂದ ಮಕ್ಕಳಲ್ಲಿ ಅಪೌಷ್ಟಿಕತೆ ತಡೆಗಟ್ಟಬಹುದಾಗಿದೆ. ಅಂಗನವಾಡಿಗಳಲ್ಲಿ ಮಕ್ಕಳಿಗೆ ಸತ್ವಭರಿತ, ಪೌಷ್ಟಿಕ ಆಹಾರಗಳನ್ನು ನೀಡಲಾಗುತ್ತದೆ. ಅದರಂತೆ ಮನೆಯಲ್ಲಿಯೂ ತಾಯಂದಿರು ಇದನ್ನು ಮುಂದುವರೆಸಬೇಕು. ಮಕ್ಕಳ ಆರೋಗ್ಯವನ್ನು ಹದಗೆಡಿಸುವಂತಹ ಆಹಾರಗಳನ್ನು ನೀಡಬಾರದು. ಇದು ಮಕ್ಕಳ ಆರೋಗ್ಯದ ಮೇಲೆ ನೇರ ಪರಿಣಾಮ ಬೀರಲಿದೆ ಎಂದರು.
ಹಾರಂಗಿ ಬಿ ವ್ಯಾಪ್ತಿಯ ಸಮುದಾಯ ಆರೋಗ್ಯಾಧಿಕಾರಿ ಸೌಮ್ಯ ಮಾತನಾಡಿ, ಮಕ್ಕಳ ಆರೋಗ್ಯವನ್ನು ಕಾಪಾಡಿಕೊಳ್ಳುವ ಉದ್ದೇಶದಿಂದ ತಾಯಂದಿರು ಮಕ್ಕಳಿಗೆ ಪೌಷ್ಟಿಕ ಆಹಾರಗಳನ್ನು ಮಾತ್ರ ಕೊಡಬೇಕು ಎಂದರಲ್ಲದೆ ಮಕ್ಕಳಿಗೆ ನೀಡಬೇಕಾದ ಆಹಾರ ಪದ್ಧತಿಗಳ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಗರ್ಭಿಣಿಯರಿಗೆ ಸೀಮಂತ ಮಾಡಿ ಫಲ ತಾಂಬೂಲ ನೀಡಲಾಯಿತು. ಆಶಾ ಕಾರ್ಯಕರ್ತೆ ಸುಮಿತ್ರ, ಸ್ಥಳೀಯರಾದ ಸುರಕ್ಷಾ, ಸ್ವಪ್ನ, ಶಿವರಂಜಿನಿ, ಅಕ್ಷತಾ, ವಿಲ್ಮಾ, ಭುವನ ಮತ್ತಿತರರು ಇದ್ದರು.