

ಉಡುಪಿ: ಪುತ್ರಿಯರಿಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ತಂದೆಗೆ ಜೀವಮಾನ ಕಠಿಣ ಜೈಲು ಶಿಕ್ಷೆ ವಿಧಿಸಿ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯದ ಪೋಕ್ಸೊ ತ್ವರಿತ ವಿಶೇಷ ನ್ಯಾಯಾಲಯದ ನ್ಯಾಯಾಧೀಶೆ ಯಾದವ್ ವನಮಾಲಾ ಆನಂದರಾವ್ ಆದೇಶಿಸಿದ್ದಾರೆ.
ಅಪರಾಧಿ ತನ್ನ ಕಿರಿಯ ಮಗಳಿಗೆ ಲೈಂಗಿಕ ಹಲ್ಲೆ ನಡೆಸುತ್ತಿದ್ದುದನ್ನು ಹಿರಿಯ ಪುತ್ರಿ ವಿರೋಧಿಸುತ್ತಿದ್ದರು. ಅಪರಾಧಿಯ ಪತ್ನಿ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು, ಆಕೆ ಸಾವಿಗೀಡಾದ ಬಳಿಕ ಇಬ್ಬರೂ ಪುತ್ರಿಯರ ಮೇಲೆ ದೌರ್ಜನ್ಯ ಮುಂದುವರಿಸಿದ್ದ. 16 ವರ್ಷದ ಹಿರಿಯ ಮಗಳಿಗೆ ಲೈಂಗಿಕ ದೌರ್ಜನ್ಯ ಬಗ್ಗೆ ಸ್ಥಳೀಯ ಅಂಗನವಾಡಿ ಕಾರ್ಯಕರ್ತೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಗಮನಕ್ಕೆ ತಂದಿದ್ದರು.
ಕಾನೂನು ಪರಿವೀಕ್ಷಣಾಧಿಕಾರಿ ಪ್ರಭಾಕರ ಆಚಾರ್ಯ ಅವರು ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದರು. 2019 ಅಕ್ಟೋಬರ್ ತಿಂಗಳಿನಲ್ಲಿ ಕಾರ್ಕಳ ವೃತ್ತ ಕಚೇರಿ ವ್ಯಾಪ್ತಿಯಲ್ಲಿ ಈ ಪ್ರಕರಣ ದಾಖಲಾಗಿತ್ತು. ಮೊದಲಿಗೆ ಸರ್ಕಲ್ ಇನ್ಸ್‌ಪೆಕ್ಟರ್ ಮಹೇಶ್ ಪ್ರಸಾದ್ ತನಿಖೆ ನಡೆಸಿದ್ದು ಬಳಿಕ ಸಿಪಿಐ ಸಂಪತ್ ಕುಮಾರ್ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ್ದರು. ಒಟ್ಟು 26 ಸಾಕ್ಷಿಗಳ ಪೈಕಿ ಸಂತ್ರಸ್ತ ಸಹೋದರಿಯರು ಹಾಗೂ ದೂರುದಾರರು ಸೇರಿದಂತೆ 8 ಮಂದಿಯನ್ನು ವಿಚಾರಣೆ ನಡೆಸಿದ ನ್ಯಾಯಾಲಯ, ಕೃತ್ಯ ಸಾಬೀತಾಗಿದೆ ಎಂದು ಘೋಷಿಸಿ ಶಿಕ್ಷೆ ಪ್ರಕಟಿಸಿದೆ.
ಉಡುಪಿಯಲ್ಲಿ ಮೊದಲ ಆಜೀವ ಶಿಕ್ಷೆ: ಉಡುಪಿಯಲ್ಲಿ ಪೋಕ್ಸೊ ಪ್ರಕರಣಕ್ಕೆ ಸಂಬಂಧಿಸಿ ಆಜೀವ ಶಿಕ್ಷೆ ನೀಡಿದ ಮೊದಲ ಪ್ರಕರಣ ಇದಾಗಿದೆ. ಅಪರಾಧಿಗೆ ಪೋಕ್ಸೋ ತಿದ್ದುಪಡಿ ಕಾಯ್ದೆ 2019ರಂತೆ ಜೀವಮಾನ ಜೈಲು ಶಿಕ್ಷೆ ವಿಧಿಸಲಾಗಿದೆ. 15,000 ಸಾವಿರ ರೂ, ದಂಡ ಕಟ್ಟದಿದ್ದಲ್ಲಿ 1 ವರ್ಷ ಹೆಚ್ಚುವರಿ ಜೈಲು. ಲೈಂಗಿಕ ದೌರ್ಜನ್ಯಕ್ಕೆ 7 ವರ್ಷ ಕಠಿಣ ಜೈಲು ಶಿಕ್ಷೆ, ಕೊಲೆ ಬೆದರಿಕೆಗೆ 7 ವರ್ಷ ಕಠಿಣ ಜೈಲು ಶಿಕ್ಷೆ, 1ನೇ ನೊಂದ ಬಾಲಕಿಗೆ 5 ಲಕ್ಷ ರೂ. ಪರಿಹಾರ. 2ನೇ ನೊಂದ ಬಾಲಕಿಗೆ 1.5 ಲಕ್ಷ ರೂ. ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶಿಸಿದೆ. ವಿಶೇಷ ಪೋಕ್ಸೊ ನ್ಯಾಯಾಲಯದ ವಿಶೇಷ ಸರ್ಕಾರಿ ಅಭಿಯೋಜಕ ವೈ.ಟಿ ರಾಘವೇಂದ್ರ ಪ್ರಾಸಿಕ್ಯೂಶನ್ ಪರ ವಾದ ಮಂಡಿಸಿದ್ದಾರೆ.