6 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಸಾಬೀತು ಅಪರಾಧಿಗೆ 20 ವರ್ಷ ಕಠಿನ ಸಜೆ ವಿಧಿಸಿದ ನ್ಯಾಯಾಲಯ

Gavel on desk. Isolated with good copy space. Dramatic lighting.
Gavel on desk. Isolated with good copy space. Dramatic lighting.
Published on

ಮಂಗಳೂರು: ಆರು ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಗೆ ಮಂಗಳೂರಿನ ಹೆಚ್ಚುವರಿ ಸತ್ರ ನ್ಯಾಯಾಲಯ ಮತ್ತು ಎಫ್‌ಟಿಎಸ್‌ಸಿ-2 ನ್ಯಾಯಾಲಯವು 20 ವರ್ಷಗಳ ಕಠಿನ ಸಜೆ ವಿಧಿಸಿ ತೀರ್ಪು ನೀಡಿದೆ.


ಹಾವೇರಿ ಜಿಲ್ಲೆಯ ನೆಲೋಗಲ್ ಗ್ರಾಮದ ಬೆನಕರಾಜ್ ಲಮಾಣಿ ಆಲಿಯಾಸ್ ರಾಜ್(25) ಶಿಕ್ಷೆಗೊಳಗಾದವನು. ಈತ ಹೋಮ್‌ನರ್ಸ್ ಆಗಿದ್ದ. ನೊಂದ ಬಾಲಕಿಯ ಅಜ್ಜ ಅಸೌಖ್ಯದಿಂದ ಸುರತ್ಕಲ್ ಪರಿಸರದ ಮನೆಯಲ್ಲಿದ್ದರು. ಅವರನ್ನು ನೋಡಿಕೊಳ್ಳಲು ಆರೋಪಿಯನ್ನು ಕರೆಸಿಕೊಳ್ಳಲಾಗಿತ್ತು. 2022ರ ಜನವರಿಯಲ್ಲಿ ಒಂದು ದಿನ ಬಾಲಕಿಯ ತಾಯಿ ಔಷಧ ತರಲೆಂದು ಮನೆಯಿಂದ ಹೊರಗೆ ಹೋಗಿದ್ದಾಗ ಬಾಲಕಿಯ ಮೇಲೆ ದೌರ್ಜನ್ಯ ಎಸಗಿದ್ದ. ಅಲ್ಲದೆ ಕಚ್ಚಿ ಗಾಯಗೊಳಿಸಿದ್ದ. ಈ ಬಗ್ಗೆ ಮಂಗಳೂರಿನ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇನ್ಸ್‌ಪೆಕ್ಟರ್ ಎಸ್.ಎಚ್.ಭಜಂತ್ರಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.


ವಿಚಾರಣೆ ನಡೆಸಿದ ನ್ಯಾಯಾಧೀಶೆ ಮಂಜುಳಾ ಇಟ್ಟಿ ಅವರು ಅ.5ರಂದು ತೀರ್ಪು ನೀಡಿದ್ದಾರೆ. ಆರೋಪಿಯ ಅಪರಾಧ ಸಾಬೀತಾಗಿರುವ ಹಿನ್ನೆಲೆಯಲ್ಲಿ ಐಪಿಸಿ ಕಲಂ 376 ಮತ್ತು ಪೊಕ್ಸೋ ಕಲಂ 6ರ ಅಡಿಯಲ್ಲಿ 20 ವರ್ಷ ಕಠಿನ ಸಜೆ ಮತ್ತು 25,000 ರೂ. ದಂಡ, ಐಪಿಸಿ ಕಲಂ 323ರಡಿಯಲ್ಲಿ 6 ತಿಂಗಳ ಸಾದಾ ಸಜೆ ಮತ್ತು 1,000 ರೂ. ದಂಡ ವಿಧಿಸಿದ್ದಾರೆ. ಅಲ್ಲದೆ ನೊಂದ ಬಾಲಕಿಗೆ 2 ಲಕ್ಷ ರೂ. ಪರಿಹಾರ ನೀಡುವಂತೆ ಕಾನೂನು ಸೇವಾ ಪ್ರಾಧಿಕಾರಕ್ಕೆ ಆದೇಶ ನೀಡಿದ್ದಾರೆ. ಅಭಿಯೋಜನಾ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ವೆಂಕಟರಮಣ ಸ್ವಾಮಿ ಸಿ. ವಾದಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net